ಕೋವಿ ಡಿಪಾಸಿಟ್ ವಿಚಾರ : ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಲು ಹೈಕೋರ್ಟ್ ನಿರ್ಧಾರ

0

ಚುನಾವಣಾ ಸಮಯದಲ್ಲಿ ರೈತರು ಪರವಾನಗಿ ಹೊಂದಿದ ಕೋವಿಗಳನ್ನು ಸಾರಾಸಗಟಾಗಿ ಡೆಪಾಸಿಟ್ ಇಡಬೇಕೆಂದು ಜಿಲ್ಲಾಧಿಕಾರಿಗಳು ಆದೇಶ ಮಾಡುತ್ತಿರುವುದರ ವಿರುದ್ಧ ರೈತರು ಹೈಕೋರ್ಟ್ ಮೆಟ್ಟಿಲೇರಿದ್ದು ಹೈಕೋರ್ಟು ರೈತರ ಪರವಾಗಿ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಲು ನಿರ್ಧರಿಸಿರುವುದಾಗಿ ತಿಳಿದುಬಂದಿದೆ.

ಚುನಾವಣಾ ಆಯೋಗದ ನಿಯಮದ ಪ್ರಕಾರ ಚುನಾವಣೆಗಳ ಸಂದರ್ಭ ಕ್ರಿಮಿನಲ್ ಹಿನ್ನೆಲೆ ಹೊಂದಿರುವ, ಬೈಲ್ ಮೇಲೆ ಇರುವಂತಹ ಅಥವಾ ಅಪರಾಧ ಮನೋಭಾವ ಹೊಂದಿರುವವರ ಕೋವಿಗಳನ್ನು ಡೆಪಾಸಿಟ್ ಇರಿಸುವುದರ ಮೂಲಕ ಶಾಂತಿಯುತ ಮತದಾನ ಪ್ರಕ್ರಿಯೆ ನಡೆಸಬೇಕು ಎಂದು ಇದೆ. ಆದರೆ ಜಿಲ್ಲಾಧಿಕಾರಿಗಳು ಎಲ್ಲ ರೈತರು ಕೂಡ ಕೋವಿಗಳನ್ನು ಡೆಪಾಸಿಟ್ ಮಾಡಬೇಕೆಂದು ಆದೇಶ ಮಾಡುತ್ತಾರೆ. ರೈತರು ಈ ಆದೇಶದ ವಿರುದ್ಧ ನ್ಯಾಯಾಲಯದ ಮೊರೆ ಹೋಗಿ ವಿನಾಯಿತಿ ಪಡೆಯಬೇಕಾಗುತ್ತದೆ. ಹೈಕೋರ್ಟ್ ಗೆ ಹೋಗಲು ಶಕ್ತಿ ಇಲ್ಲದವರು ಕೋವಿ ಡೆಪಾಸಿಟ್ ಇರಿಸಿ, ಕಾಡುಪ್ರಾಣಿಗಳಿಂದ ಬೆಳೆ ರಕ್ಷಣೆ ಮಾಡಲಾಗದೆ ನಷ್ಟ ಅನುಭವಿಸಬೇಕಾಗುತ್ತದೆ. ಆತ್ಮ ರಕ್ಷಣೆಗಾಗಿ ಪಿಸ್ತೂಲ್ ಪಡೆದವರು ಜೀವ ಭಯ ಅನುಭವಿಸಬೇಕಾಗುತ್ತದೆ.


ಈ ಸಮಸ್ಯೆಯ ಶಾಶ್ವತ ಪರಿಹಾರಕ್ಕಾಗಿ ಈ ಬಾರಿ ರೈತರು ಹೈಕೋರ್ಟಿನ ಮೆಟ್ಟಿಲೇರಿ ಪರಿಹಾರಕ್ಕಾಗಿ ಕಾಯುತ್ತಿದ್ದಾರೆ.
ಎಪ್ರಿಲ್ 25 ರಂದು ಅಪರಾಹ್ನ ಹೈಕೋರ್ಟಿನ ಜಸ್ಟಿಸ್ ಸಚಿನ್ ಶಂಕರ್ ಮುಗ್ದುಂ ನೇತೃತ್ವದ ಏಕಸದಸ್ಯ ಪೀಠ ಅಂತಿಮ ತೀರ್ಪು ಸಿದ್ಧಗೊಳಿಸಿದೆ. ಈ ವಿಚಾರವಾಗಿ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡುವುದಾಗಿ ನ್ಯಾಯಪೀಠ ತಿಳಿಸಿದೆ. ಆದರೆ ತೀರ್ಪಿನ ಪೂರ್ಣಪಾಠವನ್ನು ನ್ಯಾಯಾಲಯ ಪ್ರಕಟಿಸಿಲ್ಲವಾದುದರಿಂದ ಅದರಲ್ಲಿ ಏನಿದೆ ಎಂದು ಗೊತ್ತಾಗಿಲ್ಲ.


ಜಿಲ್ಲಾಧಿಕಾರಿಗಳು ಕೋವಿ ಡೆಪಾಸಿಟ್ ಇರಿಸುವ ಆದೇಶ ಮಾಡುವಾಗ ಚುನಾವಣಾ ಆಯೋಗದ ನಿರ್ದೇಶನಗಳ ರೀತಿಯಲ್ಲಿ ಆದೇಶ ಇಲ್ಲದಿರುವುದನ್ನು ನ್ಯಾಯಾಲಯ ಗಮನಿಸಿರುವುದು ಮಾತ್ರ ಸ್ಪಷ್ಟವಾಗಿದೆ.