ಸುಳ್ಯ ತಾಲೂಕು ಆಸ್ಪತ್ರೆಗೆ ಖಾಯಂ ಪ್ರಸೂತಿ ತಜ್ಞರ ನೇಮಕಕ್ಕೆ ಯಾಕೆ ಪ್ರಯತ್ನಿಸಿಲ್ಲ

0

ಖಂಡನೆ ಮಾಡುವವರಿಗೆ ಸಿಬ್ಬಂದಿಗಳ ಸಮಸ್ಯೆ ಅರಿಯದಾಯಿತೇ?

ಸಮಸ್ಯೆಗಳ ಕುರಿತು ಲೋಕಾಯುಕ್ತಕ್ಕೆ ದೂರು ನೀಡುತ್ತೇವೆ : ಕೆ.ಆರ್.ಎಸ್ ಪಕ್ಷ

ಸುಳ್ಯ ತಾಲೂಕು ಆಸ್ಪತ್ರೆಗೆ ಖಾಯಂ ಪ್ರಸೂತಿ ತಜ್ಞರ ನೇಮಕಕ್ಕೆ ಯಾಕೆ ಯಾರೂ ಪ್ರಯತ್ನಿಸಿಲ್ಲ ಎಂದು ಕೆ.ಆರ್.ಎಸ್. ಪಕ್ಷದ ಪ್ರತಿನಿಧಿಗಳು ಪ್ರಶ್ನಿಸಿದ್ದಾರೆ.

ಮೇ.22 ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಮಿತಿಯ ಜಿಲ್ಲಾಧ್ಯಕ್ಷ ವೇಣುಗೋಪಾಲರು, ತಾಲೂಕು ಆಸ್ಪತ್ರೆಯಲ್ಲಿ ಪ್ರಸೂತಿ ತಜ್ಞರಾಗಿರುವ ಡಾ.ವೀಣಾರವರಿಂದ ಆಗುತ್ತಿರುವ ತೊಂದರೆಗಳ ಕುರಿತು ಆಸ್ಪತ್ರೆ ಸಿಬ್ಬಂದಿಗಳು ಹಾಗೂ ಸಾರ್ವಜನಿಕರ ದೂರಿನ ಹಿನ್ನಲೆಯಲ್ಲಿ ನಾವು ಆಸ್ಪತ್ರೆಯ ಆಡಳಿತಾಧಿಕಾರಿಗಳಿಗೆ ದೂರು ನೀಡಿದ್ದೆವು. ದಿನ ಕಳೆದರೂ ನಮ್ಮ ದೂರಿಗೆ ಅವರು ಸ್ಪಂದನೆ ನೀಡದಿರುವುದರಿಂದ,ಪಕ್ಷದ ವತಿಯಿಂದ ಅಭಿಯಾನ ನಡೆಸಬೇಕಾಯಿತು. ಅಲ್ಲಿ ಆಡಳಿತಾಧಿಕಾರಿಗಳು ಡಾ.ವೀಣಾ ಅವರಿಗೆ ಯಾಕೆ ಬೆಂಬಲ ನೀಡುತ್ತಿದ್ದಾರೆಂದು ನಾವು ಪ್ರಶ್ನಿಸಿದ್ದೇವೆ. ಆದರೂ ನಮ್ಮ ದೂರಿಗೆ ಅವರು ಉತ್ತರ ನೀಡಿಲ್ಲ. ಸಮಸ್ಯೆಯನ್ನು ಪ್ರಶ್ನಿಸಿದರೆ ನಾವು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದೇವೆ ಎಂದು ನಮ್ಮ ವಿರುದ್ಧ ದೂರು ಬರೆಯುತ್ತಾರೆ. ಆಸ್ಪತ್ರೆಯ ಮಾಜಿ ರಕ್ಷಾ ಸಮಿತಿಯವರು ಕೂಡಾ ಸಿಬ್ಬಂದಿಗಳ ಸಮಸ್ಯೆ ಅರಿಯದೇ ಡಾ.ವೀಣಾ ಪರ ಮಾತನಾಡುತ್ತಾರೆ.

ನಮ್ಮನ್ನು ಗೂಂಡಾಗಳೆಂದು ಕರೆಯುತ್ತಾರೆ. ಇಷ್ಟೇಲ್ಲ ಹೇಳುವ ಅವರು ಖಾಯಂ ಪ್ರಸೂತಿ ತಜ್ಞರ ನೇಮಕಕ್ಕೆ ಯಾಕೆ ಪ್ರಯತ್ನಿಸಿಲ್ಲ ಎಂದ ಅವರು ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ಸಾರ್ವಜನಿಕ ರು ನಮಗೆ ದೂರು ನೀಡಿದ್ದು ಮುಂದೆ ನಾವು ಲೋಕಾಯುಕ್ತಕ್ಕೆ ದೂರು ನೀಡುತ್ತೇವೆ. ಸಮಸ್ಯೆಯನ್ನು ಸುಳ್ಯದವರೇ ಪ್ರಶ್ನಿಸಬೇಕೆಂದು ಏನೂ ಇಲ್ಲ. ಸಮಸ್ಯೆ ಎಂದಾಗ ಅದರ ವಿರುದ್ಧ ನಾವು ಯಾವತ್ತೂ ಸುಮ್ಮನಿರುವುದಿಲ್ಲ ಎಂದು‌ ಹೇಳಿದರು.

ಸಮಿತಿಯ ಉಪಾಧ್ಯಕ್ಷ ಐವನ್ ಮಾತನಾಡಿ, ಸಮಸ್ಯೆಗಳನ್ನು ಆಸ್ಪತ್ರೆಯ ಆಡಳಿತಾಧಿಕಾರಿಗಳ ಎದುರಿಟ್ಟು ಪರಿಹಾರ ಕೊಡಿ ಎಂದು ನಾವು ಕೇಳಿದ್ದಷ್ಟೆ. ಆ ಸಂದರ್ಭ ನಮ್ಮ ಧ್ವನಿ ಸ್ವಲ್ಪ ರೈಸ್ ಆಗಿತ್ತು. ಹಾಗೆ ಆಗದಿದ್ದರೆ ಕೆಲಸವೂ ಆಗುವುದಿಲ್ಲ” ಎಂದು ಅವರು ಹೇಳಿದರು.

ಕೆ.ಆರ್.ಎಸ್. ಪಕ್ಷದ ಲೋಕಸಭಾ ಅಭ್ಯರ್ಥಿ ರಂಜಿನಿ ಮೊಟ್ಟೆಮನೆ ಮಾತನಾಡಿ, “ಸಮಸ್ಯೆಗಳನ್ನು ಪ್ರಶ್ನೆ ಮಾಡದಿದ್ದರೆ ಸರಿಯಾಗೋದು ಹೇಗೆ? ಆ ಕೆಲಸವನ್ನು ನಾವು ಮಾಡಿದ್ದೇವೆ. ಆದರೆ ನಮ್ಮ ಮನವಿಗಳಿಗೆ ಅಲ್ಲಿ ಸ್ಪಂದನೆ ಸಿಕ್ಕಿಲ್ಲ. ನಮ್ಮ ಹೋರಾಟಕ್ಕೆ ಯಾರೇ ಖಂಡನೆ ಮಾಡಿದರೂ ನಾವು ಹೆದರುವುದಿಲ್ಲ. ಇಲ್ಲಿರುವ ಸಮಸ್ಯೆ ಸರಿಯಾಗುವ ತನಕ ಹೋರಾಟ ಇರುತ್ತದೆ ಎಂದರಲ್ಲದೆ, ತಾಲೂಕು ಆಸ್ಪತ್ರೆಯಲ್ಲಿ ಖಾಯಂ ಪ್ರಸೂತಿ ತಜ್ಞರು ಇರಬೇಕು. ಈ ಕುರಿತು ಇಲ್ಲಿಯ ಶಾಸಕರು ಆಸಕ್ತಿ ವಹಿಸಬೇಕು. ಜನರು ಕೂಡಾ ಶಾಸಕರನ್ನು ಈ ಕುರಿತು ಕೇಳಬೇಕು ಎಂದು ಅವರು ಹೇಳಿದರು.

” ಆಸ್ಪತ್ರೆಯ ಸಿಬ್ಬಂದಿಗಳು ಡಾ.ವೀಣಾರಿಂದ ಆಗುವ ಸಮಸ್ಯೆಯ ಕುರಿತು ದೂರು ನೀಡಿದ್ದಾರೆ. ಅದನ್ನು ನಾವು ಆಸ್ಪತ್ರೆಯ ಆಡಳಿತಾಧಿಕಾರಿಗಳಿಗೆ ತಿಳಿಸಿದ್ದೇವೆ. ಆದರೆ ದೂರು ನೀಡಿದವರ ಹೆಸರನ್ನು ಬಹಿರಂಗ ಪಡಿಸೋದಿಲ್ಲ.‌ ಸಂದರ್ಭ ಬಂದಾಗ ಹೇಳೋಣ ಎಂದು ಪತ್ರಕರ್ತರ ಪ್ರಶ್ನೆಗೆ ಜಿಲ್ಲಾಧ್ಯಕ್ಷ ವೇಣುಗೋಪಾಲ್ ಉತ್ತರಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿತಾ ರೆಸೋರಿಯಾ, ಜಿಲ್ಲಾ ಕಾರ್ಯದರ್ಶಿ ನೌಫಲ್, ಸದಸ್ಯ ಡಿ.ಎಂ.ಶಾರಿಕ್ ಇದ್ದರು.