ಕೊಳ್ತಿಗೆ : ಅಪರಿಚಿತರಿಂದ ಹಲ್ಲೆ – ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲು

0

ಕರೆಂಟ್ ಮೈನ್ ಸ್ವಿಚ್ ಆಫ್ ಮಾಡಿ ಮನೆಯೊಳಗಿದ್ದ ವ್ಯಕ್ತಿಯೊಬ್ಬರನ್ನು ಹೊರಗೆ ಕರೆದು ಅಪರಿಚಿತರು ಬೆದರಿಸಿ ಹಲ್ಲೆ ನಡೆಸಿರುವ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಳ್ತಿಗೆ ಗ್ರಾಮದ ಚಿತ್ರಪ್ರಭ ಶೆಟ್ಟಿ ಎಂಬವರು ಠಾಣೆಗೆ ದೂರು ನೀಡಿದ್ದು ಸೆ.01 ರಂದು ನಡುರಾತ್ರಿ ವಾಸ್ತವ್ಯದ ಮನೆ ಬಳಿ ಪರಿಚಯದ ಮಹಿಳೆ ಮತ್ತು ಮಂಕಿ ಕ್ಯಾಪ್ ಹಾಗೂ ಕುತ್ತಿಗೆಗೆ ಶಾಲು ಹಾಕಿದ ನಾಲ್ಕರಿಂದ ಐದು ಮಂದಿ ಅಪರಿಚಿತ ವ್ಯಕ್ತಿಗಳು ಬಂದು ಮನೆಯ ವಿದ್ಯುತ್ ಸಂಪರ್ಕದ ಮೈನ್ ಸ್ವಿಚ್ ಆಫ್ ಮಾಡಿ ತನ್ನ ಗಂಡನನ್ನು ಮನೆಯ ಒಳಗಿನಿಂದ ಹೊರಗೆ ಕರೆದು ಅವಾಚ್ಯ ಶಬ್ದಗಳಿಂದ ಬೈದು ನಿನ್ನನ್ನು ಇಲ್ಲಿಯೇ ಕೊಚ್ಚಿಹಾಕುವುದಾಗಿ ಬೆದರಿಸಿರುವುದಾಗಿ ದೂರು ನೀಡಿದ್ದಾರೆ.
ತನ್ನಲ್ಲಿ ಈಗಾಗಲೇ ಪೊಲೀಸ್ ಠಾಣೆಯಲ್ಲಿ ನೀಡಿದ ದೂರನ್ನು ಹಿಂಪಡೆಯಬೇಕು, ಇಲ್ಲದಿದ್ದಲ್ಲಿ ನಿಮ್ಮ ಇಡೀ ಕುಟುಂಬವನ್ನು ನಾಶಮಾಡುವುದಾಗಿ ಬೆದರಿಸಿ ಮನೆ ಬಾಗಿಲಿಗೆ ದೊಣ್ಣೆ, ಕಲ್ಲು, ಬಿಯರ್ ಬಾಟಲ್ ನಿಂದ ಬಡಿದು ಬೆದರಿಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಆ ವೇಳೆ 112 ಸಹಾಯವಾಣಿಗೆ ಕರೆ ಮಾಡಿದ್ದು, ಈ ವಿಚಾರ ತಿಳಿದ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಜಾಮೀನು ತಕರಾರಿಗೆ ಸಂಬಂಧಿಸಿ ತನಗೆ ಬೈದು ಬೆದರಿಕೆ ಒಡ್ಡಿದ್ದಾರೆ ಎನ್ನಲಾಗಿದೆ. ಬೆಳ್ಳಾರೆ ಠಾಣೆಯಲ್ಲಿ ಜಾಮೀನು ತಕರಾರು ಕುರಿತು ಮಹಿಳೆಯೊಬ್ಬರ ಮೇಲೆ ದೂರು ಅರ್ಜಿ ನೀಡಿರುವ ದ್ವೇಷದಿಂದ ಆರೋಪಿಗಳು ಈ ಕೃತ್ಯ ಎಸಗಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆ 59/2023 ಕಲಂ : 447, 504, 506 ಜೊತೆಗೆ 149 ಐಪಿಸಿ. ಯಂತೆ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.