ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜು : ಜ್ಞಾನಾಮೃತ ಸಭಾಂಗಣ ಉದ್ಘಾಟನೆ

0

ಸಂಸ್ಥೆಯ ಪ್ರಾಂಶುಪಾಲರುಗಳು ಹಾಗೂ ಶಿಕ್ಷಕ ವೃಂದ, ಪೋಷಕರ ಶ್ರಮ ಯಶಸ್ವಿಯಾಗಿದೆ

ಶಾಸಕಿ ಭಾಗೀರಥಿ ಮುರುಳ್ಯರಿಂದ ಪ್ರಶಂಸೆ ಹಾಗೂ 10 ಲಕ್ಷ ರೂಪಾಯಿ ಅನುದಾನದ ಭರವಸೆ

ಸುಳ್ಯ ಸರ್ಕಾರಿ ಪದವಿ ಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ವತಿಯಿಂದ ನೂತನವಾಗಿ ನಿರ್ಮಾಣಗೊಂಡಿರುವ ‘ಜ್ಞಾನಾಮೃತ ಸಭಾಭವನ” ಉದ್ಘಾಟನಾ ಸಮಾರಂಭ
ಡಿ.5 ರಂದು ನಡೆಯಿತು.

ಉದ್ಘಾಟನೆ ಮತ್ತು ಅಧ್ಯಕ್ಷತೆ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಭಾಗೀರಥಿ ಮುರುಳ್ಯರವರು ವಹಿಸಿದ್ದರು. ನೂತನ ಸಭಾಭವನನ್ನು ಉದ್ಘಾಟಿಸಿದ ಶಾಸಕರು ಸಭಾ ಭವನ ನಿರ್ಮಾಣಕ್ಕೆ ಸಹಕರಿಸಿದ ದಾನಿಗಳ ನಾಮಫಲಕವನ್ನು ಅನಾವರಣಗೊಳಿಸಿ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಚಾಲನೆಯನ್ನು ನೀಡಿದರು.

ಸಭಾ ಕಾರ್ಯಕ್ರಮದ ಆರಂಭದಲ್ಲಿ ನೂತನ ವೇದಿಕೆಯಲ್ಲಿ ಕಾಲೇಜು ವಿದ್ಯಾರ್ಥಿನಿಯರಿಂದ ಯಕ್ಷಗಾನ ನೃತ್ಯ ಹಾಗೂ ಭರತನಾಟ್ಯ ನೃತ್ಯ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶಾಸಕರು ‘ಸಂಸ್ಥೆಯ ಪ್ರಾಂಶುಪಾಲರು ಹಾಗೂ ಉಪ ಪ್ರಾಂಶುಪಾಲರು ಅದೇ ರೀತಿ ಶಾಲಾ ಉಪನ್ಯಾಸಕರು ಶಿಕ್ಷಕ ವೃಂದ ಮತ್ತು ಪೋಷಕರ ಸಹಕಾರದಿಂದ ಈ ಭವ್ಯ ಸಭಾಂಗಣ ನಿರ್ಮಾಣಗೊಳ್ಳಲು ಸಾಧ್ಯವಾಗಿದೆ. ಅವರೆಲ್ಲರ ಶ್ರಮದ ಫಲದಿಂದ ಇಂದು ಯಶಸ್ವಿ ಕಾರ್ಯಕ್ರಮ ನಡೆಯಲು ಸಾಧ್ಯವಾಗಿದೆ ಎಂದು ಪ್ರಶಂಸೆಯನ್ನು ವ್ಯಕ್ತಪಡಿಸಿದರು.

ಶಾಸಕರ ನಿಧಿಯಿಂದ 10 ಲಕ್ಷ ರೂಪಾಯಿ ಅನುದಾನವನ್ನು ಸಂಸ್ಥೆಗೆ ಮುಂದಿನ ದಿನಗಳಲ್ಲಿ ನೀಡುವ ಬಗ್ಗೆ ಭರವಸೆಯನ್ನು ನೀಡಿ ನಮ್ಮ ತಾಲೂಕಿನ ಈ ಕಾಲೇಜ್ ಉತ್ತಮ ಹೆಸರನ್ನು ಪಡೆದುಕೊಂಡಿದ್ದು ಮುಂದಿನ ದಿನಗಳಲ್ಲಿಯೂ ಕೂಡ ಇನ್ನೂ ಹೆಚ್ಚಿನ ಯಶಸ್ವಿಯನ್ನು ಕಾಣಲಿ ಎಂದು ಶುಭ ಹಾರೈಸಿದರು. ವಿದ್ಯಾರ್ಥಿಗಳು ಉತ್ತಮ ಶಿಕ್ಷಣವನ್ನು ಪಡೆದು ಊರಿಗೆ ಮತ್ತು ತಾಲೂಕಿಗೆ ಒಳ್ಳೆಯ ಹೆಸರನ್ನು ತರುವ ಮೂಲಕ ಹೆತ್ತ ತಂದೆ ತಾಯಿಗೂ ಕೀರ್ತಿಯನ್ನು ತರಬೇಕೆಂದು ವಿದ್ಯಾರ್ಥಿಗಳಿಗೆ
ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಅಮೃತ ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ ಬಿ ಸದಾಶಿವ ರವರು ಮಾತನಾಡಿ ನೂತನ ಸಭಾ ವೇದಿಕೆ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಹಾಗೂ ಪೋಷಕರ ಪಾತ್ರದ ಬಗ್ಗೆ ಮಾತನಾಡಿದರು. ಅಮೃತ ಮಹೋತ್ಸವದ ಅಂಗವಾಗಿ ನಡೆಯುವ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಸುಳ್ಯ ನಗರ ಪ್ರಾಧಿಕಾರದ ಅಧ್ಯಕ್ಷ ಎಂ ಮುಸ್ತಫಾ ರವರು ಮಾತನಾಡಿ ಶುಭ ಹಾರೈಸಿದರು.

ಕಾಲೇಜಿನ ತಡೆಗೋಡೆ ನಿರ್ಮಿಸಲು ನಗರ ಪಂಚಾಯತ್ ಅನುದಾನದಿಂದ 2 ಲಕ್ಷ ರೂಪಾಯಿ ಮಂಜೂರು ಮಾಡಿಕೊಟ್ಟ ನಗರ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀಮತಿ ಶಶಿಕಲಾ ನೀರಬಿದಿರೆ ಹಾಗೂ ಶಾಲಾ ಪರಿಸರ ಅಭಿವೃದ್ಧಿಯಲ್ಲಿ ಸಹಕಾರ ನೀಡಿದ ಸ್ಥಳೀಯ ನಗರ ಪಂಚಾಯತ್ ಮಾಜಿ ಸದಸ್ಯ ದೀರಾ ಕ್ರಾಸ್ತಾ ರವರನ್ನು ಸಂಸ್ಥೆ ವತಿಯಿಂದ ಶಾಲು ಹೊದಿಸಿ ಗೌರವಿಸಿ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಧ್ಯಕ್ಷ ಲಿಂಗಪ್ಪಗೌಡ ಕೇರ್ಪಳ,ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶ್ರೀಮತಿ ಮಂಜುಳಾ ಬಡಿಗೇರ್, ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಡಾ.ರಂಗಯ್ಯ, ಅಮೃತ ಮಹೋತ್ಸವ ಸಮಿತಿಯ ಕೋಶಾಧಿಕಾರಿ ಅಶೋಕ್ ಪ್ರಭು, ಕಾಲೇಜಿನ ಹಿರಿಯ ಉಪನ್ಯಾಸಕ ಕೃಷ್ಣ ಮೊದಲಾದವರು ಉಪಸ್ಥಿತರಿದ್ದರು.

ಪ್ರಾಂಶುಪಾಲರಾದ ಮೋಹನ ಗೌಡ ಬೊಮ್ಮಟ್ಟಿ ಪ್ರಾಸ್ತಾವಿಕ ಸಭಾಭವನ ನಿರ್ಮಾಣಗೊಂಡ ಕಾರ್ಯ ಚಟುವಟಿಕೆ ಮತ್ತು ಧಾನಿಗಳ ಹೆಸರುಗಳನ್ನು ಪ್ರಸ್ತಾಪಿಸಿ ಮಾಹಿತಿ ನೀಡಿ ಸರ್ವರನ್ನು ಸ್ವಾಗತಿಸಿದರು. ಉಪನ್ಯಾಸಕಿ ಸತ್ಯಾವತಿ ಕಾರ್ಯಕ್ರಮ ನಿರೂಪಿಸಿ ಉಪ ಪ್ರಾಂಶುಪಾಲರಾದ ಪ್ರಕಾಶ್ ಮೂಡಿತ್ತಾಯ ವಂದಿಸಿದರು.
ಕಾಲೇಜಿನ ಉಪನ್ಯಾಸಕ ವೃಂದ, ಅಧ್ಯಾಪಕ ವೃಂದ ಬೋಧಕೇತರ ವೃಂದ, ವಿದ್ಯಾರ್ಥಿ ವೃಂದದವರು ಸಹಕರಿಸಿದರು.