ಸುಳ್ಯದಲ್ಲಿ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಜನ್ಮದಿನಾಚರಣೆ

0

ಚಿಂತೆ ರಹಿತ ಶಿಕ್ಷಣಕ್ಕೆ ಒತ್ತು ನೀಡಿದವರು ಅರಸರು : ಶಾಸಕಿ ಭಾಗೀರಥಿ ಮುರುಳ್ಯ

“ಗ್ರಾಮೀಣ ಭಾಗದ ಮಕ್ಕಳಿಗೆ ಉನ್ನತ ಶಿಕ್ಷಣ ಸಿಗಬೇಕು. ದೂರದೂರಿಗೆ ಹೋಗಿ ಶಿಕ್ಷಣ ಪಡೆಯುವುದು ಕಷ್ಟವಾಗಿದ್ದ ಕಾಲದಲ್ಲಿ ಹಾಸ್ಟೆಲ್ ಗಳನ್ನು ಸ್ಥಾಪಿಸಿ, ಚಿಂತೆ ರಹಿತ ಶಿಕ್ಷಣಕ್ಕೆ ಒತ್ತು ನೀಡಿದವರು ಮುಖ್ಯಮಂತ್ರಿ ಯಾಗಿದ್ದ ದೇವರಾಜ ಅರಸರು.‌ ಅವರ ಆದರ್ಶಗಳ ನಮಗೆ ಪ್ರೇರಣೆ” ಎಂದು ಶಾಸಕಿ ಭಾಗೀರಥಿ ‌ಮುರುಳ್ಯ‌ ಹೇಳಿದ್ದಾರೆ.

ತಾಲೂಕು ಆಡಳಿತ, ತಾಲೂಕು ಪಂಚಾಯತ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಕೇರ್ಪಳ ದುರ್ಗಾಪರಮೇಶ್ವರಿ ಕಲಾ ಮಂದಿರದಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸುರವರ 109 ನೇ ಜನ್ಮ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದರು.

“ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು.‌ ದೂರದೂರಿಗೆ ಹೋಗಿ ಹೇಗೆ ಪಡೆಯುವುದೆಂಬ ಚಿಂತೆ ಹೆತ್ತವರಲ್ಲಿಯೂ, ಮಕ್ಕಳಲ್ಲಿಯೂ ಆ ಕಾಲದಲ್ಲಿ ಇತ್ತು. ಅದನ್ನರಿತ ಅರಸರು ಹಾಸ್ಟೆಲ್ ಆರಂಭಿಸಿ ಎಲ್ಲರಿಗೂ ಶಿಕ್ಷಣ ಸಿಗುವಂತೆ ಮಾಡಿದರು” ಎಂದು‌ ಶಾಸಕರು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಮಾತನಾಡಿ “ದೂರದೃಷ್ಟಿ ಇಟ್ಟು ಆಡಳಿತ ನಡೆಸಿದ ಧೀಮಂತ ನಾಯಕ ದೇವರಾಜ ಅರಸರು. ಅವರಿಂದಾಗಿ ಪ್ರತೀ ವರ್ಷ ಸಾವಿರ, ಸಾವಿರ ವಿದ್ಯಾರ್ಥಿಗಳು ಹಾಸ್ಟೆಲ್ ಮೂಲಕ ಶಿಕ್ಷಣ ಪಡೆಯುವ ಭಾಗ್ಯ ದೊರೆಯಿತು” ಎಂದು ಹೇಳಿದರು.

ಬಿಸಿಎಂ ಇಲಾಖೆಯ ಹಿರಿಯ ವಿದ್ಯಾರ್ಥಿನಿ ದೀಕ್ಷಿತಾ ಬಿ.ಎನ್. ಉಪನ್ಯಾಸ ನೀಡಿದರು.

ಸುಳ್ಯ ತಹಶೀಲ್ದಾರ್ ಮಂಜುನಾಥ್ ಜಿ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ,ಸುಳ್ಯ‌ ನಗರ ಪಂಚಾಯತ್ ಸದಸ್ಯರುಗಳಾದ ರಿಯಾಜ್ ಕಟ್ಟೆಕಾರ್, ಶರೀಫ್ ಕಂಠಿ, ಶಶಿಕಲಾ ನೀರಬಿದಿರೆ, ಕಿಶೋರಿ ಶೇಟ್, ಶಿಲ್ಪಾ ಸುದೇವ್ ವೇದಿಕೆಯಲ್ಲಿ ಇದ್ದರು.

ವಿದ್ಯಾರ್ಥಿ ನಿಲಯದ ಶೈಕ್ಷಣಿಕ ಸಾಧನೆಗೈದವರನ್ನು ಸನ್ಮಾನಿಸಲಾಯಿತು.
ಮೆಟ್ರಿಕ್ ಪೂರ್ವ ಬಾಲಕರ ನಿಲಯ ಅರಂತೋಡು ಇಲ್ಲಿಯ ಅಡುಗೆ ಸಿಬ್ಬಂದಿ ಶ್ರೀಮತಿ ಪುಷ್ಪಾವತಿ ಎ. ಯವರಿಗೆ ಉತ್ತಮ ಅಡುಗೆಯವರು ಎಂದು ಗೌರವಿಸಲಾಯಿತು.

ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಶ್ರೀಮತಿ ಗೀತಾ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ಜಲಜಾಕ್ಷಿ, ಸತ್ಯಭಾಮ, ವರ್ಷಿತಾ ಶೈಕ್ಷಣಿಕ ಸಾಧಕರ ಪಟ್ಟಿ ವಾಚಿಸಿದರು. ಮೇಲ್ವಿಚಾರಕ ವಿಜಯ್ ಸ್ಪರ್ಧಾ ವಿಜೇತರ ಪಟ್ಟಿ ವಾಚಿಸಿದರು. ಮೇಲ್ವಿಚಾರಕಿ ಲತಾ ಕುಮಾರಿ ವಂದಿಸಿದರು. ಮೇಲ್ವಿಚಾರಕರಾದ ದೀಪಿಕಾ ಕೆ – ಗೀತಾ ಎಸ್.ಕೆ. ಕಾರ್ಯಕ್ರಮ ನಿರೂಪಿಸಿದರು.