ಶನಿವಾರ ಸಂಜೆಯಿಂದ ಸೋಮವಾರ ಬೆಳಗ್ಗಿನ ವರೆಗೆ ಬೆಳ್ಳಾರೆ ಸರಕಾರಿ ಆಸ್ಪತ್ರೆ ಬಂದ್

0

 

ವಾರದ ಏಳು ದಿನವೂ ತೆರೆಯಲು (24 x 7) ಗ್ರಾಮಸ್ಥರ ಆಗ್ರಹ

ಆದಿತ್ಯವಾರವೂ ಮಧ್ಯಾಹ್ನದ ವರೆಗೆ ಆಸ್ಪತ್ರೆಯಲ್ಲಿ ವೈದ್ಯರಿರುತ್ತಾರೆ : ಡಾ.ನಂದಕುಮಾರ್ ಸ್ಪಷ್ಟನೆ

ಬೆಳ್ಳಾರೆ ಸರಕಾರಿ ಆಸ್ಪತ್ರೆ ಶನಿವಾರ ಮಧ್ಯಾಹ್ನ ನಂತರದಿಂದ ಸೋಮವಾರದ ತನಕ ಸಂಪೂರ್ಣ ಬಂದ್. ಬೆಳ್ಳಾರೆಯ ಜನತೆ ಆಕಸ್ಮಿಕವಾಗಿ ಅನಾರೋಗ್ಯ ಮತ್ತು ತೊಂದರೆಗೀಡಾದರೆ ಕೇಳುವವರು ಯಾರೂ ಇಲ್ಲ . ಹಲವು ಸಲ ಮನವಿ ಮಾಡಿದರೂ, ರಾತ್ರಿ ಹೊತ್ತಿನಲ್ಲಿ ಡಾಕ್ಟ್ರ ವ್ಯವಸ್ಥೆ ಭಾಗ್ಯ ಇನ್ನೂ ಬಂದಿಲ್ಲ .

ಪ್ರವೀಣ ನೆಟ್ಟಾರು ಅವರ ಪತ್ನಿ ನೂತನ ಅವರು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರಿಗೆ ಕೂಡ ಮನವಿ ಮಾಡಿದ್ದರು. ಆದರೆ ಈ ವರೆಗೆ ಯಾವುದೇ ಸ್ಪಂದನ ಕಂಡಿಲ್ಲ. ಇಂದಿನ ದಿವಸಗಳಲ್ಲಿ ಅನಾರೋಗ್ಯ ಪೀಡಿತ ಬಡ ಜನರಿಗೆ ಸಾವು ಖಚಿತ ಎಂದು ಬೆಳ್ಳಾರೆಯ ಜನತೆ ಅಭಿಪ್ರಾಯ ಪಡುತ್ತಿದ್ದಾರೆ. ಹದಿನೈದು ದಿವಸಗಳ ಹಿಂದೆ ಸರಕಾರಿ ಕೆ.ಪಿ.ಎಸ್. ಶಾಲೆಯಲ್ಲಿ ವಿದ್ಯಾರ್ಥಿನಿಯೊಬ್ಬಳು ಕಾಲು ಜಾರಿ ಬಿದ್ದು ವೈದ್ಯರು ಇಲ್ಲದೆ ಖಾಸಗಿ ಆಸ್ಪತ್ರೆಗೆ ಹೋಗುವ ಅನಿವಾರ್ಯತೆಗೊಳಗಾಗಿ ತೊಂದರೆ ಅನುಭವಿಸಿದ್ದಾರೆ. ಆರ್ಥಿಕ ಸಹಾಯಕ್ಕಾಗಿ ಸುದ್ದಿ ಪತ್ರಿಕೆಯಲ್ಲಿ ಕೂಡ ವರದಿ ಪ್ರಕಟವಾಗಿದೆ. ಮುಂದೆ ಇಂತಹ ಅನಾಹುತಗಳು ಆಗದಿರಬೇಕಾದರೆ ವೈದ್ಯರು ಆಸ್ಪತ್ರೆಯಲ್ಲಿ ಸದಾ ಇರುವಂತಾಗಬೇಕು.
ಡಿ .ಎಚ್. ಒ. ಮತ್ತು ಇತರ ಅಧಿಕಾರಿಗಳು ಇದರ ಬಗ್ಗೆ ಸರಕಾರಕ್ಕೆ ವಿಷಯವನ್ನು ಶೀಘ್ರ ಮುಟ್ಟಿಸುವುದು , ಹಾಗೂ ಆಸ್ಪತ್ರೆ ಮೇಲ್ದರ್ಜೆಗೇರಿಸಿ ಅಗತ್ಯ ವ್ಯವಸ್ಥೆಗಳನ್ನು ಪೂರೈಸುವುದು ಅಗತ್ಯವಾಗಿದೆ . (ವರದಿ : ಪ್ರೇಮ್ ಬೆಳ್ಳಾರೆ )


ತಾಲೂಕು ಆರೋಗ್ಯಾಧಿಕಾರಿ ಸ್ಪಷ್ಟನೆ

ಶನಿವಾರ, ಆದಿತ್ಯವಾರ ಮಧ್ಯಾಹ್ನದ ವರೆಗೆ ಪಿ.ಎಚ್.ಸಿ. ತೆರೆದಿರುತ್ತದೆ. ಇದು ರಾಜ್ಯವ್ಯಾಪಿ ನಿಯಮ : ಡಾ.ನಂದ ಕುಮಾರ್

ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರ ಶನಿವಾರದಿಂದ ಸೋಮವಾರದ ವರೆಗೆ ಬಂದ್ ಇರುತ್ತದೆ ಎಂಬ ವರದಿಗೆ ತಾಲೂಕು ಆರೋಗ್ಯಾಧಿಕಾರಿ ಡಾ.ನಂದಕುಮಾರ್ ಸ್ಪಷ್ಟನೆ ನೀಡಿದ್ದು ” ರಜಾದಿನಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮಧ್ಯಾಹ್ನದ ವರೆಗೆ ತೆರೆದಿರುತ್ತವೆ. ರಜಾ ಅಲ್ಲದ ಶನಿವಾರ ಸಂಜೆಯ ವರೆಗೆ ವೈದ್ಯರು ಕೇಂದ್ರದಲ್ಲಿರುತ್ತಾರೆ. ಇಂದು ನಾಲ್ಕನೇ ಶನಿವಾರವಾದುದರಿಂದ ಮಧ್ಯಾಹ್ನದ ವರೆಗೆ ಇದ್ದರು. ಆದಿತ್ಯವಾರವೂ ಇರುತ್ತಾರೆ ” ಎಂದು ಸುದ್ದಿಗೆ ತಿಳಿಸಿದ್ದಾರೆ.
ಇದು ರಾಜ್ಯದ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಅನ್ವಯವಾಗುತ್ತದೆ. ಸಮುದಾಯ ಆರೋಗ್ಯ ಕೇಂದ್ರಗಳು ಮಾತ್ರ ದಿನದ 24 ಗಂಟೆ ತೆರೆದಿರಬೇಕೆಂಬ ನಿಯಮವಿದೆ. ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸುವುದಕ್ಕಾಗಿ ನಾವು ಬೆಳ್ಳಾರೆಯನ್ನು ಮಾದರಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನಾಗಿ ಮಾಡಲು ಶಿಫಾರಸು ಕಳುಹಿಸಿದ್ದೇವೆ. ಅದು ಮಂಜೂರು ಕೂಡ ಆಗಿದೆ.  ಈ ಯೋಜನೆ ಅನುಷ್ಠಾನವಾದಾಗ ಬೆಳ್ಳಾರೆಯಲ್ಲಿ ವೈದ್ಯರು, ನರ್ಸ್, ಸಿಬ್ಬಂದಿ ಸಂಖ್ಯೆ ಕೂಡ ಹೆಚ್ಚಾಗುತ್ತದೆ. ಹೆಚ್ಚು ಸಮಯ ವೈದ್ಯಕೀಯ ಸೇವೆ ದೊರೆಯುತ್ತದೆ ” ಎಂದು ತಾಲೂಕು ವೈದ್ಯಾಧಿಕಾರಿ ಡಾ.ನಂದ ಕುಮಾರ್ ತಿಳಿಸಿದ್ದಾರೆ.