ಕ್ರೀಡೆ ಮನುಷ್ಯನ ಜೀವನದ ಅವಿಭಾಜ್ಯ ಅಂಗ : ಜೆ.ಪಿ.ರೈ

ಮನುಷ್ಯನ ಮಾನಸಿಕ ಹಾಗೂ ದೈಹಿಕ ನೆಮ್ಮದಿಗೆ ಕ್ರೀಡೆ ಅತ್ಯಂತ ಸಹಕಾರಿ ಮತ್ತು ನಮ್ಮ ಜೀವನದ ಅವಿಭಾಜ್ಯ ಅಂಗ. ಲೌಕಿಕ ಭಿನ್ನತೆ ಮರೆತು ಎಲ್ಲರೂ ಸೇರುವ ಕ್ಷೇತ್ರವೆಂದರೆ ಅದು ಕ್ರೀಡಾ ಮಾತ್ರ. ಕ್ರೀಡೆಗೆ ಎಲ್ಲರನ್ನೂ ಒಗ್ಗೂಡಿಸುವ ಶಕ್ತಿ ಇದೆ” ಎಂದು ರಾಜ್ಯ ವಾಲಿಬಾಲ್ ಅಸೋಸಿಯೇಷನ್ ಕಾರ್ಯದರ್ಶಿ ಎನ್.ಜಯಪ್ರಕಾಶ್ ರೈ ಹೇಳಿದರು.

ಸುಳ್ಯದ ಕೋಟಕ್ಕಲ್ ಆರ್ಯ ವೈದ್ಯ ಶಾಲಾ ದಿ.ಕುಂಞಿರಾಮನ್ ವೈದ್ಯರ್ ಸ್ಮರಣಾರ್ಥ ಪತ್ರಕರ್ತ ರಿಗೆ ಜೂ.2ರಿಂದ 4ರ ವರೆಗೆ ಅಮೃತಭವನದಲ್ಲಿ ನಡೆದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದ ಬಹುಮಾನವನ್ನು ಜೂ.10ರಂದು ಪ್ರೆಸ್ ಕ್ಲಬ್ ನಲ್ಲಿ ನಡೆದ ಸರಳ ಸಮಾರಂಭದಲ್ಲಿ ವಿತರಿಸಿ ಮಾತನಾಡಿದರು.

“ಒತ್ತಡದ ಈ ದಿನಗಳಲ್ಲಿ ತಲೆಗೂ ದೇಹಕ್ಕೂ ಬ್ಯಾಲೆನ್ಸ್ ಇಲ್ಲದಂತಾಗಿದೆ. ಪ್ರತೀ ದಿನ ಒಂದಷ್ಟು ಸಮಯ ಆಟದಲ್ಲಿ ತೊಡಗಿಸಿಕೊಳ್ಳಬೇಕು. ಕನಿಷ್ಟ ಪಕ್ಷ ನಾವು ತಿಂದದನ್ನು ಅರಗಿಸಿಕೊಳ್ಳುವುದಕ್ಕಾದರೂ ಆಡುವುದು ಒಳ್ಳೆಯದು” ಎಂದರು.

ಪಿ.ವಿ.ಕೆ.ಆರ್. ವೈದ್ಯರ್ ರವರ ಪುತ್ರ, ಪಂದ್ಯಾಟದ ಪ್ರಾಯೋಜಕರಾದ ಪ್ರಶಾಂತ್ ಪಿ,
ಉದ್ಯಮಿ ಅಬ್ದುಲ್ ರಹಮಾನ್ ಸಂಕೇಶ ಶುಭಹಾರೈಸಿದರು.
ಪ್ರೆಸ್ ಕ್ಲಬ್ ಅಧ್ಯಕ್ಷ ಶರೀಫ್ ಜಟ್ಟಿಪಳ್ಳ ಅಧ್ಯಕ್ಷತೆ ವಹಿಸಿದ್ದರು.

ಪ್ರೆಸ್ ಕ್ಲಬ್ ಕೋಶಾಧಿಕಾರಿ ಈಶ್ವರ ವಾರಣಾಸಿ, ಪಂದ್ಯಾಟದ ನಿರ್ಣಾಯಕರಾಗಿದ್ದ ಸೈಫ್ ಹಳೆಗೇಟು, ಶ್ರೇಯಸ್ ಹಳೆಗೇಟು ವೇದಿಕೆಯಲ್ಲಿ ಇದ್ದರು.

ಅಬ್ದುಲ್ ರಹಮಾನ್ ಸಂಕೇಶ ಹಾಗೂ ಜಯಪ್ರಕಾಶ್ ರೈಯವರನ್ನು ಪ್ರೆಸ್ ಕ್ಲಬ್ ವತಿಯಿಂದ ಗೌರವಿಸಲಾಯಿತು.
ಬಹುಮಾನ ವಿತರಣೆ : ಶಟಲ್ ಬ್ಯಾಡ್ಮಿಂಟನ್ ನಲ್ಲಿ ಪ್ರಥಮ ಸ್ಥಾನ ಪಡೆದ ಶ್ರೀಧರ್ ಕಜೆಗದ್ದೆ – ಶಫೀಕ್ ಜಯನಗರ, ದ್ವಿತೀಯ ಸ್ಥಾನ ಸತೀಶ್ ಹೊದ್ದೆಟ್ಟಿ – ಕೌಶಿಕ್ ಸುದ್ದಿ, ತೃತೀಯ ಸ್ಥಾನಿ ಅನಿಲ್ ಕಳಂಜ – ಶಿವಪ್ರಸಾದ್ ಕೇರ್ಪಳ, ಚತುರ್ಥ ಸ್ಥಾನ ಚತುರ್ಥ ಸ್ಥಾನ ಈಶ್ವರ ವಾರಣಾಸಿ -ಪ್ರಶಾಂತ್ ಪಿ ಬಹುಮಾನ ಪಡೆದರು. ಭಾಗವಹಿಸಿದ ತಂಡಗಳಿಗೂ ಸಮಾಧಾನಕರ ಬಹುಮಾನ ವಿತರಿಸಲಾಯಿತು.
ಹಸೈನಾರ್ ಜಯನಗರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
