ಕಳೆದ 60 ವರ್ಷಗಳಿಂದ ರಾಷ್ಟ್ರೀಯ ದಿನಾಚರಣೆಗಳಂದು ಮನೆಯ ಮುಂಭಾಗ ಧ್ವಜ ಹಾರಿಸುತ್ತಿದ್ದಾರೆ
1971 ರ ಭಾರತ – ಪಾಕ್ ಯುದ್ಧದ ಸಂದರ್ಭದಲ್ಲೂ ಧ್ವಜಾರೋಹಣ ಮಾಡಿದ್ದರು
ಕಾಶ್ಮೀರದಲ್ಲಿ ಪ್ರವಾಸಿಗಳನ್ನು ಹತ್ಯೆಗೈದ ಪಾಕ್ ಉಗ್ರರ ಹುಟ್ಟಡಗಿಸಲು ಪ್ರತೀಕಾರವಾಗಿ ಕಾರ್ಯಾಚರಣೆ ನಡೆಸುತ್ತಿರುವ ಭಾರತ ಸೇನೆಯ ಅಭಿಮಾನದ ಸಂಕೇತವಾಗಿ ಇಲ್ಲೊಬ್ಬರು ಪ್ರತಿ ದಿನ ಮನೆ ಎದುರು ರಾಷ್ಟ್ರ ಧ್ವಜ ಹಾರಿಸಿ ದೇಶಾಭಿಮಾನ ಮೆರೆಯುತ್ತಿದ್ದಾರೆ. ಸಮಾಜ ಸೇವಕ , ಸಂಘಟಕ , ಅರಂಬೂರಿನ ಸಿ.ಎಚ್. ಪ್ರಭಾಕರ ನಾಯರ್ ಅವರು ಕಳೆದ ಮೂರು ದಿನಗಳಿಂದ ತಮ್ಮ ಮನೆ ಎದುರು ನಿಯಮಗಳನ್ನು ಪಾಲಿಸಿ ರಾಷ್ಟ್ರ ಧ್ವಜ ಹಾರಿಸುತ್ತಿದ್ದಾರೆ.

ಬೆಳಗ್ಗೆ ಧ್ವಜ ಹಾರಿಸಿ ಹೂವು ಹಾಕಿ ಸೆಲ್ಯೂಟ್ ಸಲ್ಲಿಸುವ ಅವರು ಸಂಜೆ ಧ್ವಜಾವರೋಹಣ ಮಾಡುತ್ತಿದ್ದು, ಪಾಕ್ ಉಗ್ರರ ಹುಟ್ಟಡಗಿಸಿ ವಿಜಯ ದುಂಧುಬಿ ಮೊಳಗಿಸುವವರೆಗೆ ಧ್ವಜ ಹಾರಿಸುವುದಾಗಿ ಹೇಳಿದ್ದಾರೆ.

ಕಳೆದ ಅರವತ್ತು ವರ್ಷಗಳಿಂದ ರಾಷ್ಟ್ರೀಯ ದಿನಾಚರಣೆಗಳಾದ. ಸ್ವಾತಂತ್ರ್ಯ ದಿನಾಚರಣೆ, ಪ್ರಜಾ ಪ್ರಭುತ್ವ ದಿನಾಚರಣೆ, ಗಾಂಧಿ ಜಯಂತಿಯಂದು ಮನೆಯಲ್ಲಿ ಧ್ವಜ ಹಾರಿಸುತ್ತಿರುವ ಪ್ರಭಾಕರ ನಾಯರ್ ತಾನು ಆರನೇ ತರಗತಿಯಲ್ಲಿರುವಾಗಲೇ ಈ ದೇಶ ಕಾರ್ಯ ನಡೆಸುತ್ತಿದ್ದಾರೆ.
1971 ರಲ್ಲಿ ಇಂಡಿಯಾ ಪಾಕಿಸ್ಥಾನ ಯುದ್ಧದ ಸಂದಭರ್ದಲ್ಲೂ ಆಗಿನ ಹುಲ್ಲಿನ ಮನೆಯಲ್ಲೂ ಪ್ರತಿದಿನ ರಾಷ್ಟ್ರಧ್ವಜ ಹಾರಿಸುತ್ತಿದ್ದ ಅವರು ಭಾರತ ಗೆಲ್ಲುವವರೆಗೂ ಧ್ವಜ ಹಾರಿಸಿದ್ದರು.
ಪ್ರತಿನಿತ್ಯ ಕುರುಂಜಿ ಭಾಗ್ ನಲ್ಲಿ ನಡೆಸುತ್ತಿದ್ದ ಸ್ವಚ್ಛತಾ ಕಾರ್ಯದ ಕಾರಣದಿಂದಲೂ ಪ್ರಭಾಕರ ನಾಯರ್ ಮಾದರಿಯಾಗಿದ್ದರು.