ಹಳೆ ಕಟ್ಟಡ ರಿಪೇರಿ ಬೇಡ : ಎಸ್.ಡಿ.ಎಂ.ಸಿ. ಸಭೆಯಲ್ಲಿ ಒತ್ತಾಯ
ಅಜ್ಜಾವರ ಗ್ರಾಮದ ದೊಡ್ಡೇರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು, ಅದನ್ನು ಕೆಡವಿ ಶಾಸಕರು ಶಾಲೆಗೆ ಭೇಟಿ ನೀಡಿದ ಸಂದರ್ಭ ನೀಡಿದ ಭರವಸೆಯಂತೆ ಹೊಸ ಕಟ್ಟಡವೇ ಮಾಡೋಣ. ಹೊರತು ಇರುವ ಕಟ್ಟಡವನ್ನು ರಿಪೇರಿ ಮಾಡುವುದು ಬೇಡ ಎಂದು ಎಸ್.ಡಿ.ಎಂ.ಸಿ. ಸದಸ್ಯರು ಸಭೆಯಲ್ಲಿ ಆಗ್ರಹಿಸಿರುವ ಘಟನೆ ವರದಿಯಾಗಿದೆ.
ಅ.೮ರಂದು ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ದಯಾನಂದರ ಅಧ್ಯಕ್ಷತೆಯಲ್ಲಿ, ಎಸ್.ಡಿ.ಎಂ.ಸಿ. ಸದಸ್ಯರಿದ್ದು ಶಾಲೆಯಲ್ಲಿ ಸಭೆ ನಡೆಯಿತು.
ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಅಧ್ಯಕ್ಷ ದಯಾನಂದರು ನಮ್ಮ ಶಾಲೆ ದುರಸ್ತಿಗೆ ಸರಕಾರದಿಂದ ಈ ಹಿಂದೆ ಮಂಜೂರಾಗಿದ್ದ ರೂ.೭ ಲಕ್ಷ ಅನುದಾನ ಬಂದಿದೆಯೆಂಬ ಮಾಹಿತಿ ಇಂಜಿನಿಯರ್ರವರು ಹೇಳಿದ್ದಾರೆ. ಈಗ ಕಟ್ಟಡವನ್ನು ದುರಸ್ತಿ ಪಡಿಸುವ ಕಾರ್ಯ ಶೀಘ್ರವೇ ಮಾಡುತ್ತಾರಂತೆ. ಹೊಸ ಕಟ್ಟಡ ಮಾಡುವುದಿಲ್ಲವೆಂತೆ ಎಂದು ಮಾಹಿತಿ ನಮಗೆ ಬಂದಿದೆ ಎಂದರಲ್ಲದೆ ಕಾಮಗಾರಿಯ ವಿವರ ನೀಡಿದರೆನ್ನಲಾಗಿದೆ.
ಈ ವೇಳೆ ಸಭೆಯಲ್ಲಿದ್ದ ಎಸ್.ಡಿ.ಎಂ.ಸಿ. ಸದಸ್ಯರು ಈ ಹಿಂದೆ ಶಾಸಕರು ಶಾಲೆಗೆ ಭೇಟಿ ನೀಡಿದ ಸಂದರ್ಭ ಇಂಜಿನಿಯರ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿದ್ದು, ಸರಕಾರದಿಂದ ಬರುವ ರೂ.೭ ಲಕ್ಷ ಅನುದಾನದಲ್ಲಿ ಸಣ್ಣ ಸಣ್ಣ ಮೂರು ಕೊಠಡಿಗಳ ಕಟ್ಟಡ ಮಾಡುವ ಭರವಸೆ ನೀಡಿದ್ದಾರೆ. ಅವರು ಭರವಸೆ ನೀಡಿದಂತೆ ಅದೇ ರೀತಿ ಆಗಬೇಕು. ಇದೇ ಕಟ್ಟಡ ದುರಸ್ತಿ ಪಡಿಸುವುದಾದರೆ ಅದು ಆಗಲಿಕ್ಕಿಲ್ಲ. ಶಾಸಕರು ಹಾಗೂ ಇಂಜಿನಿಯರ್ರ ಗಮನಕ್ಕೆ ಈ ಕುರಿತು ತರೋಣ ಎಂದು ಅಭಿಪ್ರಾಯಗಳು ವ್ಯಕ್ತವಾದವೆಂದು ತಿಳಿದು ಬಂದಿದೆ.
ಸಭೆಯಲ್ಲಿ ಉಪಾಧ್ಯಕ್ಷೆ ನಾಗವೇಣಿ ಬಿ, ಸದಸ್ಯರುಗಳಾದ ಜಗದೀಶ ಡಿ, ಗಂಗಾಧರ ಎನ್.ಎಸ್., ಉಷಾ ಜ್ಯೊತಿ ಡಿ.ವಿ., ಸತ್ಯವತಿ, ಸುರೇಶ, ಜಯಲಕ್ಷ್ಮೀ ಕೆ.ಎಂ., ವೆಂಕಪ್ಪ, ಮಲ್ಲಿಕಾ, ಮಂಜುನಾಥ ಕೆ., ಹೇಮಲತಾ ಸಿ.ಎನ್, ಭಾಸ್ಕರ ಡಿ.ಎಸ್., ಪ್ರತಿಭಾ ವಿ.ಆರ್., ಚಂದ್ರಶೇಖರ ಡಿ.ಕೆ, ಶಾಂತಿ ಕುಮಾರ್ ಪಿ.ಆರ್., ಬಾಲಕೃಷ್ಣ ಡಿ.ಪಿ., ಗೀತಾ ಡಿ. ಇದ್ದರು.