ಸಮಾಜವನ್ನು ಮಾರಕವಾಗಿ ಬಾಧಿಸುತ್ತಿರುವ ಮಾದಕ ವ್ಯಸನದ ವಿರುದ್ಧ ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ಹಮ್ಮಿಕೊಂಡಿರುವ ಅಭಿಯಾನದ ಭಾಗವಾಗಿ ಪೇರಡ್ಕ ತೆಕ್ಕಿಲ್ ಮುಹಮ್ಮದ್ ಹಾಜಿ ಮೆಮೊರಿಯಲ್ ತಖ್ವಿಯತುಲ್ ಇಸ್ಲಾಂ ಮದ್ರಸಾ ಮತ್ತು ಹಯಾತುಲ್ ಇಸ್ಲಾಂ ಮದ್ರಸಾ ಗೂನಡ್ಕ ಇದರ ವಠಾರದಲ್ಲಿ ವಿದ್ಯಾರ್ಥಿಗಳ ವಿಶೇಷ ಅಸೆಂಬ್ಲಿ, ಪ್ರತಿಜ್ಞಾ ಸ್ವೀಕಾರ ಮತ್ತು ಮಾದಕ ದ್ರವ್ಯಗಳ ಸಂಪೂರ್ಣ ನಿಷೇಧಕ್ಕೆ ಆಗ್ರಹಿಸಿ ಮುಖ್ಯಮಂತ್ರಿಗೆ ಸಲ್ಲಿಸುವ ಮನವಿ ಪತ್ರಕ್ಕೆ ಸಹಿ ಸಂಗ್ರಹ ಕಾರ್ಯಕ್ರಮವು ನಡೆಯಿತು. ಸ್ಥಳೀಯ ಖತೀಬರಾದ ಅಹ್ಮದ್ ನಈಂ ಫೈಝಿ ಅಲ್ ಮಅಬರಿ ಜನಜಾಗೃತಿ ಸಂದೇಶ ನೀಡಿ, ಮಾದಕ ವಸ್ತುಗಳ ಬಳಕೆಯು ಮಾನವನ ಬದುಕಿನ ಅತಿ ದೊಡ್ಡ ದುರಂತವಾಗಿದೆ.
ಇದಕ್ಕೆ ಬಲಿಯಾಗುವವರಲ್ಲಿ ಮಾನವೀಯತೆಯು ಇಲ್ಲವಾಗಿ ಮೃಗೀಯತೆ ಮೇಳೈಸುವುದರಿಂದ ಅವರು ಕುಟುಂಬಕ್ಕೂ ಸಮಾಜಕ್ಕೂ ದೇಶಕ್ಕೂ ಮಾರಕವಾಗಿ ಮಾರ್ಪಡುತ್ತಾರೆ. ಇಸ್ಲಾಮಿನಲ್ಲಿ ಮಾದಕ ವಸ್ತುಗಳ ಬಳಕೆಯನ್ನು ಕಠಿಣವಾಗಿ ನಿಷೇಧಿಸಿದ್ದು, ಅದನ್ನು ಬಳಸುವವರು ಇಹದಲ್ಲೂ ಪರದಲ್ಲೂ ಪರಾಜಿತರಾಗುತ್ತಾರೆ. ಈ ವಸ್ತುಗಳ ಉಪಯೋಗ, ಸಾಗಾಣಿಕೆ ಮತ್ತು ಇವುಗಳಿಗೆ ಸಹಕಾರ ನೀಡುವುದು ದೇಶದ ಕಾನೂನಿಗೂ ವಿರುದ್ಧವಾಗಿದ್ದು ವಿದ್ಯಾರ್ಥಿಗಳು ಜಾಗರೂಕತೆ ಪಾಲಿಸಬೇಕು ಎಂದು ಕರೆ ನೀಡಿದರು. ಸಂಪಾಜೆ ಗ್ರಾಮ ಪಂಚಾಯತ್ ನಿಕಟ ಪೂರ್ವ ಅಧ್ಯಕ್ಷರಾದ ಜನಾಬ್ ಜಿ.ಕೆ ಹಮೀದ್ ಗೂನಡ್ಕ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮಾತನಾಡಿ, ಮಾದಕ ವ್ಯಸನವೆಂಬ ವಿಪತ್ತನ್ನು ತೊಡೆದು ಹಾಕಲು ವಿದ್ಯಾರ್ಥಿಗಳು ಸನ್ನದ್ಧರಾಗಬೇಕು, ವಿವಿಧ ರೂಪದಲ್ಲಿ ನಮ್ಮ ಬಳಿಗೆ ತಲುಪುವ ಮಾದಕ ವಸ್ತುಗಳನ್ನು ಯಾವುದೇ ಆಮಿಷಕ್ಕೆ ಬಲಿಯಾಗದೆ ದೂರವಿಡಬೇಕು. ಸಮಾಜದಲ್ಲಿ ಜವಾಬ್ದಾರಿಯುತ ಪ್ರಜೆಗಳಾಗಿ ಬಾಳಲು ಪ್ರಯತ್ನಿಸಬೇಕು ಎಂದು ಸಂದೇಶ ನೀಡಿದರು. ಕಾರ್ಯದರ್ಶಿ ಕೆ.ಎಂ ಉಸ್ಮಾನ್ ಅರಂತೋಡು ಮಾತನಾಡಿ, ಧೂಮಪಾನ, ಮದ್ಯಪಾನ ಮತ್ತು ಗುಟ್ಕಾ ಸೇರಿದಂತೆ ಸುಲಭವಾಗಿ ಲಭ್ಯವಾಗುವ ಅಮಲು ಪದಾರ್ಥಗಳ ಬಳಕೆಯಿಂದ ದೊಡ್ಡ ರೀತಿಯ ಅಮಲು ವ್ಯಸನಿಗಳಾಗಿ ಜನರು ಮಾರ್ಪಡುವುದರಿಂದ ಅಂತಹ ವಸ್ತುಗಳನ್ನು ಉಪಯೋಗಿಸುವುದನ್ನೇ ನಿಷೇಧಿಸಬೇಕಿದೆ.

ಅಂತಹ ವಸ್ತುಗಳ ಕುರಿತು ವಿದ್ಯಾರ್ಥಿಗಳು ಜಾಗರೂಕರಾಗಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಲಹರಿ ವಸ್ತುಗಳ ಬಳಕೆಯಿಂದ ದೂರ ನಿಲ್ಲುವ ಮತ್ತು ಮಾದಕ ವ್ಯಸನದ ಬಿ
ಪಿಡುಗನ್ನು ತೊಡೆದು ಹಾಕುವ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಭೋದಿಸಲಾಯಿತು. ಕೊನೆಯಲ್ಲಿ ಲಹರಿ ಪಧಾರ್ಥಗಳನ್ನು ಸಂಪೂರ್ಣವಾಗಿ ನಿಷೇಧಿಸುವ ಬಗ್ಗೆ ಮುಖ್ಯಮಂತ್ರಿಗಳಿಗೆ ಸಲ್ಲಿಸುವ ಮನವಿ ಪತ್ರಕ್ಕೆ ವಿದ್ಯಾರ್ಥಿಗಳಿಂದ ಸಹಿ ಸಂಗ್ರಹಣೆ ಮಾಡಲಾಯಿತು. ಮದ್ರಸಾ ಸಹ ಅಧ್ಯಾಪಕರಾದ ಹಾರಿಸ್ ಕಾಮಿಲ್ ಅಝ್ಹರಿ ಮತ್ತು ಶಾಕಿರ್ ಮುಸ್ಲಿಯಾರ್ ಪೋಳ್ಯ, ಜಮಾಅತ್ ಉಪಾಧ್ಯಕ್ಷರಾದ ಹನೀಫ್ ಟಿ.ಬಿ, ಎಸ್‌ಕೆಎಸ್‌ಎಸ್‌ಎಫ್ ಗೂನಡ್ಕ ಶಾಖೆ ಅಧ್ಯಕ್ಷರಾದ ಮುನೀರ್ ದಾರಿಮಿ ಉಪಸ್ಥಿತರಿದ್ದರು.