ಬೆಂಗಳೂರು ಪೌರಾಡಳಿತ ನಿರ್ದೇಶನಾಲಯ ಸೂಚನೆ ಹಿನ್ನಲೆಯಲ್ಲಿ ನಡೆದ ಸಭೆ
ಶೇ 3 ರಷ್ಟು ತೆರಿಗೆ ಹೆಚ್ಚಿಸಲು ನಿರ್ಧಾರ, ಆದರೆ ತೆರಿಗೆ ಕಟ್ಟಲು ಬಾಕಿ ಇರುವವರ ಪಟ್ಟಿ ತರಿಸಿ ಮುಂದಿನ ಸಭೆಯಲ್ಲಿ ಅನುಷ್ಠಾನ ಗೊಳಿಸುವಂತೆ ಪ್ರತಿ ಪಕ್ಷ ಸದಸ್ಯರ ಆಗ್ರಹ
ಬೆಂಗಳೂರು ಪೌರಾಡಳಿತ ನಿರ್ದೇಶನಾಲಯ ಸೂಚನೆ ಮೇರೆಗೆ ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯಲ್ಲಿ 2025-26 ನೇ ಸಾಲಿನ ಆಸ್ತಿ ತೆರಿಗೆ ದರ ಶೇ 3 ರಿಂದ ಶೇ 5 ರಷ್ಟು ಏರಿಸುವ ಕುರಿತು ವಿಶೇಷ ಸಾಮಾನ್ಯ ಸಭೆ ಮಾ 11 ರಂದು ನಗರ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಯವರು ವಹಿಸಿದ್ದರು.
ವೇದಿಕೆಯಲ್ಲಿ ಉಪಾಧ್ಯಕ್ಷ ಬುದ್ಧ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷೆ ಕಿಶೋರಿ ಶೇಟ್, ಮುಖ್ಯಾಧಿಕಾರಿ ಸುಧಾಕರ್ ಉಪಸ್ಥಿತರಿದ್ದರು.
ಸಭೆಯಲ್ಲಿ ಆಡಳಿತ ಸಮಿತಿಯ ಸದಸ್ಯರು ಗಳಾದ ವಿನಯ ಕುಮಾರ್ ಕಂದಡ್ಕ,ಸರೋಜಿನಿ ಪೆಲ್ತಡ್ಕ,ಶಿಲ್ಪಾ ಸುದೇವ್,ಶೀಲಾ ಅರುಣಾ ಕುರುಂಜಿ,ಸುಶೀಲ ಜಿನ್ನಪ್ಪ ,ನಾರಾಯಣ ಶಾಂತಿನಗರ ಸುಧಾಕರ್, ಬಾಲಕೃಷ್ಣ ರೈ, ಪ್ರತಿ ಪಕ್ಷದ ಸದಸ್ಯರು ಗಳಾದ ವೆಂಕಪ್ಪ ಗೌಡ, ಬಾಲಕೃಷ್ಣ ಭಟ್ ಕೊಡಂಕೇರಿ, ಶರೀಫ್ ಕಂಠಿ, ಉಮ್ಮರ್ ಕೆ ಎಸ್, ನಾಮ ನಿರ್ದೇಶನ ಸದಸ್ಯರುಗಳಾದ ರಾಜು ಪಂಡಿತ್, ಭಾಸ್ಕರ್ ಪೂಜಾರಿ ಸಭೆಯಲ್ಲಿ ಭಾಗವಹಿಸಿದ್ದರು.

ಸಭೆ ಆರಂಭದಲ್ಲಿ ಬೆಂಗಳೂರು ಪೌರಾಡಳಿತ ನಿರ್ದೇಶನಾಲಯ ದಿಂದ ಬಂದಿರುವ ಸೂಚನಾ ಪತ್ರ ವನ್ನು ವಾಚಿಸಿದ ಮುಖ್ಯಾಧಿ ಕಾರಿ ಸುಧಾಕರ್ ರವರು ‘ಕರ್ನಾಟಕ ಸ್ಯಾಂಪ್ ಅಧಿನಿಯಮ 1957 ರಂತೆ ಪ್ರಕರಣ 45 ಬಿ ರನ್ನಯ ಪ್ರಕಟಿಸಲಾದ ಮಾರುಕಟ್ಟೆ ಮಾರ್ಗಸೂಚಿ ಬೆಲೆಗಳ ಪರಿಷ್ಕರಣೆಯಂತೆ ಆಸ್ತಿ ತೆರಿಗೆ ನಿರ್ಧರಣೆ ಮಾಡಬೇಕಾಗಿದ್ದು, 2025-26 ನೇ ಸಾಲಿಗೆ (ಅಂದರೆ 2024-25 ನೇ ಸಾಲಿನ ಆಸ್ತಿ ತೆರಿಗೆ ನಿಗದಿ ಮಾಡಿದ ನಂತರ) ಮಾರುಕಟ್ಟೆ ಮಾರ್ಗಸೂಚಿ ಬೆಲೆಗಳ ಪರಿಷ್ಕರಣೆಯಾಗಿದ್ದಲ್ಲಿ ಸದರಿ ಮಾರ್ಗಸೂಚಿ ಬೆಲೆಗಳನ್ನು 2025-26 ನೇ ಸಾಲಿಗೆ ಅಳವಡಿಸಿಕೊಳ್ಳುವುದು, ಹಾಗೂ 2025-26 ನೇ ಸಾಲಿಗೆ ಮಾರುಕಟ್ಟೆ ಮಾರ್ಗಸೂಚಿ ಬೆಲೆಗಳು ಪರಿಷ್ಕರಣೆ ಆಗದಿದ್ದಲ್ಲಿ ಕರ್ನಾಟಕ ಪೌರ ನಿಗಮಗಳ ಅಧಿನಿಯಮ 1976 ಮತ್ತು ಕರ್ನಾಟಕ ಪೌರಸಭೆಗಳ ಅಧಿನಿಯಮ 1964 ರಲ್ಲಿನ ಅವಕಾಶದಂತೆ 2024-25 ನೇ ಸಾಲಿನ ಆಸ್ತಿ ತೆರಿಗೆ ಮೊತ್ತದ ಶೇ.3 ರಿಂದ ಶೇ.5 ರ ವರೆಗೆ ಆಸ್ತಿ ತೆರಿಗೆ ಹೆಚ್ಚಳ ಮಾಡಲು ಅಗತ್ಯ ಕ್ರಮವಹಿಸಿ ಆಸ್ತಿ ತೆರಿಗೆ ಕ್ಯಾಲ್ಕು ಲೇಟರ್ ನಲ್ಲಿ ಸದರಿ ವಿವರಗಳನ್ನು ಮಾರ್ಚ್ 2025 ರೊಳಗೆ ಕಾಲೋಚಿತಗೊಳಿಸಲು ನಿರ್ದೇಶಿಸಿದೆ.
ಉಲ್ಲೇಖಿತ ಅಧಿಸೂಚನೆ/ಸುತ್ತೋಲೆಯನ್ನಯ ತುರ್ತಾಗಿ ಕ್ರಮವಹಿಸಲು ನಿರ್ದೇಶಿಸಿದೆ ಹಾಗೂ ಯೋಜನಾ ನಿರ್ದೇಶಕರು ತಮ್ಮ ಜಿಲ್ಲಾ ವ್ಯಾಪ್ತಿಯ ನಗರ ಸ್ಥಳೀಯ ಸಂಸ್ಥೆಗಳು ಆಸ್ತಿ ತೆರಿಗೆ ಪರಿಷ್ಕರಣೆ ಕುರಿತು ಸುತ್ತೋಲೆಯನ್ವಯ ಕ್ರಮ ಕೈಗೊಂಡಿರುವ ಬಗೆ, ಖಚಿತ ಪಡಿಸಿಕೊಂಡು ಪೌರಾಡಳಿತ ನಿರ್ದೇಶನಾಲಯಕ್ಕೆ ಅನುಸರಣಾ ವರದಿ ಸಲ್ಲಿಸಲು ತಿಳಿಸಿರುವ ಬಗ್ಗೆ ಪತ್ರದ ವಿವರವನ್ನು ನೀಡಿದರು.

ಈ ವೇಳೆ ಮಾತನಾಡಿದ ವಿಪಕ್ಷ ಸದಸ್ಯ ಎಂ ವೆಂಕಪ್ಪ ಗೌಡ ಕನಿಷ್ಠ ದರ ಶೇ.3 ಆಸ್ತಿ ತೆರಿಗೆ ಹೆಚ್ಚಿಸ ಬಹುದು ಅಲ್ಲದೆ ಗರಿಷ್ಠ ಶೇ 5 ದರ ಬೇಡ ಎಂದು ಸಲಹೆ ನೀಡಿದರು. ಬಳಿಕ ಮಾತನಾಡಿ ಮೊದಲು ತೆರಿಗೆ ಪಾವತಿಗೆ ಬಾಕಿ ಇರುವವರ ಪಟ್ಟಿಯನ್ನು ಮೊದಲು ಮಾಡಿ. ತೆರಿಗೆ ಕಟ್ಟುವವರು ಕಟ್ಟುತ್ತಲೇ ಇದ್ದಾರೆ. ಅಲ್ಲದವರು ಹಾಗೇ ಕಾಲ ಕಳೆಯುತ್ತಿದ್ದಾರೆ. ಇದು ಸರಿಯಲ್ಲ. ನಿಯಮ ಎಲ್ಲರಿಗೂ ಅನ್ವಯವಿದೆ. ಆದ್ದರಿಂದ ಮೊದಲು ನಮ್ಮ ಕಚೇರಿಯ ಅದಕ್ಕೆ ಸಂಬಂಧಿಸಿದ ಸಿಬ್ಬಂದಿಗಳು ತೆರಿಗೆ ಕಟ್ಟದೆ ಇರುವವರ ಪಟ್ಟಿಯನ್ನು ಮಾಡಲಿ. ಅದು ಮುಂದಿನ ಸಭೆಗೆ ಮೂರು ನಾಲ್ಕು ದಿನಗಳ ಮೊದಲು ರೆಡಿ ಮಾಡಿ ನೀಡಲಿ. ನೀಡಿದ ಬಳಿಕ ಹೊಸ ತೆರಿಗೆ ಅನುಷ್ಠಾನಕ್ಕೆ ಮುಂದಿನ ಸಭೆಯಲ್ಲಿ ನಿರ್ಣಯ ಕೈ ಗೋಳ್ಳೋಣ ಎಂದರು.
ಬಳಿಕ ಸಿಬ್ಬಂದಿ ಶಶಿಕಲಾ ರವರ ಬಳಿ ಈ ಪಟ್ಟಿ ಯನ್ನು ಯಾವಾಗ ನೀಡಬಹುದು ಎಂದು ಕೇಳಿದಾಗ ಅವರು ಮುಂದಿನ ಸಭೆಯ ಮೊದಲು ನೀಡುವುದಾಗಿ ಹೇಳಿದರು.ಇದಕ್ಕೆ ಎಲ್ಲಾ ಸದಸ್ಯರು ಒಪ್ಪಿಗೆ ಸೂಚಿಸಿದರು.
ಸದಸ್ಯ ಕೆ.ಎಸ್. ಉಮ್ಮರ್ ಮಾತನಾಡಿ ‘ ಶೇ.3 ತೆರಿಗೆ ಹೆಚ್ಚಳದಿಂದ 7.50 ಲಕ್ಷ ಅಧಿಕ ಹೊರೆ ಬಂದರೂ ಬಿಖಾತೆ, ಎ ಖಾತೆ ನೀಡುವುದರಿಂದ ಸರಕಾರ ಜನರಿಗೆ 20 ಲಕ್ಷದ ತೆರಿಗೆ ಹೊರೆ ಕಡಿಮೆ ಮಾಡುತಿದೆ ಎಂದು ಹೇಳಿದರು. ಇದಕ್ಕೆ ಉತ್ತರಿಸಿದ ನ.ಪಂ.ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಮಾತನಾಡಿ ಈ ಬಾರಿ 20 ಲಕ್ಷ ಕಡಿಮೆ ಆಗುವುದಿಲ್ಲ. ಈ ಬಾರಿ ಡಬಲ್ ಟ್ಯಾಕ್ಸ್ ಸಂಗ್ರಹಿಸಿ ಬಿ ಖಾತೆ ನೀಡುತ್ತೇವೆ.
ಮುಂದಿನ ವರ್ಷದಿಂದ ಸಕ್ರಮಗೊಂಡು ತೆರಿಗೆ ಕಡಿಮೆ ಆಗಬಹುದಷ್ಟೇ ಎಂದು ಹೇಳಿದರು.ಏಪ್ರಿಲ್‌ನಲ್ಲಿ ತೆರಿಗೆ ಪಾವತಿಸಿದರೆ ಶೇ.5ರಷ್ಟು ರಿಯಾಯಿತಿ ನೀಡಲಾಗುವುದು, ಮೇ ಮತ್ತು ಜೂನ್ ತಿಂಗಳಲ್ಲಿ ದಂಡನೆ ರಹಿತ ಪಾವತಿ , ಜುಲೈ ತಿಂಗಳಿನಿಂದ ಶೇ 2 ದಂಡನೆ ವಿಧಿಸಲಾಗುವುದು ಎಂದು ಮುಖ್ಯಾಧಿಕಾರಿ ಸುಧಾಕರ ಎಂ.ಎಚ್ ತಿಳಿಸಿದರು.
ಸಭೆಯಲ್ಲಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಯ ಕುರಿತು ಚರ್ಚೆ ನಡೆಯಿತು.
ಎರಡು ದಿನಗಳಿಂದ ನಗರದಲ್ಲಿ ಕುಡಿಯುವ ನೀರಿನ ಸರಬರಾಜು ಸ್ಥಗಿತಗೊಂಡಿರುವ ಬಗ್ಗೆ ಕೆ.ಎಸ್.ಉಮ್ಮರ್ ಮತ್ತು ವೆಂಕಪ್ಪ ಗೌಡ ಸಭೆಯ ಗಮನ ಸೆಳೆದರು.ಬಿಸಿಲಿನ ತಾಪಮಾನ ಹೆಚ್ಚಾಗಿದೆ. ಇಲ್ಲಿ ಕುಡಿಯುವ ನೀರಿಗೆ ಜನರು ಪರದಾಡುವಂತೆ ಆಗಿದೆ.ಲಕ್ಷಾಂತರ ರೂ ಖರ್ಚು ಮಾಡಿ ಜನರೇಟರ್ ಖರೀದಿಸಿದರೂ ಅದನ್ನು ಯಾಕೆ ಉಪಯೋಗಿಸುತ್ತಿಲ್ಲ, ಅದು ಯಾಕೆ ದುರಸ್ತಿ ಮಾಡಿಲ್ಲ ಎಂದು ಅವರು ಪ್ರಶ್ನಿಸಿದರು.
ಈ ಸಂಧರ್ಭ ಸದಸ್ಯ ವಿನಯ ಕುಮಾರ್ ಕಂದಡ್ಕರವರು ‘ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನರೇಟರ್ ಹಾಳಾಗಿದೆ ಎಂದು ಹೇಳಿದರು. ನೆರೆ ನೀರು ನುಗ್ಗಿ ಜನರೇಟರ್ ಹಾಳಾಗಿದ್ದು ಅದನ್ನು ದುರಸ್ತಿ ಮಾಡದೆ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಅವರು ಹೇಳಿದರು.
ಈ ವೇಳೆ ಇದರ ದುರಸ್ಥಿಗೆ 2 ಲಕ್ಷ ರೂ ಬೇಕಾಗಿದೆ ಎಂದು ಸರಿ ಪಡಿಸಲು ಬಂದವರು ಹೇಳಿದ್ದಾರೆ ಎಂದು ಮುಖ್ಯ ಅಧಿಕಾರಿ ಯವರು ಸಭೆಗೆ ತಿಳಿಸಿದರು.
ಈ ಬಗ್ಗೆ ಕೂಡಲೇ ಕ್ರಮ ಕೈ ಗೊಂಡು ನೀರಿನ ಸಮಸ್ಯೆಗೆ ಮೊದಲು ಸ್ಪಂದಿಸಿ ಎಂದು ಸದಸ್ಯರು ಆಗ್ರಹಿದರು.
ಬಳಿಕ ಸಭೆಯನ್ನು ಮುಕ್ತಾಯ ಗೊಳಿಸಲಾಯಿತು.