ಸುಳ್ಯ ಸ್ನೇಹ ಶಾಲೆಯಲ್ಲಿ ರೈಟ್‌ ಟು ಲಿವ್ ಸಂಸ್ಥೆಯಿಂದ ಉಚಿತ ಕಂಪ್ಯೂಟರ್ ಕೌಶಲ್ಯ ತರಬೇತಿ ಉದ್ಘಾಟನೆ

0

ಬೆಂಗಳೂರಿನಲ್ಲಿ ಕೇಂದ್ರ ಸ್ಥಾನವನ್ನು ಹೊಂದಿರುವ ಕೋಟೆ ಫೌಂಡೇಷನ್ ನ ಆಶ್ರಯದಲ್ಲಿರುವ ರೈಟ್ ಟು ಲಿವ್ ಸಂಸ್ಥೆಯ ವತಿಯಿಂದ ಸುಳ್ಯ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಸಂಸ್ಥೆಯ ಸಹಯೋಗದೊಂದಿಗೆ ಉದ್ಯೋಗ ಆಧಾರಿತ ಉಚಿತ ಕಂಪ್ಯೂಟರ್ ಮತ್ತು ಜೀವನ ಕೌಶಲ್ಯಗಳ ತರಬೇತಿ ನಡೆಯಲಿದೆ.
ಅಕ್ಟೋಬರ್ ತಿಂಗಳಿನಿಂದ ಮುಂದಿನ ಜನವರಿ ತಿಂಗಳ ತನಕ ಈ ತರಬೇತಿ ನಡೆಯಲಿದೆ.
ಅ.5 ರಂದು ಸ್ನೇಹ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೋಟೆ ಫೌಂಡೇಶನ್ ಅಧ್ಯಕ್ಷ ರಘುರಾಮ ಕೋಟೆಯವರ ಉಪಸ್ಥಿತಿಯಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಗಿರೀಶ್ ಭಾರದ್ವಾಜ್ ರವರು ತರಬೇತಿಯನ್ನು ಉದ್ಘಾಟಿಸಿದರು.
” ಇಂದಿನ ಯುಗ ಡಿಜಿಟಲ್ ಯುಗವಾಗಿದ್ದು, ಕಂಪ್ಯೂಟರ್ ಬಳಕೆಯ ತಿಳಿವಳಿಕೆ ಎಲ್ಲರಿಗೂ ಅಗತ್ಯವಾಗಿದೆ. ಯಾವ ಉದ್ಯೋಗ ಮಾಡುವುದಿದ್ದರೂ ಕಂಪ್ಯೂಟರ್ ಜ್ಞಾನವಿದ್ದರೆ ಆ ಉದ್ಯೋಗವನ್ನು ಪರಿಣಾಮಕಾರಿಯಾಗಿ ಮತ್ತು ಪರಿಪೂರ್ಣವಾಗಿ ಮಾಡಲು ಸಾಧ್ಯವಾಗುತ್ತದೆ. ರಘುರಾಮ ಕೋಟೆಯವರು ಮತ್ತು ಡಾ। ಚಂದ್ರಶೇಖರ ದಾಮ್ಲೆಯವರು ಈ ಉಚಿತ ಕಂಪ್ಯೂಟರ್ ತರಬೇತಿಯನ್ನು ಇಲ್ಲಿ ಏರ್ಪಡಿಸಿರುವುದು ಶ್ಲಾಘನೀಯ ” ಎಂದು ಭಾರದ್ವಾಜರು ಹೇಳಿದರು.

ತರಬೇತಿಯನ್ನು ವ್ಯವಸ್ಥೆಗೊಳಿಸಿರುವ ಕೋಟೆ ಫೌಂಡೇಶನ್ ನ ಅಧ್ಯಕ್ಷ ರಘುರಾಮ ಕೋಟೆ ಅವರು ಮಾತನಾಡಿ ” ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಮತ್ತು ಮಹಿಳೆಯರಿಗೆ ಕಂಪ್ಯೂಟರ್ ಜ್ಞಾನ ಅಗತ್ಯವಾಗಿದೆ. ಅದಕ್ಕಾಗಿ ಕೊಂಚ ಮಟ್ಟಿಗೆ ಆಂಗ್ಲ ಭಾಷೆಯ ತಿಳಿವಳಿಕೆಯೂ ಅಗತ್ಯವಿರುವುದರಿಂದ ನಾವು ಉಚಿತ ಕಂಪ್ಯೂಟರ್ ತರಬೇತಿಯ ಜತೆಗೆ ಆಂಗ್ಲ ಭಾಷೆಯ ಕೋಚಿಂಗ್ ಕೂಡ ನೀಡ ಬಯಸುತ್ತೇವೆ. ರಾಜ್ಯದ ಹಲವು ಪ್ರದೇಶಗಳಲ್ಲಿ ಕೋಟೆ ಫೌಂಡೇಶನ್ ವತಿಯಿಂದ ಈ ರೀತಿಯ ತರಬೇತಿಗಳ ವ್ಯವಸ್ಥೆಯನ್ನು ಮಾಡಿದ್ದೇವೆ ” ಎಂದು ಹೇಳಿದರು.
ಸಭಾಧ್ಯಕ್ಷತೆ ವಹಿಸಿದ್ದ ಶಾಲೆಯ ಅಧ್ಯಕ್ಷರಾದ ಡಾ। ಚಂದ್ರಶೇಖರ ದಾಮ್ಲೆಯವರು ” ಕಂಪ್ಯೂಟರ್ ಶಿಕ್ಷಣ ಎಲ್ಲ ಕ್ಷೇತ್ರದಲ್ಲಿಯೂ ಅಗತ್ಯವಿದೆ. ಇಲ್ಲಿ ನಾವು ವಿದ್ಯಾರ್ಥಿಗಳಿಗೆ ಮಾತ್ರ ಉಚಿತ ಕಂಪ್ಯೂಟರ ಶಿಕ್ಷಣ ನೀಡುವುದಿಲ್ಲ ವಿದ್ಯಾರ್ಥಿಗಳ ಪೋಷಕರು ಕೂಡ ಈ ತರಬೇತಿಯಲ್ಲಿ ಭಾಗವಹಿಸಬಹುದು. ಕಂಪ್ಯೂಟರ್ ಶಿಕ್ಷಣವೆಂದರೆ ದೊಡ್ಡ ಬಯಲು ಇದ್ದಂತೆ. ಈ ಶಿಕ್ಷಣ ಪಡೆದರೆ ಜೀವನಕ್ಕೆ ಬೇಕಾದ ನೂರಾರು ದಾರಿಗಳು ಕಂಡುಬರುತ್ತದೆ ” ಎಂದರು.
ಪತ್ರಕರ್ತ ಹರೀಶ್ ಬಂಟ್ವಾಳ್ ಶುಭಹಾರೈಸಿ ಮಾತನಾಡಿದರು.
ಸ್ನೇಹ ಶಿಕ್ಷಣ ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆಯವರು ಹಾಗೂ ರೈತ್ ಟು ಲಿವ್ ಸಂಸ್ಥೆಯ ಪ್ರತಿನಿಧಿ ಪ್ರದೀಪ್
ವಂದಿಸಿದರು. ಸ್ನೇಹದ ಹಳೆವಿದ್ಯಾರ್ಥಿ ಹಾಗೂ ಕೋಟೆ ಫೌಂಡೇಶನ್ ಸಹೋದ್ಯೋಗಿ ರಂಜನ್ ಕಲ್ಚಾರ್, ವೆಂಕಟ್‌ರಾಜ್, ಹಲವಾರು ಮಂದಿ ವಿದ್ಯಾರ್ಥಿ ಪೋಷಕರು ಸ್ನೇಹ ಶಿಕ್ಷಣ ಸಂಸ್ಥೆಯ ಸಿಬ್ಬಂದಿ ಉಪಸ್ಥಿತರಿದ್ದರು.  

ಉಚಿತ ತರಬೇತಿಯಲ್ಲಿ ಮೈಕ್ರೋಸಾಫ್ಟ್ ಆಫೀಸ್ 365, ಫೋಟೋಶಾಪ್, ಕ್ಯಾನ್ವ, ಮೈಕ್ರೋಸಾಫ್ಟ್ ಪಬ್ಲಿಷರ್ (ಡಿ.ಟಿ.ಪಿ.),
ಕನ್ನಡ ಮತ್ತು ಇಂಗ್ಲಿಷ್ ಟೈಪಿಂಗ್, ಟ್ಯಾಲಿ ಜಿಎಸ್‌ಟಿ ಮತ್ತು ಆನ್ಲೈನ್ ಬ್ಯಾಂಕಿಂಗ್, ವೆಬ್ಸೈಟ್ ಡಿಸೈನ್, ಗ್ರಾಫಿಕ್ಸ್ ಡಿಸೈನ್, ಕ್ಲೌಡ್ ಆಫೀಸ್, ಆಡಿಯೋ ವಿಡಿಯೋ ಎಡಿಟಿಂಗ್, ಲೈಫ್ ಸ್ಕಿಲ್ಸ್, ಸ್ಪೋಕನ್ ಇಂಗ್ಲೀಷ್ ರೆಸ್ಯೂಮ್ , ಇಂಟರ್ ವ್ಯೂ ಪ್ರಿಪರೇಶನ್ ಬಗ್ಗೆ ತರಬೇತಿ ನೀಡಲಾಗುವುದು. 18 ರಿಂದ 45 ವಯೋಮಿತಿಯ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಸಂಸ್ಥೆಯ ವತಿಯಿಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆಸಕ್ತರು 9916087028 ಅಥವಾ venkatraj@righttolive.org ಮತ್ತು ವೆಬ್ ಸೈಟ್ www.righttolive.org ಅಥವಾ ಸ್ನೇಹ ಶಿಕ್ಷಣ ಸಂಸ್ಥೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.