ಇದುವರೆಗೂ ನೋಡುವವರಿಲ್ಲ, ಕೇಳುವವರಿಲ್ಲ!

ಸೋಣಂಗೇರಿ ಸಮೀಪ ಅಂಗನವಾಡಿ ಕೇಂದ್ರದ ಪಕ್ಕದ ಮುಖ್ಯರಸ್ತೆಯ ಬದಿಯಲ್ಲಿ ಬೋರ್‌ವೆಲ್ ಬಾವಿಯೊಂದು ಬಾಯ್ತೆರೆದು ಬಲಿಗಾಗಿ ಕಾಯುತ್ತಿದೆ. ಈ ಭಾಗದಲ್ಲಿ ರಸ್ತೆ ಅಗಲಗೊಳ್ಳುವ ಮೊದಲು ಅಂಗನವಾಡಿ ಮತ್ತಿತರ ಕಡೆಗೆ ನೀರೊದಗಿಸುವ ಸಾರ್ವಜನಿಕ ಬೋರೊಂದು ರಸ್ತೆ ಬದಿಯಲ್ಲಿತ್ತು.

ಕಳೆದ ವರ್ಷ ಈ ರಸ್ತೆಯನ್ನು ಅಗಲಗೊಳಿಸಿ ಅಭಿವೃದ್ದಿ ಪಡಿಸುವ ವೇಳೆ ಈ ಬೋರ್‌ವೆಲ್ ಮುಚ್ಚದೆ ಅದಕ್ಕೆ ರಿಂಗ್ ಅಳವಡಿಸಿ ಬಾವಿಯಂತೆ ಮಾಡಿ ಮೇಲ್ಗಡೆ ಸಿಮೆಂಟ್‌ನ ಸ್ಲ್ಯಾಬ್ ಮುಚ್ಚಲಾಗಿತ್ತು. ನಿನ್ನೆ ಸಂಜೆ ಲಾರಿಯೊಂದು ಡಾಮರು ರಸ್ತೆಯಿಂದ ಕೆಳಗಿಳಿದು ಸಾಗುತ್ತಿರುವಾಗ ಈ ಬೋರ್‌ವೆಲ್ ಬಾವಿಗೆ ಅಳವಡಿಸಿದ ಸ್ಲ್ಯಾಬ್ ಮುರಿದು ಲಾರಿಯ ಚಕ್ರ ಬಾವಿಯೊಳಗೆ ಸಿಲುಕಿಕೊಂಡಿತು. ಕ್ರೇನ್ ತರಿಸಿ ಲಾರಿಯನ್ನು ಮೇಲಕ್ಕೆತ್ತಲಾಯಿತು. ಆದರೆ ಬಾಯ್ತೆರೆಯಲ್ಪಟ್ಟ ಆ ಬಾವಿ ಡಾಮರಿಗೆ ತಾಗಿಕೊಂಡು ಹಾಗೆಯೇ ಇದೆ. ಅಪಾಯಕಾರಿ ಸ್ಥಿತಿಯಲ್ಲಿರುವ ಈ ಬೋರ್‌ವೆಲ್ ಬಾವಿಗೆ ಸ್ಥಳೀಯರು ಗಿಡದ ಗೆಲ್ಲನ್ನು ಮುರಿದು ಇರಿಸಿ ಯಾರೂ ಬೀಳದಂತೆ ಜಾಗ್ರತೆ ವಹಿಸಿದ್ದಾರೆ. ಆದರೆ ಲೋಕೋಪಯೋಗಿ ಇಲಾಖೆಯವರು ವಿಷಯ ತಿಳಿದಿದ್ದರೂ ಇದುವರೆಗೆ ಸ್ಥಳಕ್ಕೆ ಭೇಟಿ ಕೊಟ್ಟಿಲ್ಲ… ಬಾವಿಯನ್ನು ಮುಚ್ಚುವ ವ್ಯವಸ್ಥೆಯನ್ನೂ ಮಾಡಿಲ್ಲ…