ಪುತ್ತೂರು ನಗರಸಭಾ ಸದಸ್ಯ, ಹಳೆಗೇಟು ಮಂಗಳಾ ಮೋಟಾರ್ ಡ್ರೈವಿಂಗ್ ಸ್ಕೂಲ್ ಪಾಲುದಾರ ರಮೇಶ್ ರೈ ನೆಲ್ಲಿಕಟ್ಟೆಯವರ ಬೈಕ್ , ಮೊಬೈಲ್, ಶರ್ಟ್ ಪಾಣೆಮಂಗಳೂರು ಹಳೆ ಸೇತುವೆ ಬಳಿ ಪತ್ತೆ – ಪೊಲೀಸರಿಂದ ಹುಡುಕಾಟ

0

ಪಾಣೆಮಂಗಳೂರು ಹಳೆ ಸೇತುವೆ ಕೆಳಭಾಗದಲ್ಲಿ ಬೈಕ್ , ಮೊಬೈಲ್, ಶರ್ಟ್ ಮತ್ತು ಚಪ್ಪಲಿ ಅನಾಥವಾಗಿ ಸಿಕ್ಕಿದ್ದು, ಪುತ್ತೂರು ನಗರ ಸಭೆಯ ಸದಸ್ಯ ರಮೇಶ್ ರೈ ಯವರದೆಂದು ಹೇಳಲಾಗಿದೆ.

ಪುತ್ತೂರು ನಗರ ಸಭಾ ಸದಸ್ಯ, ಸುಳ್ಯ ಹಳೆಗೇಟಿನಲ್ಲಿ ಮಂಗಳಾ ಮೋಟಾರ್ ಡ್ರೈವಿಂಗ್ ಸ್ಕೂಲ್ ಪಾಲುದಾರ ರಮೇಶ್ ರೈ ನೆಲ್ಲಿಕಟ್ಟೆ ಅವರ ಸೊತ್ತುಗಳು ಇದಾಗಿದ್ದು,ಇದನ್ನು ಅಲ್ಲಿಟ್ಟು ಕಾಣೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ರಮೇಶ್ ರೈ ಅವರು ಇತ್ತೀಚಿಗೆ ನಗರಸಭೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ,ಅಯ್ಕೆಯಾಗಿದ್ದರು.


ಜೂ.೫ರಂದು ಬೆಳಿಗ್ಗೆ ಸುಮಾರು 11 ಗಂಟೆಯಿಂದ ಬೈಕ್ ಹಾಗೂ ಸೊತ್ತುಗಳು ಇಲ್ಲಿ ಅನಾಥವಾಗಿ ಕಂಡು ಬಂದಿದ್ದು, ಇದನ್ನು ಕಂಡ ಸ್ಥಳೀಯರು ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳದಲ್ಲಿ ಸಿಕ್ಕಿದ ಮೊಬೈಲ್ ನಿಂದ ನಂಬರ್ ಪಡೆದು ಪೋನ್ ಮಾಡಿದಾಗ ಇದು ಪುತ್ತೂರು ರಮೇಶ್ ರೈ ಅವರದು ಎಂದು ತಿಳಿದಿದ್ದು, ಮನೆಯವರಿಗೆ ತಿಳಿಸಲಾಗಿದೆ.


ಇದೀಗ ಸ್ಥಳದಲ್ಲಿ ರಮೇಶ್ ರೈ ಅವರ ಕುಟುಂಬದ ಸದಸ್ಯರು, ಪೋಲೀಸರು ಹಾಗೂ ಸ್ಥಳೀಯರು ಜಮಾಯಿಸಿದ್ದು ಸುತ್ತ ಮುತ್ತಲಿನ ಜಾಗದಲ್ಲಿ ಹುಡುಕಾಟ ಪ್ರಾರಂಭಿಸಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದು ಬರಬೇಕಿದೆ.