ಕಾಡಿನ ಮಧ್ಯೆ ವಿವಾಹಿತ ಒಬ್ಬಂಟಿ ಮಹಿಳೆ ತನ್ನ ಸಾಕು ನಾಯಿಯೊಂದಿಗೆ ವಾಸ

0

ಇಂದೋ ಅಥವಾ ನಾಳೆಯೋ ಬೀಳುವ ಸ್ಥಿತಿಯಲ್ಲಿರುವ ಮುರುಕಲು ಮನೆ

ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ

ಒಬ್ಬ ವಿವಾಹಿತ ಒಬ್ಬಂಟಿ ಮಹಿಳೆ ಜತೆಯಲ್ಲಿರುವುದು ತನ್ನ ಮುದ್ದಿನ ಸಾಕು ನಾಯಿ.
ಹೆಸರಿಗೆ ಮಾತ್ರ ಮನೆ ಎಂಬಂತಿರುವ ಇಂದೋ ಅಥವಾ ನಾಳೆಯೋ ಕುಸಿದು ಬೀಳುವ ಸ್ಥಿತಿಯಲ್ಲಿ ಇರುವ ಮುರುಕಲು ಮನೆ.
ಹಾಗೆಂದ ಮಾತ್ರಕ್ಕೆ ಈ ಮಹಿಳೆಗೆ ಯಾರು ಇಲ್ಕವೇ..ಈಕೆ ನಿರ್ಗತಿಕಳೇ.. ಎಂಬ ಪ್ರಶ್ನೆ ಯಂತು ಬಹುತೇಕರಲ್ಲಿ ಮೂಡುವುದು ಸಹಜ.

ಇಂತಹ ಅಸಹನೀಯ ಸ್ಥಿತಿಯಲ್ಲಿ ಬದುಕಿನ ಜಟಕಾ ಬಂಡಿ ನಡಸುತ್ತಿರುವ ಓರ್ವ ಮಹಿಳೆ ಇರುವುದು ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಕೂರ್ನಡ್ಕ ಎಂಬ ಗ್ರಾಮೀಣ ಪ್ರದೇಶದಲ್ಲಿ..

ಈಕೆಯ ಹೆಸರು ಕೆ.ತೇಜಕುಮಾರಿ ಅಂದ ಮಾತ್ರಕ್ಕೆ ಈಕೆ ಕುಮಾರಿಯಲ್ಲ ಶ್ರೀಮತಿ…

ಕಳೆದ ಹತ್ತು ವರ್ಷಗಳ ಹಿಂದೆ ಈಕೆಗೆ ಅದೇ ಗ್ರಾಮದ ನಿವಾಸಿ ಕೊಯಿಂಗಾಜೆ ರಾಧಾಕೃಷ್ಣ ಗೌಡ ಎಂಬವರ ಜತೆ ಮದುವೆಯೂ ಆಗಿತ್ತು. 4-5 ವರ್ಷಗಳ ಕಾಲ ಜತೆ ಜತೆಯಾಗಿ ಸಂಸಾರ ನಡೆಸಿದ್ದರು.
ಕೂರ್ನಡ್ಕದಲ್ಲಿರುವ ಮನೆಯಲ್ಲಿ ತಾಯಿ ದಿ.ಕಮಲ ಮತ್ತು ಗಂಡನೊಂದಿಗೆ ಜೀವನ ಸಾಗಿಸುತ್ತಿದ್ದರು.
2001 ರಲ್ಲಿ ದುರಾದೃಷ್ಟವಶಾತ್ ಮಹಿಳೆಯ ತಾಯಿ ಶ್ರೀಮತಿ
ಕಮಲ ರವರು ಕೊನೆಯುಸಿರೆಳೆದರು. ಇದೇ ಸಂದರ್ಭದಲ್ಲಿ ಗಂಡನು ಮಹಿಳೆಯ ಕೈ ಬಿಟ್ಟು ಹೋಗುತ್ತಾನೆ. ಆದರೂ ಯಾರು ಜೊತೆಯಲ್ಲಿ ಇಲ್ಲದಿದ್ದರೂ ತನ್ನ ತಂದೆ ತಾಯಿ ಮಾಡಿದ ಭೂಮಿಯನ್ನು ಬಿಟ್ಟು ಬರುವುದಿಲ್ಲ ಎಂಬ ಛಲದಿಂದ ಅಲ್ಲಿರುವ ಮನೆಯಲ್ಲಿಯೇ ಜೀವನ ಸಾಗಿಸಿಕೊಂಡು ‌ಬರಲಾರಂಸಿದರು.
ಜೀವನಕ್ಕೆ ಬೇಕಾದಷ್ಟು ಸ್ವಲ್ಪ ಮಟ್ಟಿಗೆ ಆದಾಯವನ್ನು ಇದೇ ಜಾಗದ ಮಣ್ಣಿನಲ್ಲಿ ಸಿಕ್ಕಿದ ಬೆಳೆಯನ್ನು ‌ಮಾರಾಟ ಮಾಡಿ ಜೀವನ ನಡೆಸಿಕೊಂಡು ಬರುತ್ತಿದ್ದಾಳೆ.

ಆದರೆ ವಿಪರ್ಯಾಸವೆಂದರೆ ಈಕೆ ವಾಸವಿರುವ ಮನೆಯನ್ನು ನೋಡಿದರೆ ಮಾತ್ರ ಅಯ್ಯೋ ಅನಿಸುವುದು. ಯಾಕೆಂದರೆ ಇರುವುದು ಎರಡು ಕೋಣೆಗಳು ಮನೆಯ ಮೇಲ್ಚಾವಣಿಯ ಹಂಚುಗಳು ಹಾರಿಹೋಗಿ ಮಳೆಯ ನೀರು ಒಳಗೆ ಸೋರಿ ಮಣ್ಣಿನ ಗೋಡೆಗಳು ನೀರು ಬಿದ್ದು ಕುಸಿಯಲಾರಂಭಿಸಿದೆ. ಮನೆಯನ್ನು ದುರಸ್ತಿ ಮಾಡುವ ಸ್ಥಿತಿಯಲ್ಲಿಲ್ಲ. ಮನೆಯ ಸುತ್ತಲೂ ಕಾಡು ಪೊದೆಗಳು ಆವರಿಸಿಕೊಂಡಿದೆ.


ಗಂಡ ಹೆಂಡತಿ ಮಕ್ಕಳೊಂದಿಗೆ ಬಂಧುಗಳೊಂದಿಗೆ ಸುಂದರ ಸಂಸಾರ ನಡೆಸಿಕೊಂಡು ಬರಬೇಕಾಗಿದ್ದ ಈಕೆಯ ಬದುಕಿನಲ್ಲಿ ದೊಡ್ಡ ಮಟ್ಟದ ಬಿರುಗಾಳಿ ಬೀಸಿರುವುದರಿಂದ ನೊಂದು ಬೆಂದು ತನ್ನ ಮನೋಸ್ಥಿತಿಯು ಮಾನಸಿಕ ಖಿನ್ನತೆಗೊಳಗಾಗಿದೆ. ಹಾಗೆಂದ ಮಾತ್ರಕ್ಕೆ ಈಕೆ ವಿದ್ಯಾವಂತೆಯೂ ಹೌದು.ಪ್ರಾಥಮಿಕ ವಿದ್ಯಾಭ್ಯಾಸವನ್ನು ಸ್ಥಳೀಯ ಬಡ್ಡಡ್ಕ ರಾಮಕೃಷ್ಣ ಅನುದಾನಿತ ಶಾಲೆಯಲ್ಲಿ ಹಾಗೂ ಪ್ರೌಢ ಶಿಕ್ಷಣ ಸುಳ್ಯದ ಜೂನಿಯರ್ ಕಾಲೇಜಿನಲ್ಲಿ ಎಸ್.ಎಸ್.ಎಲ್.ಸಿ ತನಕ ಮಾಡಿರುತ್ತಾರೆ. ತಂದೆ ಮಾಡಿರುವ ಜಾಗದಲ್ಲಿ ಅಡಿಕೆ ಮತ್ತು ರಬ್ಬರ್ ಬೆಳೆಗಳಿದ್ದು ಇದರ ನಿರ್ವಹಣೆ ಈಕೆಯೇ ನಿರ್ವಹಿಸಿಕೊಂಡು ಬರುತ್ತಿದ್ದಾರೆ. ಆಧಾರ್ ಕಾರ್ಡ್, ರೇಶನ್ ಕಾರ್ಡ್ ಮುಂತಾದ ಅಗತ್ಯ ದಾಖಲೆ ಪತ್ರಗಳು ಮಹಿಳೆ ಹೆಸರಿನಲ್ಲಿಯೇ ಇದೆ.


ಯಾರೋ ಮಾಡಿದ ತಪ್ಪಿನಿಂದಾಗಿ ಇಂದು ಮಹಿಳೆಯ ಬಾಳಿನಲ್ಲಿ ಕತ್ತಲು ಆವರಿಸಿರುವುದಂತು ಸತ್ಯ. ಎಲ್ಲವೂ ಇದ್ದು ಸ್ಥಿಮಿತವನ್ನು ಕಳೆದುಕೊಂಡು ಅಸಹಾಯಕ ಪರಿಸ್ಥಿತಿಯಲ್ಲಿ ಬದುಕು‌ ನಡೆಸುತ್ತಿರುವ ಈಕೆಯ ಬಾಳಿನಲ್ಲಿ ಬೆಳಕು ಹರಿಯುವಂತಾಗಬೇಕಾಗಿದೆ. ಮಾನಸಿಕವಾಗಿ ನೊಂದಿರುವ ಮಹಿಳೆಗೆ ಆಸರೆಯ ಅವಶ್ಯಕತೆ ‌ಇದೆ. ಸೂಕ್ತ ವೈದ್ಯರಲ್ಲಿ ಚಿಕಿತ್ಸೆ ಕೊಡಿಸಿ ಆಕೆಯ ಮನಸ್ಥಿತಿಯನ್ನು ಸರಿ ಪಡಿಸುವಲ್ಲಿ ಪ್ರಯತ್ನಿಸಿದರೆ ಬದಲಾವಣೆ ಕಾಣಲು ಸಾಧ್ಯವಿದೆ.
ಮುರಿದು ಬೀಳುವ ಪರಿಸ್ಥಿತಿಯಲ್ಲಿರುವ ಮನೆಯನ್ನು ಕೆಡವಿ ಈಕೆಗೊಂದು ಸುಂದರವಾದ ಚಿಕ್ಕದಾದ ಸೂರೊಂದನ್ನು ಶೀಘ್ರವಾಗಿ ನಿರ್ಮಿಸಿಕೊಡಬೇಕಾದ ಅನಿವಾರ್ಯತೆಯೂ ಇದೆ.

ತಾತ್ಕಾಲಿಕ ವ್ಯವಸ್ಥೆಗೆ
ಮುಂದಾದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ:

ಮಹಿಳೆಯ ಜೀವನದ ಸ್ಥಿತಿ ಗತಿಯನ್ನು ಮನಗಂಡು ಸ್ಥಳೀಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟದ ಪದಾಧಿಕಾರಿಗಳು ಮತ್ತು ಸದಸ್ಯರು ಮತ್ತು ಶೌರ್ಯ ವಿಪತ್ತು ನಿರ್ವಹಣಾ ಘಟಕದವರು ಮತ್ತು ಸ್ಥಳೀಯ ಪಂಚಾಯತ್ ಸದಸ್ಯರು ಸೇರಿಕೊಂಡು ಮನೆಯ ಸುತ್ತಲೂ ಕಾಡು ಪೊದೆಗಳನ್ನು ಕಡಿದು ಸ್ವಚ್ಛಗೊಳಿಸಿ ಮನೆಯನ್ನು ಸ್ವಚ್ಛ ಮಾಡಿ ಮೇಲ್ಛಾವಣಿಗೆ ನೀರು ಒಳ ಬಾರದಂತೆ ತಾತ್ಕಾಲಿಕ ಟರ್ಪಾಲ್ ಹೊದಿಕೆಯನ್ನು ಹಾಸುವ ಮೂಲಕ ಮಾನವೀಯ ಕಾರ್ಯ ಮಾಡಿರುತ್ತಾರೆ. ಸಮರ್ಪಕ ‌ವಿದ್ಯುತ್ ಸಂಪರ್ಕದ ವ್ಯವಸ್ಥೆ ಮಾಡಿಸಿರುತ್ತಾರೆ.
ಅಲ್ಲದೆ ಯೋಜನೆಯ ವತಿಯಿಂದ ಆಕೆಯ ಜೀವನೋಪಾಯಕ್ಕಾಗಿ ತಿಂಗಳಿಗೆ ಒಂದು ಸಾವಿರ ಮಾಸಾಶನ ಒದಗಿಸಿಕೊಡುವ ವ್ಯವಸ್ಥೆ ಮಾಡಿಸಿರುವುದಂತೂ ಶ್ಲಾಘನೀಯ.