ಕಳ್ಳರು ಮನೆಯ ಬೀಗ ಮುರಿದು ಒಳನುಗ್ಗಿ ಚಿನ್ನಾಭರಣ ಕಳವುಗೈದಿರುವ ಘಟನೆ ನಿನ್ನೆ ಸಂಜೆ ಕೊಲ್ಲಮೊಗ್ರದಲ್ಲಿ ನಡೆದಿದೆ.
ಕೊಲ್ಲಮೊಗ್ರದ ಚಾಂತಾಳ ನಿವಾಸಿ ಸುರೇಶ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದ್ದು ಪೋಲೀಸರು ತನಿಖೆ ಆರಂಭಿಸಿದ್ದಾರೆ.
ಸುರೇಶ್ ರವರು ಕೊಲ್ಲಮೊಗ್ರದಲ್ಲಿ ಸೆಲೂನ್ ಹೊಂದಿದ್ದು, ಅವರ ಪತ್ನಿ ಮೀನಾಕ್ಷಿಯವರು ಕೊಲ್ಲಮೊಗ್ರದಲ್ಲಿ ದಿನಸಿ ಅಂಗಡಿ ಹೊಂದಿದ್ದಾರೆ. ಮನೆಯಲ್ಲಿದ್ದ ಅವರ ಪುತ್ರ ಸಂಜೆ 6.30 ಕ್ಕೆ ಮನೆಗೆ ಬೀಗ ಹಾಕಿ ತಾಯಿಯ ಅಂಗಡಿಗೆ ಬಂದಿದ್ದರು.
ರಾತ್ರಿ 8 ಗಂಟೆಗೆ ಅಂಗಡಿ ಬಂದ್ ಮಾಡಿ ಅವರಿಬ್ಬರೂ ಮನೆಗೆ ಹೋದಾಗ ಮನೆಯ ಬೀಗ ಒಡೆದಿರುವುದು ಕಂಡುಬಂತು. ಒಳಗೆ ಹೋಗಿ ನೋಡಿದಾಗ ಬೆಡ್ ರೂಂನಲ್ಲಿರುವ ಕಪಾಟಿನ ಬಾಗಿಲು ಒಡೆದು ಅದರಲ್ಲಿದ್ದ ಸುಮಾರು ಎರಡರಿಂದ ಮೂರು ಲಕ್ಷ ರೂ. ಬೆಲೆಬಾಳುವ ಚಿನ್ನಾಭರಣಗಳನ್ನು ಕಳ್ಳರು ಕದ್ದೊಯ್ದಿರುವುದು ಕಂಡುಬಂತು.

ಕೂಡಲೇ ಪೋಲೀಸರಿಗೆ ವಿಷಯ ತಿಳಿಸಲಾಯಿತು. ಸುಬ್ರಹ್ಮಣ್ಯ ಪೋಲೀಸರು ರಾತ್ರಿಯೇ ಬಂದು ಸ್ಥಳ ತನಿಖೆ ಮಹಜರು ನಡೆಸಿದ್ದಾರೆ. ಇಂದು ಶ್ವಾನದಳ ಬರಲಿದೆಯೆಂದು ತಿಳಿದುಬಂದಿದೆ.