ಜಯನಗರ: ದಿ. ರಿಚಡ್ ಕ್ರಾಸ್ತರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆ

0

ರಿಚರ್ಡ್ ಕ್ರಾಸ್ತ ರವರು ಅವಿರತ ಶ್ರಮಜೀವಿ ಮತ್ತು ನಿಷ್ಠಾವಂತ ಸಮಾಜ ಸೇವಕರಾಗಿದ್ದರು :ಫಾದರ್ ವಿಕ್ಟರ್ ಡಿಸೋಜ

ತನ್ನ ಕಷ್ಟದ ಬದುಕಿನೊಂದಿಗೆ ಮತ್ತೊಬ್ಬರ ಕಷ್ಟಕ್ಕೆ ಸ್ಪಂದಿಸುವ ವ್ಯಕ್ತಿ ರಿಚರ್ಡ್ ಕ್ರಾಸ್ತ :ಸೂರ್ಯನಾರಾಯಣ ಭಟ್

ಜಯನಗರ ಆಟೋ ಚಾಲಕರಾಗಿ ದುಡಿಯುತ್ತಿದ್ದ ಸಮಾಜಮುಖಿ ಸೇವೆಗಳ ಮೂಲಕ ಗುರುತಿಸಿಕೊಂಡಿದ್ದ ದಿವಂಗತ ರಿಚರ್ಡ್ ಕ್ರಾಸ್ತ ರವರ ಸಾರ್ವಜನಿಕ ಶ್ರದ್ಧಾಂಜಲಿ ಸಭೆ ಜಯನಗರದಲ್ಲಿ ಜೂನ್ 23ರಂದು ನಡೆಯಿತು.

ಸುಳ್ಯ ಸಂತ ಬ್ರಿಜಿಡ್ಸ್ ಚರ್ಚ್ ನ ಫಾದರ್ ವಿಕ್ಟರ್ ಡಿಸೋಜ ರವರು ರಿಚರ್ಡ್ ಕ್ರಾಸ್ತರವರ ಭಾವಚಿತ್ರಕ್ಕೆ ದೀಪ ಬೆಳಗಿಸಿ, ಪುಷ್ಪಾರ್ಚನೆ ಗೈದು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಬಳಿಕ ಸಭೆಯಲ್ಲಿ ಭಾಗವಹಿಸಿದ ಗಣ್ಯರುಗಳು ಮತ್ತು ಸ್ಥಳೀಯ ನಿವಾಸಿಗಳಿಂದ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಒಂದು ನಿಮಿಷ ಮೌನಚರಣೆ ನಡೆಸಿ ಅವರ ಆತ್ಮಕ್ಕೆ ಶಾಂತಿ ಕೋರಿದರು.

ಸ್ಥಳೀಯ ನಿವಾಸಿ ಹಿರಿಯ ವಕೀಲರಾದ ಸೂರ್ಯನಾರಾಯಣ ಭಟ್ ಪ್ರಥಮವಾಗಿ ನುಡಿ ನಮನ ಸಲ್ಲಿಸಿ ಮಾತನಾಡಿ ‘ರಿಚರ್ಡ್ ಕ್ರಾಸ್ತ ರವರು ಸಮಾಜ ಸೇವಕ ಮತ್ತು ಕಠಿಣ ಶ್ರಮಜೀವಿ ಮತ್ತು ಒಬ್ಬ ಉತ್ತಮ ಹೋರಾಟಗಾರರು ಆಗಿದ್ದರು ಎಂದರು. ಅವರು ಮಾಡಿರುವ ಹೋರಾಟ ಸಮಾಜದಲ್ಲಿರುವ ಧೀನ ದಲಿತರ ಪರವಾಗಿ ಇತ್ತು. ಕಮ್ಯುನಿಸ್ಟ್ ಸಿದ್ದಾಂತವನ್ನು ಮೈಗೂಡಿಸಿಕೊಂಡಿದ್ದ ಅವರು, ಜಯನಗರದ ಬಹುತೇಕ ಸಂಘ ಸಂಸ್ಥೆಗಳಲ್ಲಿ ಅವರು ದುಡಿದ ಬೆವರಿನ ಹನಿ ಇದೆ ಎಂದು ಹೇಳಿದರು.


ಚರ್ಚಿನ ಧರ್ಮ ಗುರುಗಳಾದ ವಿಕ್ಟರ್ ಡಿಸೋಜ ರವರು ಮಾತನಾಡಿ ಮನುಷ್ಯರ ಜೀವನವು ಪಾವನವಾಗಬೇಕಾದರೆ ಅವರ ಜೀವನದಲ್ಲಿ ಸಮಾಜಮುಖಿ ಚಿಂತನೆಗಳು ಇರಬೇಕು.ಉರಿಯುವ ದೀಪದ ಬತ್ತಿ ತನ್ನ ಬೆಳಕನ್ನು ಪ್ರಪಂಚಕ್ಕೆ ನೀಡಿ ತಾನು ಉರಿದು ಹೋಗುವ ಸಂದರ್ಭ ಅದು ತನ್ನ ಬಗ್ಗೆ ಚಿಂತಿಸುವುದಿಲ್ಲ.ಅದೇ ರೀತಿಯ ಜೀವನವನ್ನು ರಿಚರ್ಡ್ ಕ್ರಾಸ್ತಾರವರು ಸಾಗಿಸಿದ್ದಾರೆ ಎಂದು ಹೇಳಿದರು.

ಸಭೆಯ ವೇದಿಕೆಯಲ್ಲಿ ಉಪಸ್ಥಿತರಿದ್ದ ನಗರ ಪಂಚಾಯತ್ ಸದಸ್ಯರುಗಳಾದ ಬಾಲಕೃಷ್ಣ ಭಟ್ ಕೊಡಂಕೇರಿ,ಶಿಲ್ಪಾ ಸುದೇವ್,ಡೇವಿಡ್ ದೀರಾ ಕ್ರಾಸ್ತಾ,ಸ್ಥಳೀಯ ರಾಜಕೀಯ ಮುಖಂಡ ರಾಕೇಶ್ ಕುಂಟಿಕಾನ,ಎಸ್ ಡಿ ಎಂ ಸಿ ಅಧ್ಯಕ್ಷ ಮುದ್ದಪ್ಪ ನುಡಿ ನಮನವನ್ನು ಸಲ್ಲಿಸಿ ರಿಚರ್ಡ್ ಕ್ರಾಸ್ತ ರವರ ಆದರ್ಶ ಜೀವನದ ಬಗ್ಗೆ ಮಾತನಾಡಿದರು.
ಸಭೆಯಲ್ಲಿ ಭಾಗವಹಿಸಿದ್ದ ಜಯನಗರ ವಿಕ್ರಮ ಯುವಕ ಮಂಡಲದ ಮಾಜಿ ಅಧ್ಯಕ್ಷರುಗಳಾದ ಸುದೇವ್ ಜಯನಗರ,ಪ್ರವೀಣ್ ಕುಮಾರ್ ಎ ಎಂ,ಜಯನಗರ ಜೇನುಗೂಡು ಸಂಘಟನೆಯ ಸದಸ್ಯ ಎಸ್ ವೈ ಅಬ್ದುಲ್ ರಹಿಮಾನ್,ಕಾರ್ಮಿಕ ಮುಖಂಡ ಸಮಾಜಸೇವಕ ಮಂಜುನಾಥ್ ಬಳ್ಳಾರಿ, ನವೀನ್ ಮಚಾದೋ ಮೊದಲಾದವರು ನುಡಿ ನಮನವನ್ನು ಸಲ್ಲಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕೊರಂಬಡ್ಕ ಶ್ರೀ ಆದಿ ಮೊಗೇರ್ಕಳ ದೇವಸ್ಥಾನದ ಆಡಳಿತ ಸಮಿತಿಯ ಪದಾಧಿಕಾರಿಗಳು,ಸದಸ್ಯರು, ವಿಕ್ರಮ ಯುವಕ ಮಂಡಲದ ಸದಸ್ಯರು,ಜಯನಗರ ಮದರಸ ಸಮಿತಿಯ ಪದಾಧಿಕಾರಿಗಳು ಸದಸ್ಯರು, ಮೈತ್ರಿ ಮಹಿಳಾ ಮಂಡಲದ ಸದಸ್ಯರು, ಶ್ರೀ ಗಜಾನನ ಭಜನಾ ಮಂದಿರದ ಸದಸ್ಯರುಗಳು,ರಿಚರ್ಡ್ ಕ್ರಾಸ್ತಾರವರ ಬಂಧುಮಿತ್ರರು, ಸ್ಥಳೀಯ ನಿವಾಸಿಗಳು ಭಾಗವಹಿಸಿದ್ದರು.
ಸುದ್ದಿ ಪತ್ರಿಕೆಯ ವರದಿಗಾರ ಹಸೈನಾರ್ ಜಯನಗರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.