ಫೋರ್ಜರಿ ದಾಖಲೆ ಸೃಷ್ಟಿಸಿ ಜಾಗ ಮಾರಾಟದ ಆರೋಪ

0

ಆರೋಪಿಗಳಿಗೆ ಕೋರ್ಟ್ ಶಿಕ್ಷೆ ಪ್ರಕಟ

ಆರೋಪಿಯಾದ ಡಿ.ಎಂ.ಅಬ್ದುಲ್ಲ ಕುಂಞಿ ಎಂಬವರು ಸಿಂಡಿಕೇಟ್ ಬ್ಯಾಂಕ್ ಸುಳ್ಯ ಶಾಖೆಯಿಂದ ದಿನಾಂಕ 18.12.2007 ರಂದು ₹15 ಲಕ್ಷ ಅಲ್ಲದೇ ದಿನಾಂಕ 31.01.2008 ರಂದು ₹ 5 ಲಕ್ಷ ಸಾಲ ಪಡೆದಿದ್ದರು . ಈ ಸಾಲವನ್ನು ಪಡೆಯುವಾಗ ಆರೋಪಿಯ ಹಕ್ಕಿನ ಆಸ್ತಿಯಾದ ಸರ್ವೆ ನಂ. 103/3 ಬಿ ರಲ್ಲಿ 5.28 ಎಕ್ರೆ ಜಮೀನನ್ನು ಅಡಮಾನ ನೀಡಿದ್ದರು. ಇದೇ ಜಮೀನನ್ನು ಅಬ್ದುಲ್ಲ ಕುಂಞಿ ಡಿ.ಎಮ್. ರವರು ದಿನಾಂಕ 04.11.2011 ರಂದು ಮೇಲಿನ ಸರ್ವೆ ನಂಬ್ರದ ಜಮೀನನ್ನು ಅಜ್ಜಾವರ ಗ್ರಾಮದ ಅಡ್ಪಂಗಾಯ ವಾಸಿ ಶಿವಪ್ರಕಾಶ್ ಎಂಬವರ ಪತ್ನಿ, ಎರಡನೇ ಆರೋಪಿ ಭಾಗೀರಥಿ ಎ.ಎಸ್‌. ರವರಿಗೆ ದಸ್ತಾವೇಜು ನಂಬ್ರ 2025/11-12 ರಂತೆ ಮಾರಾಟ ಮಾಡಿದ್ದರು. ಈ ಕುರಿತು ಆರೋಪಿಯು ಅವರಿಗೆ ಕ್ರಯಚೀಟಿ ಮಾಡಿಸಿ ಕೊಟ್ಟಿದ್ದು ಕ್ರಯಚೀಟಿಯೊಂದಿಗೆ ಒಂದು ಆರ್.ಟಿ.ಸಿ. ಯಲ್ಲಿ ಸಾಲದ ಉಲ್ಲೇಖ ಇಲ್ಲದಂತೆ ಮಾಡಿ ಶುದ್ಧಕ್ರಯ ಮಾಡಿದ್ದಾಗಿರುತ್ತದೆ. ಸದ್ರಿ ಸಾಲವು ಈಗಲೂ ಬ್ಯಾಂಕಿಗೆ ಪಾವತಿಗೆ ಬಾಕಿ ಇದ್ದರೂ ಈ ಕುರಿತು ಸುಳ್ಳು ದಾಖಲೆ ಸೃಷ್ಟಿಸಿ ಉಪನೋಂದಾವಣಾ ಕಛೇರಿಯಲ್ಲಿ ನೋಂದಣಿ ಮಾಡಿ ಈ ಸ್ಥಳಕ್ಕೆ ಸಂಬಂಧಿಸಿ ಸಾಲದ ಮರುಪಾವತಿ ಆದ ಬಗ್ಗೆ ದೃಢಪತ್ರವನ್ನು ನೋಂದಾವಣಿ ಮಾಡಿಸಿರುವುದಲ್ಲದೇ ಪಿರ್ಯಾದುದಾರರು ಪರಿಶೀಲಿಸಿದಾಗ ಬ್ಯಾಂಕಿನ ಮ್ಯಾನೇಜರರ ಸಹಿಯನ್ನೂ ಪೋರ್ಜರಿ ಮಾಡಿರುವುದು ಕಂಡು ಬಂದಿತ್ತು. ಆರೋಪಿಯು ಈ ರೀತಿ ಸುಳ್ಳು ದಾಖಲೆಯನ್ನು ಸೃಷ್ಟಿಸಿ ಅದು ಸತ್ಯವೆಂದು ನಂಬುವಂತೆ ಮಾಡಿ ಬ್ಯಾಂಕಿನಿಂದ ಪಡೆದ ಸಾಲವನ್ನು ಮರುಪಾತಿಸದೆ ಸುಳ್ಳು ದಾಖಲೆಯನ್ನು ಸೃಷ್ಟಿಸಿ ಬ್ಯಾಂಕನ್ನು ವಂಚಿಸಿ ಮೋಸ ಮಾಡಿದ್ದಾರೆಂದು ಆರೋಪಿಗಳಾದ ಅಬ್ದುಲ್ಲ ಕುಂಞ್ಞ ಡಿ.ಎಂ. ಮತ್ತು ಶ್ರೀಮತಿ ಭಾಗೀರಥಿ ರವರುಗಳ ಮೇಲೆ ಬ್ಯಾಂಕಿನವರು ದೂರು ನೀಡಿ, ಸಮಾನ ಉದ್ಧೇಶದಿಂದ ಈ ಪ್ರಕರಣದಲ್ಲಿ ಭಾಗಿಯಾಗಿ ಇದರಿಂದ ಅಕ್ರಮ ಲಾಭ ಪಡೆದಿದ್ದಾರೆ ಎಂದು ಆರೋಪಿಸಿದ್ದರು.

ಪ್ರಕರಣದ ವಿಚಾರಣೆ ಸುಳ್ಯದ ಹಿರಿಯ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ನ್ಯಾಯಾಧೀಶರಾದ ಬಿ.ಮೋಹನ್ ಬಾಬುರವರ ಸಮಕ್ಷಮ ನಡೆದು ಆರೋಪಿಗಳು ದೋಷಿ ಎಂದು ಅ.28 ರಂದು ನ್ಯಾಯಾಲಯವು ತೀರ್ಪು ನೀಡಿ, ಅ.30 ರಂದು ಶಿಕ್ಷೆಯ ಪ್ರಮಾಣವನ್ನು ಈ ಕೆಳಕಂಡಂತೆ ಪ್ರಕಟಿಸಿರುತ್ತಾರೆ.

ಆರೋಪಿಗಳಿಗೆ ಕಲಂ 418, 419, 465 ಮತ್ತು 471 ಕ್ಕೆ ತಲಾ 2 ವರ್ಷಗಳ ಕಾಲ ಸಾದಾ ಕಾರಾಗೃಹ ವಾಸ ಹಾಗೂ ಕಲಂ 468 ರಡಿಯಲ್ಲಿ 2 ವರ್ಷಗಳ ಸಾದಾ ಕಾರಾಗೃಹ ವಾಸ ಮತ್ತು ₹10,000/- ದಂಡ, ದಂಡ ಕಟ್ಟಲು ತಪ್ಪಿದ್ದಲ್ಲಿ 6 ತಿಂಗಳ ಹೆಚ್ಚುವರಿ ಶಿಕ್ಷೆವಿಧಿಸಿದ್ದು, ಮೇಲಿನ ಎಲ್ಲಾ ಶಿಕ್ಷೆಗಳು ಏಕಕಾಲಕ್ಕೆ ಜಾರಿಯಾಗತಕ್ಕದ್ದು ಎಂದು ಮಾನ್ಯ ನ್ಯಾಯಾಲಯವು ಆದೇಶಿಸಿರುತ್ತದೆ.

ಸರ್ಕಾರದ ಪರವಾಗಿ ಪ್ರಕರಣವನ್ನು ಸಹಾಯಕ ಸರ್ಕಾರಿ ಅಭಿಯೋಜಕರು ನಡೆಸಿ ವಾದ ಮಂಡಿಸಿರುತ್ತಾರೆ.