ಸುಳ್ಯ ಸ.ಮಾ.ಹಿ.ಪ್ರಾ.ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳ, ಹಿರಿಯ ಶಿಕ್ಷಕರ ಮತ್ತು ಶಿಕ್ಷಣ ಪ್ರೇಮಿಗಳ ಸಮಾವೇಶ

0

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹಿರಿಯ ವಿದ್ಯಾರ್ಥಿಗಳ ಕಲರವ

ಸಮಾವೇಶದಲ್ಲಿ ಹಿರಿಯ ಶಿಕ್ಷಕರಿಗೆ ಫಲ ಪುಷ್ಪ ನೀಡಿ ಗೌರವವಂದನೆ

ಸುಳ್ಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಇದರ ಹಿರಿಯ ವಿದ್ಯಾರ್ಥಿಗಳ ಹಿರಿಯ ಶಿಕ್ಷಕರ ಮತ್ತು ಶಿಕ್ಷಣ ಪ್ರೇಮಿಗಳ ಸಮಾವೇಶ ಮೇ ೫ ರಂದು ಸುಳ್ಯ ಅಮೃತ ಭವನದಲ್ಲಿ ನಡೆಯಿತು.


ಸಮಾವೇಶದಲ್ಲಿ ಈ ಶಾಲೆಯಲ್ಲಿ ಕಲಿತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹಲವಾರು ಮಂದಿ ಹಳೆ ವಿದ್ಯಾರ್ಥಿಗಳು ಸಾಧಕರು, ವೈದ್ಯರುಗಳು ಶಿಕ್ಷಕರು ಭಾಗವಹಿಸಿ ಸಮಾವೇಶದಲ್ಲಿ ಕಲರವ ಮೂಡಿಸಿದರು.


ಸಮಾವೇಶದ ಅಧ್ಯಕ್ಷತೆಯನ್ನು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಂ ಬಿ ಸದಾಶಿವ ವಹಿಸಿದ್ದರು. ಕಾರ್ಯಕ್ರಮದ ಪ್ರಸ್ತಾವಿಕ ಮಾತನಾಡಿದ ಸಮಿತಿಯ ಸಂಚಾಲಕ ಆರ್ ಕೆ ಭಟ್ ಈ ಶಾಲೆಯಲ್ಲಿ ನಮ್ಮ ಹಳೆಯ ನೆನಪುಗಳಷ್ಟೇ ಅಲ್ಲ ನಮ್ಮಲ್ಲಿ ಉದಾತ್ತ ಮೌಲ್ಯಗಳನ್ನು ಬಿತ್ತಿ ಬದುಕಿನಲ್ಲಿ ಸಾಧನೆ ಮಾಡುವಂತೆ ಪ್ರೇರಣೆ ನೀಡಿ ಇಂದು ನಾವು ಏನಾಗಿದ್ದೇವೋ ಅದಕ್ಕೆ ಕಾರಣವಾದ ಮತ್ತು ಪ್ರಭಾವ ಬೀರಿದ ನಮ್ಮ ಹೆಮ್ಮೆಯ ಶಾಲೆಯ ಅಭಿವೃದ್ಧಿ ನಮ್ಮ ಕೈಯಲ್ಲಿ ಇದೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಸ್ಪರ್ಧಾತ್ಮಕ ವಿರುವ ಈ ಯುಗದಲ್ಲಿ ಸರಕಾರಿ ಶಾಲೆಗಳನ್ನು ಮತ್ತು ನಾವು ಕಲಿತ ಶಾಲೆಗಳನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ೧೧೨ ವರ್ಷಗಳ ಹಿರಿಯ ಮಂದಿರವಾಗಿರುವ ಈ ಸಂಸ್ಥೆಯನ್ನು ಆಧುನಿಕ ಪರಿಕರ, ಡಿಜಿಟಲ್ ವರ್ಷಗಳೊಂದಿಗೆ ಸ್ಪರ್ಧಾತ್ಮಕ ಜಗತ್ತಿಗೆ ವಿದ್ಯಾರ್ಥಿಗಳನ್ನು ಅಣಿಗೊಳಿಸುವ ಜವಾಬ್ದಾರಿ ಕೇವಲ ಇಲಾಖೆ ಮತ್ತು ಸರಕಾರದ ಜವಾಬ್ದಾರಿಯಷ್ಟೇ ಅಲ್ಲ ಇಲ್ಲಿ ಓದಿ ಬೆಳೆದ ನಮ್ಮೆಲ್ಲರದ್ದೂ ಆಗಿರುತ್ತದೆ. ಈ ನೆಟ್ಟಿನಲ್ಲಿ ಈ ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಸಂಕಲ್ಪ ತೊಟ್ಟಿದ್ದು ಅನೇಕ ಕನಸುಗಳನ್ನು ಅರವಿ ಬಿಟ್ಟು ನೀಲ ನಕಾಶೆಗಳನ್ನು ತಯಾರಿಸಿದ್ದೇವೆ. ನಮ್ಮ ಅನೇಕ ಸಹಪಾಠಿಗಳು ಸಕಾರಾತ್ಮಕವಾಗಿ ಸ್ಪಂದಿಸುತ್ತಿರುವುದು ನಮ್ಮ ಉರುಪನ್ನು ಹೆಚ್ಚಿಸಿದ್ದು ಮುಂದಿನ ದಿನಗಳಲ್ಲಿ ಈ ಒಂದು ಸಂಸ್ಥೆಯನ್ನು ಭವ್ಯವಾಗಿ ನಿರ್ಮಿಸಲು ಈ ಶಾಲೆಯ ಎಲ್ಲಾ ಹಳೆ ವಿದ್ಯಾರ್ಥಿಗಳ ಸಹಕಾರವನ್ನು ಕೋರುತ್ತಿದ್ದೇವೆ ಎಂದು ಹೇಳಿದರು.


ಈ ಸಂದರ್ಭದಲ್ಲಿ ದೂರ ದೂರದ ಊರಿನಿಂದ ಬಂದ ಹಿರಿಯ ವಿದ್ಯಾರ್ಥಿಗಳನ್ನು ಮತ್ತು ಹಿರಿಯ ಶಿಕ್ಷಕರನ್ನು ಅಭಿನಂದಿಸಿ ಭಾವುಕರಾದರು.
ವೇದಿಕೆಯಲ್ಲಿ ಹಿರಿಯ ಶಿಕ್ಷಕರುಗಳಾದ ಶ್ರೀಮತಿ ಕಮಲಾಕ್ಷಿ ಕೆ, ಶಿವ ಶಂಕರ್ ಭಟ್, ಕೃಷ್ಣನಾವಡ, ಕೇಪಣ್ಣ ಎನ್ ಆರ್, ಕೆ ಸೋಮಯ್ಯ ಗೌಡ ಕುತ್ಪಾಜೆ, ಅಮೃತ ಭವನ ಸಮಿತಿ ಅಧ್ಯಕ್ಷ ಎನ್ ಜಯಪ್ರಕಾಶ್ ರೈ, ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ರವಿರಾಜ್ ಕಮಿಲಡ್ಕ, ಹಿರಿಯ ವಿದ್ಯಾರ್ಥಿಗಳಾದ ವೆಂಕಟೇಶ್ ಪ್ರಭು, ಶ್ರೀನಾಥ್ ಅವಧೂತ ಮೊದಲಾದವರು ಉಪಸ್ಥಿತರಿದ್ದರು.


ಕಾರ್ಯಕ್ರಮದ ಆರಂಭದಲ್ಲಿ ಅಗಲಿದ ಹಿರಿಯ ವಿದ್ಯಾರ್ಥಿಗಳಿಗೆ ಒಂದು ನಿಮಿಷದ ಮೌನ ಪ್ರಾರ್ಥನೆ ನಡೆಸಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ದೀಪ ಬೆಳಗಿಸಿ ಸಮಾವೇಶವನ್ನು ಉದ್ಘಾಟಿಸಿದರು.


ಬಳಿಕ ಸುಳ್ಯ ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ ಶಾಲೆಯ ಹಿರಿಯ ಶಿಕ್ಷಕರುಗಳಾದ ರಾಷ್ಟ್ರ ಪ್ರಶಸ್ತಿ ವಿಜೇತ ಶಿವಶಂಕರ್ ಭಟ್, ಎನ್ ಆರ್ ಕೇ ಪಣ್ಣ, ಶ್ರೀಮತಿ ಕಮಲಾಕ್ಷಿ, ಸುಂದರ ಗೌಡ, ಏನ್ ಮಾಧವ ಗೌಡ, ಶ್ರೀಮತಿ ಜೋಸೆಫಿನ್ ಡಿಸೋಜಾ, ಶ್ರೀಮತಿ ವಾರಿಜಾ, ಕೃಷ್ಣ ನಾವಡ, ಶ್ರೀಮತಿ ಚಂಪಾ, ಶ್ರೀಮತಿ ಕಲಾವತಿ, ಶ್ರೀಮತಿ ದೇವಕಿ ಪಿ, ಕೆ ಸೋಮಯ್ಯ ಗೌಡ ಕುತ್ಪಾಜೆ ಇವರಿಗೆ ಫಲ ಪುಷ್ಪ ನೀಡಿ ಗೌರವಿಸಲಾಯಿತು.


ಈ ಶಾಲೆಯಲ್ಲಿ ಕಲಿತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರು ಹಾಗೂ ವೈದ್ಯರುಗಳು ಸಮಾವೇಶದಲ್ಲಿ ತಮ್ಮ ವಿದ್ಯಾರ್ಥಿ ಜೀವನದ ಅನುಭವ ಮತ್ತು ತಮ್ಮ ತಮ್ಮ ಶಿಕ್ಷಕರ ನೆನಪುಗಳನ್ನು ಪರಿಚಯಿಸಿ ಸಂತೋಷವನ್ನು ಹಂಚಿಕೊಂಡರು.


ಇಡೀ ಸಮಾವೇಶವೇ ಸಂತೋಷ ತುಂಬಿದ ಕ್ಷಣಗಳಾಗಿ ಮಾರ್ಪಟ್ಟವು. ಹಲವಾರು ವರ್ಷಗಳ ಬಳಿಕ ತಮ್ಮ ಬಾಲ್ಯ ಜೀವನದ ಗೆಳೆಯರನ್ನು ಕಂಡು ಪರಸ್ಪರ ಖುಷಿ ಅನಿಸುತ್ತಿದ್ದ ದೃಶ್ಯ ಎಲ್ಲೆಡೆ ಕಂಡು ಬರುತ್ತಿತ್ತು.


ಕಾರ್ಯಕ್ರಮದಲ್ಲಿ ಹಿರಿಯ ವಿದ್ಯಾರ್ಥಿ ಫೇಸ್ಬುಕ್ ಲೈವ್ ವತಿಯಿಂದ ಸಂಗೀತ ರಸಮಂಜರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ನೊಂದಣಿ ವಿಭಾಗದಲ್ಲಿ ಶಿಕ್ಷಕರುಗಳಾದ ಪ್ರೇಮವತಿ, ಹೇಮಲತಾ, ಲೀಲಾವತಿ ಹಳೆ ವಿದ್ಯಾರ್ಥಿಗಳಾದ ಸುಶ್ಮಿತಾ, ಸುಮತಿ, ಮಲ್ಲಿಕಾ ಸಹಕರಿಸಿದರೆ ಸಭಾ ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿಗಳಾದ ಕೆ ಗೋಕುಲ್ ದಾಸ್, ಅಬ್ದುಲ್ ರಶೀದ್ ಜಟ್ಟಿಪಳ್ಳ, ಸುನಂದಾ ಶೆಟ್ಟಿ ಮೊದಲಾದವರು ಸಹಕರಿಸಿದರು.
ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಸುನಂದ ಸ್ವಾಗತಿಸಿ ಕೆ ಗೋಕುಲ್ ದಾಸ್ ವಂದಿಸಿದರು. ಹಿರಿಯ ವಿದ್ಯಾರ್ಥಿ ಶಿವರಾಮ ಕೇವಳ ಕಾರ್ಯಕ್ರಮ ನಿರೂಪಿಸಿದರು.