ಮುಕ್ಕೂರು : 75 ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ

0

ದೇಶದ ಪ್ರಗತಿಗೆ ಕೊಡುಗೆ ನೀಡುವುದು ಕರ್ತವ್ಯ : ಸುಬ್ರಾಯ ಭಟ್ ನೀರ್ಕಜೆ

ಸ್ವಾತಂತ್ರ್ಯಕೋಸ್ಕರದ ತ್ಯಾಗ, ಬಲಿದಾನವನ್ನು ಸ್ಮರಿಸೋಣ : ಕುಂಬ್ರ ದಯಾಕರ ಆಳ್ವ

 

ಮುಕ್ಕೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 75 ನೇ ಸ್ವಾತಂತ್ರ್ಯ ದಿನಾಚರಣೆ ವಿವಿಧ ಕಾರ್ಯಕ್ರಮಗಳೊಂದಿಗೆ ಅರ್ಥಪೂರ್ಣವಾಗಿ ನಡೆಯಿತು.

ಪ್ರಗತಿಪರ ಕೃಷಿಕ ಸುಬ್ರಾಯ ಭಟ್ ನೀರ್ಕಜೆ ಮಾತನಾಡಿ, ದೇಶಕ್ಕೆ ಸ್ವಾತಂತ್ಯ ದೊರೆತ ಕಾರಣ ನಾವಿಂದು ನೆಮ್ಮದಿಯಿಂದ ಜೀವನ ಸಾಗಿಸಲು ಸಾಧ್ಯವಾಗಿದೆ. ಜಾತಿ, ಮತ, ಧರ್ಮ ಬೇಧ ಇಲ್ಲದೆ ಶಾಂತಿ, ಸಹೋದರತೆಯೊಂದಿಗೆ ಬದುಕುವ ಮೂಲಕ ದೇಶದ ಪ್ರಗತಿಯ ಪಥಕ್ಕೆ ಶಕ್ತಿ ತುಂಬೋಣ ಎಂದು ಅವರು ಹೇಳಿದರು.

ಸ್ವಾತಂತ್ರ್ಯ ಸಿಗಲು ಅನೇಕರ ತ್ಯಾಗ, ಬಲಿದಾನ ಕಾರಣ. ಅಂಥವರ ನೆನೆಪು ದಿನ ನಿತ್ಯವು ಇರಬೇಕು. ಇದು ನಮ್ಮ ಕರ್ತವ್ಯವು ಆಗಿದೆ ಎಂದ ಅವರು ಭಾರತದಲ್ಲಿ ಅಸ್ಥಿರತೆಯ ವಾತಾವರಣ ಉಂಟು ಮಾಡಲು ಕೆಲ ನೆರೆಹೊರೆ ರಾಷ್ಟ್ರಗಳು ಹವಣಿಸುತ್ತವೆ. ಇದರ ವಿರುದ್ಧ ಭಾರತೀಯರಾಗಿ ನಾವೆಲ್ಲರೂ ಒಗ್ಗಟ್ಟಿನ ಜೀವನ ಸಾಗಿಸುವ ಮೂಲಕ ಸುಸ್ಥಿರ ರಾಷ್ಟ್ರದ ನಿರ್ಮಾಣದ ಜವಬ್ದಾರಿ ನಿರ್ವಹಿಸೋಣ ಎಂದರು.

ನಿವೃತ್ತ ಕಂದಾಯ ನಿರೀಕ್ಷಕ ದಾಮೋದರ ಗೌಡ ಕಂಡಿಪ್ಪಾಡಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ದೊರೆಕಿ ಇಂದಿಗೆ 75 ವರ್ಷ ತುಂಬಿದ್ದು ನಾವೆಲ್ಲರೂ ದೇಶ ಪ್ರೀತಿಯೊಂದಿಗೆ ದೇಶದ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡೋಣ ಎಂದು ಶುಭ ಹಾರೈಸಿದರು.

ಜಿಲ್ಲಾ ಮಟ್ಟದ ಕೃಷಿ ಪ್ರಶಸ್ತಿ ಪುರಸ್ಕೃತೆ ಶ್ವೇತಾ ಕಾನಾವು ಮಾತನಾಡಿ, ನಾವೆಲ್ಲರೂ ಜವಬ್ದಾರಿಯುತ ನಾಗರಿಕರಾಗಿ ಬಾಳ್ವೇ ನಡೆಸಲು ಮುಂದಡಿ ಇಡುವಂತಾಗಲು ಅಮೃತಮಹೋತ್ಸವ ಸಂಭ್ರಮ ಪ್ರೇರಣೆ ಆಗಬೇಕು. ನಮ್ಮ ನಡೆ-ನುಡಿ ಶಾಂತಿ ಮಾರ್ಗದಲ್ಲಿ ಇರಬೇಕು. ನಮ್ಮಿಂದ ಸಾಧ್ಯವಾದಷ್ಟು ಊರಿನ ಅಭಿವೃದ್ಧಿಗೆ ಶ್ರಮಿಸಿ ತನ್ಮೂಲಕ ದೇಶದ ಅಭಿವೃದ್ಧಿಗೆ ಸೇವೆ ಸಲ್ಲಿಸಬೇಕು ಎಂದರು.

ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ ಮಾತನಾಡಿ, ದೇಶದ ಸ್ವಾತಂತ್ರ್ಯ ಸಂಭ್ರಮವು ನಮ್ಮೆಲ್ಲರ ಪಾಲಿಗೆ ಹಬ್ಬದ ಸಂಭ್ರಮ. ಅನೇಕರ ತ್ಯಾಗ, ಬಲಿದಾನದ ಫಲವಾಗಿ ದೊರೆತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪುಣ್ಯ ಘಳಿಗೆಯನ್ನು ಆಚರಿಸುವ ಸೌಭಾಗ್ಯ ನಮ್ಮ ಪಾಲಿಗೆ ದೊರೆತಿದೆ ಎಂದರು.

ಶಾಲಾ ಎಸ್ಡಿಎಂಸಿ ಅಧ್ಯಕ್ಷ ಜಯಂತ ಗೌಡ ಕುಂಡಡ್ಕ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಹಿತ ಚಿಂತನಾ ಸಮಿತಿ ಕೋಶಾಕಾರಿ ಹೊನ್ನಪ್ಪ ಗೌಡ ಚಾಮುಂಡಿಮೂಲೆ ಉಪಸ್ಥಿತರಿದ್ದರು. ಶಾಲಾ ಮುಖ್ಯಗುರು ವಸಂತಿ ಸ್ವಾಗತಿಸಿದರು. ಸಹಶಿಕ್ಷಕಿ ಸೌಮ್ಯ ವಂದಿಸಿದರು. ಸಹಶಿಕ್ಷಕಿ ಲತಾ, ಅಂಗನವಾಡಿ ಶಿಕ್ಷಕಿ ರೂಪ ಬಹುಮಾನ ಪಟ್ಟಿ ವಾಚಿಸಿದರು. ಶಿಕ್ಷಕ ಶಶಿಕುಮಾರ್ ಬಿ.ಎನ್.ನಿರೂಪಿಸಿದರು.

 

ಧ್ವಜಾರೋಹಣ

ಬೆಳಗ್ಗೆ ಶಾಲಾ ಎಸ್ಡಿಎಂಸಿ ಅಧ್ಯಕ್ಷ ಜಯಂತ ಗೌಡ ಕುಂಡಡ್ಕ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಧಾಕರ ರೈ ಕುಂಜಾಡಿ, ಗ್ರಾ.ಪಂ.ಮಾಜಿ ಸದಸ್ಯ ಉಮೇಶ್ ಕೆಎಂಬಿ, ಯುವ ಉದ್ಯಮಿ ಕಾರ್ತಿಕ್ ರೈ ಕನ್ನೆಜಾಲು, ಎಸ್ಡಿಎಂಸಿ ಮಾಜಿ ಅಧ್ಯಕ್ಷ ಕುಂಞಣ್ಣ ನಾಯ್ಕ ಅಡ್ಯತಕಂಡ, ಎಸ್ಡಿಎಂಸಿ ಉಪಾಧ್ಯಕ್ಷೆ ಸುಮತಿ ರೈ ಕೊಂಡೆಪ್ಪಾಡಿ ಮೊದಲಾದವರು ಉಪಸ್ಥಿತರಿದ್ದರು.

 

ಮೆರವಣಿಗೆ, ಸಾಂಸ್ಕೃತಿಕ ಸಂಭ್ರಮ

ಶಾಲಾ ವಿದ್ಯಾರ್ಥಿಗಳಿಂದ ಮುಕ್ಕೂರು ಮುಖ್ಯರಸ್ತೆಯಲ್ಲಿ ಸ್ವಾತಂತ್ರ್ಯದ ಮೆರವಣಿಗೆ ನಡೆಯಿತು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನಗೊಂಡಿತು. ಮಧ್ಯಾಹ್ನ ಭೋಜನ ವ್ಯವಸ್ಥೆ ಮಾಡಲಾಗಿತ್ತು.