ಅಡಕೆಯಲ್ಲಿ ವೈಜ್ಞಾನಿಕ ಕೃಷಿ, ಹನಿ ನೀರಾವರಿ ಬಗ್ಗೆ ಮಾಹಿತಿ ಕಾರ್ಯಕ್ರಮ

0

ಪ್ರತೀ ಮೂರು ವರ್ಷಗಳಿಗೊಮ್ಮೆ ಮಣ್ಣು ಪರೀಕ್ಷೆ ನಡೆಸಿ ಮಣ್ಣಿನಲ್ಲಿರುವ ಪೋಷಕಾಂಶಗಳ ಕೊರತೆಯನ್ನು ಪರಿಗಣಿಸಿ ಅದಕ್ಕೆ ತಕ್ಕಂತೆ ಅಡಕೆ ಸೇರಿದಂತೆ ಇನ್ನಿತರ ಕೃಷಿ ಬೆಳೆಗಳಿಗೆ ರಾಸಾಯನಿಕ ಗೊಬ್ಬರವನ್ನು ಬಳಸಬೇಕು ಎಂದು ವಿಟ್ಲದ ಸಿಪಿಸಿಆರ್ ಐ ವಿಜ್ಞಾನಿ ಡಾ. ನಾಗರಾಜ ಹೇಳಿದರು.

ತೋಟಗಾರಿಕೆ ಇಲಾಖೆ ಹಾಗೂ ಇತರ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾ ಭವನದಲ್ಲಿ ರೈತರಿಗಾಗಿ ಆಯೋಜಿಸಲಾದ ‘ಅಡಕೆಯಲ್ಲಿ ವೈಜ್ಞಾನಿಕ ಕೃಷಿ ಹಾಗೂ ನೀರಾವರಿ ಬಗ್ಗೆ ರೈತರಿಗೆ ಮಾಹಿತಿ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಅಡಕೆಯಂತಹ ವಾಣಿಜ್ಯ ಬೆಳೆಗೆ ಸಾವಯವ ಗೊಬ್ಬರ ಮಾತ್ರ ಬಳಸಿದರೆ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿ ನಿಗದಿತ ಪ್ರಮಾಣದಲ್ಲಿ ರಂಜಕ, ಪೊಟ್ಯಾಸಿಯಂ ಮುಂತಾದ ರಾಸಾಯನಿಕ ಗೊಬ್ಬರವನ್ನು ಅಡಕೆ ಮರದ ಬುಡದಿಂದ ಒಂದೂವರೆ ಅಡಿ ದೂರದಲ್ಲಿ ಹರಡಬೇಕು. ವಾರ್ಷಿಕ ಎರಡು ಬಾರಿಯಾದರೂ ಈ ರೀತಿ ನಿಗದಿತ ಪ್ರಮಾಣದಲ್ಲಿ ಗೊಬ್ಬರ ಹಾಕಿದರೆ ರೈತರು ಉತ್ತಮ ಇಳುವರಿ ಪಡೆಯಬಹುದು ಎಂದವರು ಮಾಹಿತಿ ನೀಡಿದರು.

ಜೈನ್ ಇರಿಗೇಷನ್ ಸಿಸ್ಟಮ್ ಲಿಮಿಟೆಡ್ ನ ಹಿರಿಯ ವಿಜ್ಞಾನಿ ನಿರಂಜನ್ ನಂದಿಪುರ ಅವರು ಹನಿ ನೀರಾವರಿ ಪದ್ಧತಿಯ ಬಗ್ಗೆ ಮಾಹಿತಿ ನೀಡಿ ನೀರಿನ ಕೊರತೆ ಇರುವ ಪ್ರದೇಶಗಳಲ್ಲಿ ಹನಿ ನೀರಾವರಿ ಪದ್ಧತಿ ಅಳವಡಿಸಿದರೆ ಅನಾವಶ್ಯಕವಾಗಿ ನೀರು ಪೋಲಾಗುವುದನ್ನು ತಡೆಯಬಹುದು. ವರ್ಷದ ಎಲ್ಲಾ ದಿನಗಳಲ್ಲೂ ಬೆಳೆಗಳ ಬುಡದಲ್ಲಿ ಮಣ್ಣು ತೇವಾಂಶದಿಂದ ಕೂಡಿರಲು ಈ ಪದ್ಧತಿ ಸಹಕಾರಿಯಾಗುತ್ತದೆ ಎಂದರು.

ಸಹಕಾರಿ ಸಂಘದ ಅಧ್ಯಕ್ಷ ರಾಮಕೃಷ್ಣ ರೈ ಪೇರಾಲುಗುತ್ತು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಂಡೆಕೋಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಯು. ಕುಶಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಅರೆಭಾಷೆ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ರೈತ ಉತ್ಪಾದಕ ಕಂಪೆನಿಯ ಅಧ್ಯಕ್ಷ ವೀರಪ್ಪ ಗೌಡ ಕಣ್ಕಲ್, ವೀರ ವನಿತೆ ಕ್ರೀಡಾ ಮತ್ತು ಕಲಾ ಸಂಘದ ಅಧ್ಯಕ್ಷೆ ವಸಂತಿ ಉಗ್ರಾಣಿಮನೆ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕಿ ಸುಹಾನ ಪಿ.ಕೆ ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನು ಸ್ವಾಗತಿಸಿದರು. ಮಂಡೆಕೋಲು ಗ್ರಾ.ಪಂ‌ ಮಾಜಿ ಅಧ್ಯಕ್ಷೆ ವಿನುತಾ ಪಾತಿಕಲ್ಲು ವಂದಿಸಿದರು. ಶ್ರೀಮತಿ ಮಧುರಾ ಜಗದೀಶ್ ಕಾರ್ಯಕ್ರಮ ನಿರೂಪಿಸಿದರು.