ಅದ್ದೂರಿ ಮಹೋತ್ಸವಕ್ಜೆ ಸಾಕ್ಷಿಯಾದ ಸಹಸ್ರಾರು ಭಕ್ತರು…!
ಭಕ್ತರಿಗೆ ಅಭಯ ನೀಡಿ ಹರಸಿದ ಶ್ರೀ ತೊಂಡಚ್ಚನ್ ದೈವ…!

ಸುಮಾರು 300 ವರ್ಷಗಳ ಇತಿಹಾಸವಿರುವ ಅರಂಬೂರು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ನಾಲ್ಕು ದಿನಗಳ ಕಾಲ ನಡೆದ ವೈಭವೋಪೇತ ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವವು ಮಾ.19 ರ ಪ್ರಾತ:ಕಾಲದಲ್ಲಿ ಸಂಪನ್ನಗೊಂಡಿತು.

ಕಲಿಯುಗದಲ್ಲಿ ಪ್ರತ್ಯಕ್ಷ ದೈವವಾಗಿ ಭಕ್ತರನ್ನು ಹರಸುವ ಅತ್ಯಂತ ಕಾರಣಿಕ ಶಕ್ತಿಯಾಗಿರುವ ಶ್ರೀ ವಯನಾಟ್ ಕುಲವನ್ ದೈವ ಅವತರಿಸಿ ನೆರೆದ ಸಾವಿರಾರು ಭಕ್ತರನ್ನು ಹರಿಸಿದ್ದು, ನೆರೆದ ಭಕ್ತ ಸಮೂಹ ಭಕ್ತಿ ಭಾವದಿಂದ ದೈವವನ್ನು ಕಣ್ತುಂಬಿಕೊಂಡರು. ಭೂಮಿಯಲ್ಲಿ ಅವತರಿಸಿದ ಚೈತನ್ಯ ಮೂರ್ತಿ ಪರಮಶಿವನ ಅಂಶಾವತಾರ ಶ್ರೀ ವಯನಾಟ್ ಕುಲವನ್ ದೈವದ ಅನುಗ್ರಹ ಪಡೆದು ಸಾವಿರಾರು ಭಕ್ತರು ಪುನೀತರಾದರು. ಶ್ರೀ ವಯನಾಟ್ ಕುಲವನ್ ದೈವ ಹಾಗೂ ಶ್ರೀ ವಿಷ್ಣುಮೂರ್ತಿ ದೈವಗಳ ಕೋಲವು ಮಾ.18 ರಂದು ಮುಸ್ಸಂಜೆ ಸಮಯದಲ್ಲಿ ಜೊತೆಯಾಗಿ ನಡೆಯುವುದರೊಂದಿಗೆ ಅರಂಬೂರು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ನಾಲ್ಕು ದಿನಗಳ ಕಾಲ ನಡೆದ ವೈಭವೋಪೇತ ಮಹೋತ್ಸವವು ದೈವಸ್ಥಾನದಲ್ಲಿ ಮಾ.19 ರ ಪ್ರಾತ:ಕಾಲದಲ್ಲಿ ಕೈವೀದ್ ನಡೆದು ಸಂಪನ್ನಗೊಂಡಿತು.
ಮಾ.15 ರಿಂದ ಪ್ರಾರಂಭಗೊಂಡ ಉತ್ಸವದಲ್ಲಿ ತುಳುನಾಡಿನ ದೈವರಾಧನೆಗೆ ಸಂಬಂಧಿಸಿದ ತುಳು ದೈವಗಳ ಕೋಲವು ನಡೆದು ಮಾ.17
ರಿಂದ ಕಾರ್ನವನ್ ದೈವ,ಕೋರಚ್ಚನ್ ದೈವ,ಕಂಡನಾರ್ ಕೇಳನ್ ದೈವ, ವಯನಾಟ್ ಕುಲವನ್ ದೈವದ ವೆಳ್ಳಾಟಂ ರಾತ್ರಿ ವೇಳೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಶ್ರೀ ದೈವಗಳ ವೆಳ್ಳಾಟಂ ವೀಕ್ಷಿಸಲು ರಾಜ್ಯ ಹೊರ ರಾಜ್ಯಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿದ್ದರು. ಮರುದಿನ ಬೆಳಗ್ಗೆ ಶ್ರೀ ದೈವಗಳ ನರ್ತನ ಸೇವೆಯಾಗಿ ಸಂಜೆ ಶ್ರೀ ವಯನಾಟ್ ಕುಲವನ್ ದೈವದ ಅಂಗಣ ಪ್ರವೇಶವಾಯಿತು. ಅಂಗಣ ಪ್ರವೇಶಿಸಿದ ವಯನಾಟ್ ಕುಲವನ್ ದೈವಕ್ಕೆ ಸೂಟೆ ಸಮರ್ಪಣೆ ಮಾಡಲಾಯಿತು.
ಈ ವೇಳೆಯಲ್ಲಿ ದೈವಸ್ಥಾನದ ಎದುರು ಭಾಗದಲ್ಲಿ ಶ್ರೀ ವಿಷ್ಣುಮೂರ್ತಿ ದೈವದ ಕೋಲವು ಆರಂಭಗೊಂಡಿತು.
ಬಳಿಕ ವಿಷ್ಣುಮೂರ್ತಿ ದೈವ ಮರಕಳಕ್ಕೆ ಪ್ರವೇಶ ಮಾಡಿ ವಯನಾಟ್ ಕುಲವನ್ ದೈವದೊಡನೆ ಸಂಭಾಷಣೆ ಮಾಡುವ ಅಪೂರ್ವವಾದ ಸನ್ನಿವೇಶ ವನ್ನು ಭಕ್ತರು ಕಣ್ತುಂಬಿಕೊಂಡರು.

ಆಗಮಿಸಿದ ಸಾವಿರಾರು ಮಂದಿ ಭಕ್ತರು ದೈವದ ಅರಸಿನ ಪ್ರಸಾದ ಮತ್ತು ಅನ್ನ ಪ್ರಸಾದವನ್ನು ಸ್ವೀಕರಿಸಿದರು. ಕುತ್ತಿಕೋಲು ಶ್ರೀ ತಂಬುರಾಟ್ಟಿ ಭಗವತಿ ಕ್ಷೇತ್ರದ ಸ್ಥಾನಿಕರು, ಮಹೋತ್ಸವ ಸಮಿತಿ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ಪ್ರಧಾನ ಕಾರ್ಯದರ್ಶಿ ಪವಿತ್ರನ್ ಗುಂಡ್ಯ, ಆಡಳಿತ ಸಮಿತಿ ಅಧ್ಯಕ್ಷ ನಾರಾಯಣ ಬಾರ್ಪಣೆ, ಕೋಶಾಧಿಕಾರಿ ರಧೀಶನ್ ಅರಂಬೂರು, ಜತ್ತಪ್ಪ ರೈ ಅರಂಬೂರು, ಕುಟುಂಬದ ಯಜಮಾನ ಕುಂಞಕಣ್ಣ ಎ,ಕಾರ್ಯಾಧ್ಯಕ್ಷರುಗಳು ಮತ್ತು ಸಮಿತಿ ಪದಾಧಿಕಾರಿಗಳು,
ಗ್ರಾಮದ ತರವಾಡು ಮನೆಯ ಕುಟುಂಬಸ್ಥರು, ತೀಯ ಸಮಾಜ ಬಾಂಧವರು ಉಪಸ್ಥಿತರಿದ್ದರು. ಮಹೋತ್ಸವದ ಉಪ ಸಮಿತಿಯ ಸಂಚಾಲಕರು ಮತ್ತು ಸರ್ವ ಸದಸ್ಯರು, ಸ್ಥಳೀಯ ಸಂಘ ಸಂಸ್ಥೆಗಳ ಸದಸ್ಯರು ಮಹೋತ್ಸವದ ಯಶಸ್ವಿಗೆ ಅವಿರತವಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದರು. ಮಹೋತ್ಸವವು ಅತ್ಯಂತ ಯಶಸ್ವಿಯಾಗಿ ಅಚ್ಚು ಕಟ್ಟಾದ ವ್ಯವಸ್ಥೆ ಯೊಂದಿಗೆ ಜರುಗಿ ಐತಿಹಾಸಿಕ ಉತ್ಸವಕ್ಕೆ ಸಾಕ್ಷಿಯಾಯಿತು.
