ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಮರ್ಕಂಜದ ಸರಿತಾ ಜನಾರ್ದನ್ ಆಯ್ಕೆ

0

ಮಾನ್ಯತೆ ಪಡೆದ ಅನುದಾನರಹಿತ ಖಾಸಗಿ ಶಾಲೆಗಳ ಸಂಘ (ರಿ.)ಕರ್ನಾಟಕ (ರುಪ್ಸ) ಇವರು ಕೊಡಮಾಡುವ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಈ ಬಾರಿ ಕಡಬ ತಾಲೂಕು ರಾಮಕುಂಜದ ಶ್ರೀರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಗಣಿತ ಮತ್ತು ತುಳು ಶಿಕ್ಷಕಿ ಶ್ರೀಮತಿ ಸರಿತಾ ಜನಾರ್ದನ್ ಅಲಂಕಾರ್ ಇವರು ಭಾಜನರಾಗಿದ್ದಾರೆ. ಅ.೨೧ ರಂದು ಬೆಂಗಳೂರಿನಲ್ಲಿ ರಾಜ್ಯದ ಶಿಕ್ಷಣ ಸಚಿವ ಮಧು ಬಂಗಾರಪ್ಪರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.


ಸುಳ್ಯ ತಾಲೂಕು ಮರ್ಕಂಜ ಗ್ರಾಮದ ಮಿತ್ತಡ್ಕ ಬಳಿಯ ಕಕ್ಕಾಡು ಕೊರಗಪ್ಪ ಪೂಜಾರಿ- ಸರಸ್ವತಿ ಕಕ್ಕಾಡು ದಂಪತಿಯ ಪುತ್ರಿಯಾದ ಶ್ರೀಮತಿ ಸರಿತಾರವರು ಎಂ.ಎಸ್ಸಿ, ಡಿ.ಎಡ್, ಬಿ.ಎಡ್. ಪದವೀಧರೆಯಾಗಿದ್ದು, ಶ್ರೀ ರಾಮಕುಂಜೇಶ್ವರ ಪ್ರೌಢಶಾಲೆಯಲ್ಲಿ ಕಳೆದ ೧೭ ವರ್ಷಗಳಿಂದ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಬೋಧಿಸುವ ಗಣಿತ ಮತ್ತು ತುಳು ವಿಷಯದಲ್ಲಿ ೧೭ ವರ್ಷಗಳಿಂದಲೂ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.೧೦೦ ಫಲಿತಾಂಶ ಬರುತ್ತಿದೆ.


ತುಳು ಕವಯಿತ್ರಿಯಾಗಿರುವ ಸರಿತಾರವರವ ಉಸ್ತುವಾರಿಯಲ್ಲಿ ಪ್ರತೀ ವರ್ಷ ಶಾಲೆಯಲ್ಲಿ ಆಟಿ ಅಮಾವಾಸ್ಯೆ, ಪುದ್ವಾರ್, ದೀಪಾವಳಿ ಮೊದಲಾದ ತುಳುನಾಡಿನ ಪ್ರಮುಖ ಆಚರಣೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ತುಳುವಿನ ಬಗ್ಗೆ ಅಪಾರ ಜ್ಞಾನ ಹೊಂದಿರುವ ಇವರು ವಿವಿಧ ಕಡೆಗಳಲ್ಲಿ ನಡೆಯುವ ತುಳು ಕಾರ್ಯಾಗಾರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುತ್ತಾರೆ.


ಕರ್ನಾಟಕ ಸರಕಾರದ ತುಳು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಸದಸ್ಯೆಯಾಗಿ ಸೇವೆ ಸಲ್ಲಿಸುತ್ತಿರುವ ಸರಿತಾರವರು ಕಡಬ ಮತ್ತು ಅಲಂಕಾರಿನಲ್ಲಿರುವ ಜ್ಞಾನಸುಧಾ ವಿದ್ಯಾಬೋಧನ ಸಂಸ್ಥೆಯ ಸಂಚಾಲಕರಾದ ಬಿ.ಎಲ್.ಜನಾರ್ದನ್‌ರವರ ಧರ್ಮಪತ್ನಿ. ಪುತ್ರಿ ಸುಜ್ಞಾ ಎಂಟನೇ ತರಗತಿಯಲ್ಲಿ, ಪುತ್ರ ಜ್ಞಾನ್ ೧ನೇ ತರಗತಿಯಲ್ಲಿ ಕಲಿಯುತ್ತಿದ್ದಾರೆ.