ಬಾಳಿಲದ ಕೊಡೆಂಕಿರಿಯಲ್ಲಿ ಮೊಸರು ಕುಡಿಕೆ ಕಾರ್ಯಕ್ರಮ

0

ಭಾವನಾ ಜೀವಿಯಾದ ಮನುಷ್ಯ ಎಲ್ಲದರಲ್ಲೂ ಭಗವಂತನನ್ನು ಕಾಣುತ್ತಾನೆ : ವೆಂಕಟೇಶ್ ಕುಮಾರ್

ಭಾವನಾ ಜೀವಿಯಾದ ಮನುಷ್ಯ ಎಲ್ಲದರಲ್ಲೂ ಭಗವಂತನನ್ನು ಕಾಣುತ್ತೇವೆ. ಇದು ಹಿಂದೂ ಧರ್ಮದ ವಿಶೇಷತೆ. ವ್ಯಕ್ತಿಗಳ ಭಾವಕ್ಕೆ ಅನುಗುಣವಾಗಿ ಭಗವಂತನನ್ನು ಕಾಣುತ್ತೇವೆ. ಕೃಷ್ಣನಿಗೆ ಹಲವು ಮುಖಗಳಲ್ಲಿ ಒಂದು ಭಗವಂತನೆಂದು ಒಪ್ಪಿಕೊಂಡವರಿಗೆ ದೇವರಾಗಿ ಅನುಗ್ರಹಿಸುವುದು, ಇನ್ನೊಂದು ಜನರ ಮಧ್ಯೆಯೇ ಇದ್ದುಕೊಂಡು ಜನರನ್ನು ಉದ್ದರಿಸುವುದು
ಎಂದು ವೆಂಕಟೇಶ್ ಕುಮಾರ್ ಹೇಳಿದರು.

ಅವರು ಆ. 16ರಂದು ಬಾಳಿಲದ ಕೊಡೆಂಕಿರಿ (ಮರೆಂಗಾಲ)ದಲ್ಲಿ ನಡೆದ 16ನೇ ವರ್ಷದ ಮೊಸರು ಕುಡಿಕೆ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡುತ್ತಾ ಅಭಿಪ್ರಾಯಪಟ್ಟರು. ಶ್ರೀಕೃಷ್ಣ ಜನ್ಮಾಷ್ಟಮಿ ಸೇವಾ ಸಮಿತಿ ಅಧ್ಯಕ್ಷ ಬಾಲಕೃಷ್ಣ ಎಂ ಮರೆಂಗಾಲರವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಬಾಳಿಲ ವಿದ್ಯಾಬೋಧಿನೀ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ಯು. ರಾಧಾಕೃಷ್ಣ ರಾವ್ ಉಡುವೆಕೋಡಿ, ಬಾಳಿಲ ಗ್ರಾ.ಪಂ. ಉಪಾಧ್ಯಕ್ಷ ರಮೇಶ್ ರೈ ಅಗಲ್ಪಾಡಿ, ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಯಶೋಧರ ನಾರಾಲು, ಮುಪ್ಪೇರ್ಯ ಶ್ರೀ ಧರ್ಮಶಾಸ್ತಾ ಸೇವಾ ಟ್ರಸ್ಟ್ ನ ಗೌರವಾಧ್ಯಕ್ಷ ಅಶೋಕ್ ಶೆಟ್ಟಿ ಅರ್ಚನ ಅತಿಥಿಗಳಾಗಿ ಭಾಗವಹಿಸಿದ್ದರು. ಬಾಳಿಲ ವಿದ್ಯಾಬೋಧಿನೀ ಪ್ರಾಥಮಿಕ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯರಾದ ಕೃಷ್ಣಮೂರ್ತಿಯವರಿಗೆ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕು. ಶ್ರಾವ್ಯ, ಕು. ಧೃತಿ ಮತ್ತು ಮಾ. ವೃಶಾಂಕ್ ಪ್ರಾರ್ಥಿಸಿದರು. ಅಜಿತ್ ಕೊಡೆಂಕಿರಿ ಪ್ರಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ಕೃಷ್ಣಮೂರ್ತಿಯವರಿಗೆ ಶುಭಾಸಂಶನೆಗಳನ್ನು ಸಲ್ಲಿಸಿ ವಂದಿಸಿದರು. ರಾಜೇಶ್ ಸುವರ್ಣ ಅಯ್ಯನಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

ಬೆಳಿಗ್ಗೆ ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಹೆಗ್ಡೆ ಪರಮೇಶ್ವರಯ್ಯ ಕ್ರೀಡಾಕೂಟ ಉದ್ಘಾಟಿಸಿದರು. ಬಳಿಕ ಮಕ್ಕಳಿಗೆ, ಪುರುಷರಿಗೆ ಮತ್ತು ಮಹಿಳೆಯರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಿತು.