ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷರಾಗಿರುವ ಬಿ.ವೈ.ವಿಜಯೇಂದ್ರರು ಮೇ.೧೭ರಂದು ಸುಳ್ಯಕ್ಕೆ ಬರಲಿದ್ದಾರೆ.
ಸುಳ್ಯ ಜಯನಗರದ ಶ್ರೀ ನಾಗಬ್ರಹ್ಮ ಆದಿಮೊಗೇರ್ಕಳ ದೈವಸ್ಥಾನ ಶ್ರೀ ಗುಳಿಗ ದೈವ ಹಾಗೂ ಕೊರಗಜ್ಜ ದೈವಸ್ಥಾನದಲ್ಲಿ ನಡೆಯುವ ಕೊರಗಜ್ಜ ದೈವದ ನೇಮ ಮತ್ತು ಪರಿವಾರ ದೈವಗಳ ತಂಬಿಲ ಸೇವೆಯಲ್ಲಿ ಬಿ.ವೈ. ವಿಜಯೇಂದ್ರರು ಭಾಗವಹಿಸಲಿದ್ದಾರೆ ಎಂದು ದೈವಸ್ಥಾನದ ಸಂಚಾಲಕರಾಗಿರುವ ಜಿ.ಜಗನ್ನಾಥ ಜಯನಗರ ತಿಳಿಸಿದ್ದಾರೆ.
ನರೇಂದ್ರ ಮೋದಿಯವರು ೩ ನೇ ಬಾರಿ ಪ್ರಧಾನಿಗಳಾಗಿ ಸರಕಾರ ನಡೆಸಬೇಕೆಂದು ಭಾರತೀಯ ಜನತಾ ಪಾರ್ಟಿ ಜಯನಗರ ಬೂತ್ ಸಮಿತಿಯವರು ಸಾನಿಧ್ಯದಲ್ಲಿ ಸಂಕಲ್ಪ ಮಾಡಿಕೊಂಡ ವಿಶೇಷ ಹರಕೆಯ ಶ್ರೀ ಕೊರಗಜ್ಜ ದೈವದ ನೇಮ ಮತ್ತು ಪರಿವಾರ ದೈವಗಳಿಗೆ ತಂಬಿಲ ಸೇವೆ ಮೇ.೧೭ರಂದು ನಡೆಯಲಿದೆ. ಈ ದೈವ ಕಾರ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರು ಭಾಗವಹಿಸಲಿದ್ದಾರೆ. ಸಂಸದರಾದ ಕ್ಯಾ.ಬ್ರಿಜೇಶ್ ಚೌಟ ಸಹಿತ ಹಲವು ಗಣ್ಯರು ಭಾಗವಹಿಸಲಿದ್ದಾರೆ. ನೇಮೋತ್ಸವ ಬಳಿಕ ಶ್ರೀ ದೈವದ ಕರಿಗಂಧ ಪ್ರಸಾದವನ್ನು ಸಂಸದರಾದ ಕ್ಯಾ. ಬ್ರಿಜೇಶ್ ಚೌಟರ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ತಲುಪಿಸಲಾಗುವುದು ಎಂದು ಜಗನ್ನಾಥ ಜಯನಗರ ತಿಳಿಸಿದ್ದಾರೆ.


