ಸುಳ್ಯದಲ್ಲಿ ತಾಲೂಕು ಮಟ್ಟದ ಪೋಷಣ್ ಮಾಸಾಚರಣೆ

0

 

 

ಪೋಷಕಾಂಶಯುಕ್ತ ಮೀನಿನ ಕೃಷಿಗೆ ಬೆಂಬಲ : ಸಚಿವ ಎಸ್. ಅಂಗಾರ

 

ಕೇಂದ್ರ ಮತ್ತು ರಾಜ್ಯ ಸರಕಾರ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಈ ಹಿಂದೆ ಸಾವಯವ ಕೃಷಿಯ ಆಹಾರ ಸೇವನೆಯಿಂದ ಅಂದಿನ ಜನರು ಆರೋಗ್ಯವಂತರಾಗಿದ್ದರು, ಆದರೆ ಇಂದು ರಾಸಾಯನಿಕ ಬಳಕೆಯಿಂದ ಸಣ್ಣ ವಯಸ್ಸಿನಲ್ಲೇ ಅನಾರೋಗ್ಯ ಕಂಡುಬರುತ್ತಿದೆ. ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡುವ ಕೆಲಸ ಸರಕಾರ ಮಾಡುತ್ತಿದೆ. ಅದರಿಂದ ದೊರೆಯುವ ಪೌಷ್ಟಿಕ ಆಹಾರದ ಸೇವನೆಯಿಂದ ನಮ್ಮಲ್ಲಿ
ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಹೇಳಿದರು.

 

ಅವರು ಸೆ.26 ರಂದು ಸುಳ್ಯ ತಾ.ಪಂ. ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಸುಳ್ಯ, ತಾಲೂಕು ಪಂಚಾಯಿತಿ ಸುಳ್ಯ, ನಗರ ಪಂಚಾಯಿತಿ ಸುಳ್ಯ, ರೋಟರಿ ಕ್ಲಬ್ ಸುಳ್ಯ ಸಹಯೋಗದಲ್ಲಿ ತಾಲೂಕು ಮಟ್ಟದ ಪೋಷಣ್ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮೀನಿನಲ್ಲಿ ಹೆಚ್ಚಿನ ಪೌಷ್ಟಿಕಾಂಶ ಇದೆ. ಸರಕಾರವೂ ಒಳನಾಡು ಮೀನುಗಾರಿಕೆಗೆ ಹೆಚ್ಚಿನ ಮಹತ್ವ ನೀಡುತ್ತಿದೆ. ಅ.16ರಂದು ವಿಶ್ವ ಆಹಾರ ದಿನದಂದು ಬೆಂಗಳೂರಿನಲ್ಲಿ ಮೀನುಗಾರಿಕೆ ಇಲಾಖೆ ವತಿಯಿಂದ ದೊಡ್ಡ ಸಮ್ಮೇಳನ ಮಾಡಲು ಯೋಜಿಸಲಾಗಿದೆ. ಮೀನಿನಿಂದ 19 ಬಗೆಯ ಆಹಾರ ಮಾಡಲು ಸಾಧ್ಯವಿದ್ದು, ಮುಂದಿನ ದಿನದಲ್ಲಿ ಮೀನಿನ ಕೃಷಿಯಲ್ಲಿ ವಿಭಿನ್ನತೆ ಜತೆ ಆ ಕೃಷಿಗೆ ಬೆಂಬಲ ನೀಡಲು ಗಮನ ಕೋಡಲಾಗುವುದು ಎಂದರು.

ಸುಳ್ಯ ನಗರ ಪಂಚಾಯಿತಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಅಧ್ಯಕ್ಷತೆ ವಹಿಸಿದ್ದರು. ದ.ಕ. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪಾಪಭೋವಿ ಟಿ., ಸುಳ್ಯ ತಹಸೀಲ್ದಾರ್ ಅನಿತಾಲಕ್ಷಿ, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಭವಾನಿ ಶಂಕರ್ ಎನ್., ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ನಂದಕುಮಾರ್, ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಶೇಖರ ಪೇರಾಲು, ನ.ಪಂ. ಮುಖ್ಯಾಧಿಕಾರಿ ಸುಧಾಕರ್ ಉಪಸ್ಥಿತರಿದ್ದರು. ಸುಳ್ಯ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಡಾ. ಗೀತಾ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದರು. ಸಿಡಿಪಿಒ ರಶ್ಮಿ ಕೆ.ಎನ್. ಸ್ವಾಗತಿಸಿದರು.
ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮದ ಚೆಕ್ ವಿತರಿಸಲಾಯಿತು. ಪೌಷ್ಟಿಕ ಆಹಾರದ ಪ್ರದರ್ಶನ ನಡೆಯಿತು.

ಗರ್ಭಿಣಿಯರಿಗೆ ಸೀಮಂತ, ಮಕ್ಕಳಿಗೆ ಅನ್ನ ಪ್ರಾಶನ ಯೋಜನೆ ಪ್ರಾರಂಭವಾದಾಗಿನಿಂದ ಕರ್ತವ್ಯದಲ್ಲಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ಅಭಿನಂದನಾ ಕಾರ್ಯಕ್ರಮ ಅಪೌಷ್ಟಿಕ ಮಕ್ಕಳಿಗೆ ರೋಟರಿ ಸುಳ್ಯ ವತಿಯಿಂದ ಪೋಷಣ್ ಕಿಟ್ ವಿತರಣೆ, ಅಂಗನವಾಡಿ ಪುಟಾಣಿಗಳಿಂದ ಬಾಲ ಅಡುಗೆ ಭಟ್ಟ ಕೈರುಚಿ ಉತ್ತಮ ಪೌಷ್ಟಿಕ ಕೈತೋಟ ನಿರ್ಮಿಸಿದ ಅಂಗನವಾಡಿ ಸಹಾಯಕಿಯರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು. ಅಂಗನವಾಡಿ ಕಾರ್ಯಕರ್ತೆಯರಿಗೆ ನಡೆಸಿದ್ದ ಪೋಷಣ್ ಮಾಸಾಚರಣೆ ಕುರಿತು ನಡೆಸಿದ್ದ ರಸಪ್ರಶ್ನೆ ಹಾಗೂ ಭಾಷಣ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಸಭಾ ಕಾರ್ಯಕ್ರಮದ‌ ಮುನ್ನ
ನಗರ ಪಂಚಾಯತ್ ಆವರಣದಿಂದ ತಾಲೂಕು ಪಂಚಾಯತ್ ತನಕ ಪೋಷಣ್ ಜಾಥಾ ನಡೆಯಿತು. ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಜಾಥಾ ಉದ್ಘಾಟಿಸಿದರು.