ಬೆಳ್ಳಾರೆಯ ಉದ್ಯಮಿ ನವೀನ್ ಕಾಮಧೇನು ಅಪಹರಣ : ತಾಯಿಯಿಂದ ಆರೋಪ, ಸುಂಟಿಕೊಪ್ಪದಲ್ಲಿ ಆಂಬ್ಯುಲೆನ್ಸ್ ಗೆ ತಡೆಯೊಡ್ಡಿ ಪೊಲೀಸರಿಗೆ ಹಸ್ತಾಂತರ, ಉರುಡಾಟದಲ್ಲಿ ಗಾಯಗೊಂಡ ತಾಯಿ, ಅತ್ತಿಗೆ ಆಸ್ಪತ್ರೆಗೆ ದಾಖಲು

0
ಶುಂಠಿಕೊಪ್ಪದಲ್ಲಿ ಅಂಬ್ಯಲೆನ್ಸ್ ನಲ್ಲಿ ನವೀನ್ ಗೌಡ

ಬೆಳ್ಳಾರೆಯ ಕಾಮಧೇನು ಜ್ಯುವೆಲ್ಲರ್ಸ್ ಮಾಲಕ ನವೀನ್ ಗೌಡ ಕಾಮಧೇನು ಅವರನ್ನು ಆಂಬ್ಯುಲೆನ್ಸ್ ಸಹಿತ ಕೆಲವು ವಾಹನಗಳಲ್ಲಿ ಬಂದ ಅಪರಿಚಿತರು ಬಲವಂತವಾಗಿ ಕರೆದೊಯ್ದ ಪ್ರಕರಣ ನಡೆದಿದ್ದು, ಆತನನ್ನು ಅಪಹರಿಸಲಾಗಿದೆ ಎಂದು ತಾಯಿ ಆರೋಪಿಸಿದ್ದಾರೆ. ಈ ಆಂಬ್ಯುಲೆನ್ಸನ್ನು ಶುಂಠಿಕೊಪ್ಪ ಬಳಿ ತಡೆ ಹಿಡಿದು ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿದು ಬಂದಿದೆ. ಘಟನೆಯ ಸಂದರ್ಭದಲ್ಲಿ ನವೀನರ ತಾಯಿ ಮತ್ತು ಅತ್ತಿಗೆ ಪ್ರಜ್ಞಾ ಗಾಯಗೊಂಡಿದ್ದು, ಅವರಿಬ್ಬರೂ ಸುಳ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸರಕಾರಿ ಆಸ್ಪತ್ರೆಯಲ್ಲಿರುವ ನೀರಜಾಕ್ಷಿ ಮತ್ತು ಪ್ರಜ್ಞಾ

ಇಂದು ಮಧ್ಯಾಹ್ನ ಬೆಳ್ಳಾರೆಯಿಂದ ಹಿಂತಿರುಗಿದ ನವೀನ್ ತನ್ನ ಮನೆಯಂಗಳದಲ್ಲಿ ನಿಂತುಕೊಂಡಿರುವಾಗ ಅಂಬ್ಯುಲೆನ್ಸ್‌ನಲ್ಲಿ ಮತ್ತು ಇತರ ಕಾರುಗಳಲ್ಲಿ ಬಂದ ಕೆಲವರು ಅವರನ್ನು ಬಲಾತ್ಕಾರವಾಗಿ ಕಾರಿಗೆ ಕೂರಿಸಲು ಕೊಂಡೊಯ್ದರೆಂದೂ ಇದನ್ನು ಕಂಡ ತಾಯಿ ನೀರಜಾ ಮತ್ತು ಅತ್ತಿಗೆ ಪ್ರಜ್ಞ ತಡೆಯಬಂದರೆಂದೂ ಆ ಸಂದರ್ಭ ಅವರ ಮಧ್ಯೆ ಉರುಡಾಟ ನಡೆದು ಅಪರಿಚಿತರು ನವೀನರನ್ನು ವಾಹನದಲ್ಲಿ ಕೂರಿಸಿಕೊಂಡು ಹೋದರೆಂದೂ ಹೇಳಲಾಗುತ್ತಿದೆ.


ಆ ಬಳಿಕ ಘಟನೆಯಲ್ಲಿ ಗಾಯಗೊಂಡ ತಾಯಿ ನೀರಜಾ ಹಾಗೂ ಅಣ್ಣ ವಿನ್ಯಾಸ್ ಬೆಳ್ಳಾರೆ ಪೋಲೀಸರಿಗೆ ವಿಷಯ ತಿಳಿಸಿ, ಬಳಿಕ ಸುಳ್ಯ ಆಸ್ಪತ್ರೆಗೆ ಬಂದು ದಾಖಲಾಗಿದ್ದಾರೆಂದು ತಿಳಿದು ಬಂದಿದೆ.


ಇತ್ತ ನವೀನರನ್ನು ಆಂಬ್ಯುಲೆನ್ಸ್ ನಲ್ಲಿ ಅಪಹರಿಸಲಾಗಿದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಸುಳ್ಯದ ಆಂಬ್ಯುಲೆನ್ಸ್ ನವರು ತಮ್ಮ ಗ್ರೂಪ್ ಗಳಿಗೆ ಮಾಹಿತಿ ರವಾನಿಸಿದ ಹಿನ್ನೆಲೆಯಲ್ಲಿ ಸುಂಟಿಕೊಪ್ಪ ಬಳಿ ಅಲ್ಲಿಯ ಆಂಬ್ಯಲೆನ್ಸ್ ನವರು ಬೆಳ್ಳಾರೆಯಿಂದ ಹೋದ ಆಂಬ್ಯಲೆನ್ಸನ್ನು ತಡೆದು ಅದರಲ್ಲಿದ್ದ ನವೀನ್ ಮತ್ತು ಇತರರನ್ನು ಅಲ್ಲಿಯ ಪೊಲೀಸರಿಗೊಪ್ಪಿಸುವುದಾಗಿ ಮಾಹಿತಿ ಲಭ್ಯವಾಗಿದೆ.


ಇತ್ತೀಚೆಗೆ ಬೆಳ್ಳಾರೆಯಲ್ಲಿ ನಡೆದ ಘಟನೆಯೊಂದರ ತರುವಾಯ ನವೀನ್ ಹಾಗೂ ಪತ್ನಿ, ಮನೆಯವರಲ್ಲಿ ವಿರಸ ಮೂಡಿ ಬಳಿಕ ಒಂದೆರಡು ಬಾರಿ ಪಂಚಾಯಿತಿಕೆ ನಡೆದಿತ್ತೆನ್ನಲಾಗಿದೆ. ನಿನ್ನೆಯೂ ಪಂಚಾತಿಕೆಗೆಂದು ಪತ್ನಿ ಮತ್ತು ಬಂಧುಗಳು ಆಗಮಿಸಿದ್ದು, ಮಾತುಕತೆ ನಡೆದಿತ್ತೆನ್ನಲಾಗಿದೆ. ಇಂದು ಈ ಘಟನೆ ನಡೆದಿದ್ದು, ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿರುವ ನೀರಜಾಕ್ಷಿಯವರು ಸುದ್ದಿಯೊಂದಿಗೆ ಮಾತನಾಡಿ, ಇಂದು ಮಧ್ಯಾಹ್ನ ಅಂಬ್ಯುಲೆನ್ಸ್‌ನಲ್ಲಿ ೭-೮ ಜನ ಬಂದು ನವೀನ್ ರವರನ್ನು ಅಪಹರಣ ಮಾಡಿದ್ದಾರೆ. ದಿವ್ಯ ಪ್ರಭಾ ,ಅವರ ಮಗ ಮತ್ತು ಮಗಳು ಸ್ಪಂದನಾ ರವರು ಕೂಡಾ ಬಂದಿದ್ದರು. ಅಪಹರಣಗಾರರು ನನ್ನ ಮತ್ತು ಸೊಸೆಯ ಮೇಲೆ ಹಲ್ಲೆ ಮಾಡಿದ್ದಾರೆ. ಬೆಳ್ಳಾರೆ ಪೊಲೀಸ್ ಠಾಣೆ ಗೆ ದೂರು ಕೊಡಲು ಬಂದಾಗ ದೂರು ಸ್ವೀಕರಿಸಲಿಲ್ಲ. ಅದಕ್ಕಾಗಿ ಸುಳ್ಯ ಸರಕಾರಿ ಆಸ್ಪತ್ರೆ ಗೆ ದಾಖಲಾಗಿ ಸುಳ್ಯ ಠಾಣೆಗೆ ದೂರು ಕೊಡಲು ಬಂದಿದ್ದೇವೆ. ಇತ್ತೀಚಿಗೆ ನಡೆದ ಘಟನೆ ಸಂಬಂಧಿಸಿ ನಿನ್ನೆ ಮನೆಯಲ್ಲಿ ಮಾತುಕತೆ ನಡೆದಿದೆ. ನವೀನ್ ಸ್ಪಂದನಾ ರವರರನ್ನು ಮನೆಗೆ ಹತ್ತಿಸಿಕೊಳ್ಳಲು ನಿರಾಕರಿಸಿದರಿಂದ ಸೇಡು ತೀರಿಸಿಕೊಳ್ಳಲು ಅಪಹರಣ ಮಾಡಲಾಗಿದೆ ಎಂದು ಹೇಳಿದ್ದಾರೆ.


ಕಾಮಧೇನು ಮಾಧವ ಗೌಡರವರಲ್ಲಿ ವಿಚಾರಿಸಿದಾಗ, ನವೀನನನ್ನು ಯಾರೂ ಕಿಡ್ನಾಪ್ ಮಾಡಿಲ್ಲ. ಅವನಿಗೆ ಡಿಹೈಡ್ರೇಷನ್ ಆದ ಕಾರಣ ನಾವೇ ಅವನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೇವೆ ಎಂದು ತಿಳಿಸಿದ್ದಾರೆ.


ನವೀನ್ ರನ್ನು ಬೆಂಗಳೂರಿನ ಆಸ್ಪತ್ರೆಗೆಂದು ಅಂಬ್ಯುಲೆನ್ಸ್ ನಲ್ಲಿ ಕರೆದುಕೊಂಡು ಹೋಗುತ್ತಿದ್ದೆವು. ಆ ಸಂದರ್ಭ ಅಂಬ್ಯುಲೆನ್ಸ್ ನ್ನು ತಡೆಯಲಾಗಿದೆ. ಯಾರು ಯಾವ ಉದ್ದೇಶಕ್ಕೆ ತಡೆದಿದ್ದಾರೆಂಬುದನ್ನು ತಿಳಿದುಕೊಂಡು ಮತ್ತೆ ಪ್ರತಿಕ್ರಿಯೆ ನೀಡುತ್ತೇನೆ ಎಂದು ದಿವ್ಯಪ್ರಭ ಚಿಲ್ತಡ್ಕ ಪ್ರತಿಕ್ರಿಯಿಸಿದ್ದಾರೆ.