ಜಾಲ್ಸೂರು : ಕದಿಕಡ್ಕದಲ್ಲಿ ಮಣ್ಣುಹಾಕಿ ಎತ್ತರಿಸುವ ಕಾಮಗಾರಿ

0

ಸ್ಥಳೀಯರ ಆಕ್ಷೇಪ – ತಹಶೀಲ್ದಾರ್, ಶಾಸಕರ ಆಗಮನ

ಕೆಲಸ ನಿಲ್ಲಿಸಲು ಸೂಚನೆ

ಕಟ್ಟಡ ಕಟ್ಟುವ ಉದ್ದೇಶದಿಂದ ರಸ್ತೆ ಬದಿಯ ತಮ್ಮ ಜಾಗಕ್ಕೆ ಮಣ್ಣುಹಾಕಿ ಎತ್ತರಿಸುವ ಕಾಮಗಾರಿಯನ್ನು ಸ್ಥಳದ ಮಾಲಕರು ಮಾಡುತ್ತಿದ್ದು, ಸ್ಥಳೀಯರ ಆಕ್ಷೇಪದ ಮೇರೆಗೆ ತಹಶೀಲ್ದಾರ್ ಹಾಗೂ ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಕೆಲಸ ನಿಲ್ಲಿಸಲು ಸೂಚಿಸಿದ ಘಟನೆ ಜಾಲ್ಸೂರು ಗ್ರಾಮದ ಕದಿಕಡ್ಕ ಎಂಬಲ್ಲಿ ಮೇ‌.17ರಂದು ಸಂಜೆ ನಡೆದಿದೆ.

ಜಾಲ್ಸೂರಿನ ಕದಿಕಡ್ಕದಲ್ಲಿ ಶ್ರೀಮತಿ ಉಷಾ ಕುಸುಮಾಧರ ಗೌಡ ಗೂನಡ್ಕ ಎಂಬವರಿಗೆ ಸೇರಿದ ಸ್ಥಳಕ್ಕೆ ಜೆಸಿಬಿ ಹಾಗೂ ಟಿಪ್ಪರ್ ಮೂಲಕ ಮಣ್ಣು ಹಾಕಿ ಎತ್ತರಿಸುವ ಕಾಮಗಾರಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿತ್ತು. ಉಷಾರವರ ಅಳಿಯ ವೈದ್ಯರಾಗಿದ್ದು ಅಲ್ಲಿ ಆಸ್ಪತ್ರೆ ಕಟ್ಟಡ ಕಟ್ಟುವ ಯೋಚನೆಯಿಂದ ಈ ಕಾಮಗಾರಿ ಮಾಡಲಾಗುತ್ತಿತ್ತೆನ್ನಲಾಗಿದೆ.

ಇದೀಗ ಈ ಜಾಗದ ಸಮೀಪದ ಕಲ್ಲಮುರ ಪರಿಶಿಷ್ಟ ಜಾತಿ ಕಾಲನಿ ನಿವಾಸಿಗಳ ಜಾಗಕ್ಕೆ ತೊಂದರೆಯಾಗುತ್ತಿರುವುದಾಗಿಯೂ, ಅಲ್ಲಿರುವ ಸರಕಾರಿ ಭೂಮಿ ಅತಿಕ್ರಮಣವಾಗುತ್ತಿರುವುದಾಗಿಯೂ, ರಾಶಿ ಹಾಕಿದ ಮಣ್ಣು ಮಳೆಗೆ ಕೊಚ್ಚಿ ಬಂದು ಅಕ್ಕಪಕ್ಕದವರ ಜಾಗಕ್ಕೆ ಮತ್ತು ನೀರು ಹರಿಯುವ ತೋಡಿಗೆ ಸಮಸ್ಯೆಯಾಗುತ್ತಿರುವುದಾಗಿಯೂ ಶಾಸಕಿ ಭಾಗೀರಥಿ ಮುರುಳ್ಯರಿಗೆ ಕೆ.ಎಂ.ಬಾಬು ದೂರು ನೀಡಿದರೆನ್ನಲಾಗಿದೆ.


ಈ ಹಿನ್ನೆಲೆಯಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಮೇ.17 ರಂದು ಸಂಜೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರಲ್ಲದೆ ತಹಶೀಲ್ದಾರ್ ರಿಗೆ ಫೋನ್ ಮಾಡಿ, ಕೂಡಲೇ ಸ್ಥಳಕ್ಕೆ ಬಂದು ಪರಿಶೀಲಿಸಿ ಸಮಸ್ಯೆ ಪರಿಹರಿಸುವಂತೆ ಸೂಚಿಸಿದರು. ಅದರಂತೆ ತಹಶೀಲ್ದಾರ್ ಜಿ.ಮಂಜುನಾಥರು, ಸಂಜೆಯೇ ಆರ್.ಐ. ಅವಿನ್ ರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಸೀಲಿಸಿದರಲ್ಲದೆ, ಕೂಡಲೇ ಕೆಲಸ ನಿಲ್ಲಿಸಲು ಸೂಚಿಸಿದರೆಂದು ತಿಳಿದುಬಂದಿದೆ.

ಈ ಬಗ್ಗೆ ಜಾಗದ ಮಾಲಕರಾದ ಕುಸುಮಾಧರ ಗೌಡರನ್ನು ಸಂಪರ್ಕಿಸಿ ವಿಚಾರಿಸಿದಾಗ ” ನನ್ನ ಪತ್ನಿಗೆ ತವರಿನಿಂದ ಪಾಲಲ್ಲಿ ದೊರೆತ 2 ಎಕ್ರೆ 10 ಸೆಂಟ್ಸ್ ಸ್ಥಳ ಅಲ್ಲಿದೆ. ಅಲ್ಲಿ ಅಳಿಯನಿಗೆ ಆಸ್ಪತ್ರೆ ಕಟ್ಟಿಸುವ ಉದ್ದೇಶದಿಂದ ನಾವು ತಗ್ಗು ಸ್ಥಳಕ್ಕೆ ಮಣ್ಣು ಹಾಕಿ ಎತ್ತರಗೊಳಿಸುವ ಕೆಲಸ ಮಾಡುತ್ತಿದ್ದೆವು. ನಾವು ಯಾರಿಗೂ ತೊಂದರೆ ಮಾಡಿಲ್ಲ. ಅಲ್ಲಿ ಪ.ಜಾತಿಯ ನಾಲ್ಕು ಮನೆಗಳವರು ತುಂಬಾ ವರ್ಷದಿಂದ ವಾಸವಿದ್ದಾರೆ. ನಮ್ಮ ಪಟ್ಟಾ ಲ್ಯಾಂಡಲ್ಲಿ ಅವರಿದ್ದಾರೆ.

ಅವರಿಗೆ ಮನೆಯ ಅಡಿಸ್ಥಳವನ್ನು ಬಿಟ್ಟುಕೊಡಲು ನಾವು ಸಿದ್ಧರಿದ್ದೇವೆ. ಅಲ್ಲಿರುವ 42 ಸೆಂಟ್ಸ್
ಸರಕಾರಿ ಜಾಗ ಇರುವುದಕ್ಕೆ ನಮ್ಮ ಅಕ್ರಮ ಸಕ್ರಮ ಅರ್ಜಿ ಇದೆ. ನಮ್ಮ ಜಾಗಕ್ಕೆ ಲಗ್ತಿ ಇರುವ ನಮ್ಮ ಸ್ವಾಧೀನ ಇರುವ ಭೂಮಿ ಅದು. ಕೆಳಗೆ ಮಣ್ಣು ಕೊಚ್ಚಿ ಹೋಗದಂತೆ ಈ ಮಳೆಗಾಲ ಪ್ಲಾಸ್ಟಿಕ್‌ ಹೊದಿಸುವ ಕಾರ್ಯ ನಾವು ಮಾಡುವವರಿದ್ದೇವೆ. ತಹಶೀಲ್ದಾರರಲ್ಲಿಗೆ ನಾವು ನಾಳೆ ಹೋಗಲಿದ್ದೇವೆ ” ಎಂದು ಹೇಳಿದರು.

ಅಲ್ಲಿ ಸುಮಾರು ನೂರು ವರ್ಷಗಳಿಂದ ಪ.ಜಾತಿಯವರ ಮನೆಗಳಿವೆ. ಹಿಂದೆ ಚಿನ್ನಪ್ಪ ಗೌಡರು ಅವರನ್ನು ಕೂರಿಸಿ, ಅಗರು ಕೂಡ ಮಾಡಿ ಕೊಟ್ಟಿದ್ದರಂತೆ. ಆ ಮನೆಗಳಲ್ಲಿ ಮಾಧವ ಎಂಬವರ ಮನೆ ಮೊನ್ನೆ ಮುರಿದು ಬಿದ್ದಿದೆ. ಅದಕ್ಕಾಗಿ ಮಾಧವರು ಉಳಿದುಕೊಳ್ಳಲು ಶೆಡ್ ನಿರ್ಮಿಸಲು ಹೊರಟಾಗ ಕುಸುಮಾಧರ ಗೌಡರು, ಸುಲೋಚನ ಗೌಡರೆಲ್ಲ ಬಂದು ಶೆಡ್ ಕಟ್ಟದಂತೆ ಜಬರ್ದಸ್ತ್ ಮಾಡಿದ್ದಾರೆ.

ನಾನೂ ಆಗ ಹೋಗಿ ಕೆಲವು ಸಲಹೆ ನೀಡಿದೆ. ಅದನ್ನವರು ಸ್ವೀಕರಿಸಲು ಸಿದ್ಧರಿಲ್ಲ. ಈಗ ಅಲ್ಲಿರುವ ಸರಕಾರಿ ಭೂಮಿಯನ್ನು ದಲಿತರಿಗೆ ಮನೆ ಕಟ್ಟಲು ಬಿಟ್ಟುಕೊಡಬೇಕೆಂದು ನಾವು ತಹಶೀಲ್ದಾರರನ್ನು ಕೇಳಲಿದ್ದೇವೆ ಎಂದು ಪಂಚಾಯತ್ ಸದಸ್ಯರಾದ ಮಾಜಿ ಅಧ್ಯಕ್ಷ ಕೆ.ಎಂ.ಬಾಬು ತಿಳಿಸಿದ್ದಾರೆ.