ದೇಲಂಪಾಡಿಯ ಮಹಿಳೆಯೋರ್ವರು ಆತ್ಮಹತ್ಯೆ ಯತ್ನ ನಡೆಸಿದ್ದು ಆ ಮಹಿಳೆಯ ಮರಣ ಹೇಳಿಕೆ ಪಡೆಯುವ ಉದ್ದೇಶದಿಂದ ಸುಳ್ಯಕ್ಕೆ ಆದೂರು ಪೋಲಿಸ್ ಅಧಿಕಾರಿಗಳ ಜೊತೆಗೆ ಸುಳ್ಯ ಸರಕಾರಿ ಆಸ್ಪತ್ರೆಗೆ ಬಂದಿದ್ದ ಕಾಸರಗೋಡು ಜಿಲ್ಲಾ ನ್ಯಾಯಾಧೀಶರೊಡನೆ ಆಸ್ಪತ್ರೆಯ ವೈದ್ಯರೊಬ್ಬರು ಅಗೌರವಯುತವಾಗಿ ನಡೆದುಕೊಂಡರೆಂದು ಅವರ ಮೇಲೆ ನ್ಯಾಯಾಧೀಶರ ದೂರಿನಂತೆ ಸುಳ್ಯ ಠಾಣೆಯಲ್ಲಿ ದೂರು ದಾಖಲಾದ ಘಟನೆ ವರದಿಯಾಗಿದೆ.
ದೇಲಂಪಾಡಿಯಲ್ಲಿ ಯುವತಿಯಬ್ಬರು ಆತ್ಮಹತ್ಯೆಗೆ ಪ್ರಯತ್ನಿಸಿದ್ದು ಅವರನ್ನು ಸೆ.೨೧ ರಂದು ಸುಳ್ಯ ಆಸ್ಪತ್ರೆಗೆ ತಂದು ದಾಖಲಿಸಲಾಗಿತ್ತು. ಕೇರಳ ಹೈಕೋರ್ಟ್ ಆದೇಶದ ಪ್ರಕಾರ ಆತ್ಮಹತ್ಯೆಗೆ ಯತ್ನಿಸಿದವರ ಹೇಳಿಕೆಯನ್ನು ಜಿಲ್ಲಾ ನ್ಯಾಯಾಧೀಶರು ಹೋಗಿ ಪಡೆಯಬೇಕಿರುವುದರಿಂದ ಕಾಸರಗೋಡು ಜಿಲ್ಲಾ ನ್ಯಾಯಾಧೀಶರಾದ ಅಬ್ದುಲ್ ಬಾತಿಷ್ ರವರು ಸೆ.೨೧ ರಂದು ರಾತ್ರಿಯೇ ಸುಳ್ಯಕ್ಕೆ ಆಸ್ಪತ್ರೆಗೆ ಬಂದರು.ನ್ಯಾಯಾಧೀಶರು ಬರುವಾಗ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಕಿರಿಯ ವೈದ್ಯರಾಗಿದ್ದ ಡಾ.ವಿನ್ಯಾಸ್ ಕರ್ತವ್ಯದಲ್ಲಿದ್ದು , ನ್ಯಾಯಾಧೀಶರು ಬಂದು ವಿಚಾರಿಸಿದಾಗ ಹಿರಿಯ ಡಾಕ್ಟರ್ ಬರಬೇಕು.
ಅವರೇ ಮಾಹಿತಿ ನೀಡಬೇಕಿದೆ ಎಂದರೆನ್ನಲಾಗಿದೆ. ಈ ವೇಳೆಯಲ್ಲಿ ಆಗಮಿಸಿದ ಡಾ.ಸೌಮ್ಯ ರವರು ನ್ಯಾಯಾಧೀಶರಿಗೆ ಮಾಹಿತಿ ನೀಡಲು ನಿರಾಕರಿಸಿದರೆನ್ನಲಾಗಿದೆ. ನೀವು ಲಿಖಿತವಾಗಿ ವಿನಂತಿ ನೀಡಿದರೆ ಮಾತ್ರ ಕೊಡಲು ಸಾಧ್ಯ ಎಂದು ಅವರು ತಿಳಿಸಿದರೆನ್ನಲಾಗಿದೆ. ಅಸ್ಪತ್ರೆಗೆ ನ್ಯಾಯಾಧೀಶರು ಬರುವ ಬಗ್ಗೆ ಮೊದಲೇ ಮಾಹಿತಿ ನೀಡಿದ್ದರೂ ಮಾಹಿತಿ ನೀಡದೆ ಅಗೌರವದಿಂದ ನಡೆಸಿಕೊಂಡಿದ್ದಾರೆ ಮತ್ತು ಉದ್ದಟತನ ತೋರಿದ್ದಾರೆಂದು ನ್ಯಾಯಾಧೀಶರಾದ ಅಬ್ದುಲ್ ಬಾಷಿತ್ ರವರು ಅಸಮಾಧಾನಗೊಂಡು ಈ ರಾತ್ರಿಯೇ ಸುಳ್ಯ ಪೋಲೀಸ್ ಠಾಣೆಗೆ ಬಂದು ವೈದ್ಯರುಗಳ ಮೇಲೆ ದೂರು ನೀಡಿದರು. ಬೆಳಿಗ್ಗೆ ೬ ಗಂಟೆಯ ವರೆಗೆ ಪೋಲೀಸ್ ಠಾಣೆಯಲ್ಲಿ ಕಾದು ಕುಳಿತು ಕೇಸು ದಾಖಲಾದ ಬಗೆಗಿನ ದಾಖಲೆ ಪಡೆದುಕೊಂಡು ಕಾಸರಗೋಡಿಗೆ ತೆರಳಿದರೆನ್ನಲಾಗಿದೆ.
ಇದೀಗ ಇಬ್ಬರು ವೈದ್ಯರ ಮೇಲೆ ಕೇಸು ದಾಖಲಾಗಿದ್ದು ಪೋಲೀಸರು ತನಿಖೆ ಆರಂಭಿಸಿದ್ದಾರೆ.