ಸುದ್ದಿ ಬಿಡುಗಡೆ ದೀಪಾವಳಿ ವಿಶೇಷಾಂಕ – 2024 ಬಿಡುಗಡೆ

0

ಆರೋಗ್ಯಕರ ಪತ್ರಿಕೋದ್ಯಮಕ್ಕೆ ಸುದ್ದಿ ಪತ್ರಿಕೆ ಮಾದರಿ: ಬಲರಾಮ ಆಚಾರ್ಯ

ಸುದ್ದಿ ಬಿಡುಗಡೆ ತಾಲೂಕಿ‌ನ ಪ್ರತೀ ಮನೆ – ಮನವನ್ನು ಮುಟ್ಟುವ ಪತ್ರಿಕೆ: ಶಾಸಕಿ ಭಾಗೀರಥಿ ಮುರುಳ್ಯ

ಸುಳ್ಯದ ಸುದ್ದಿ ಬಿಡುಗಡೆ ವಾರ ಪತ್ರಿಕೆಯ ವತಿಯಿಂದ ಹೊರತರಲಾದ ದೀಪಾವಳಿ ವಿಶೇಷಾಂಕ – 2024ನ್ನು ಅ.29ರಂದು ಸುಳ್ಯದ ಶ್ರೀಹರಿ ಕಾಂಪ್ಲೆಕ್ಸ್ ನ ರಂಗಮಯೂರಿ ಕಲಾ ಶಾಲೆಯಲ್ಲಿ ಬಿಡುಗಡೆಗೊಳಿಸಲಾಯಿತು.

ಶಾಸಕಿ ಭಾಗೀರಥಿ ಮುರುಳ್ಯ ಅವರು ಮಾತನಾಡಿ ಸುದ್ದಿ ಬಿಡುಗಡೆ ತಾಲೂಕಿನ ಪ್ರತೀ ಮನೆ -ಮನವನ್ನು ಮುಟ್ಟುವ ಮಾಧ್ಯಮವಾಗಿದ್ದು, ಬೀಡಿ ಕಟ್ಟುವುದರಿಂದ ಹಿಡಿದು, ಅಧಿಕಾರಿ ವರ್ಗದವರೆಗಿನವರು ಓದುವ ಪತ್ರಿಕೆಯಾಗಿ ಬೆಳೆದುಬಂದಿದೆ ಎಂದು ಹೇಳಿದರು.

ಜಿ.ಎಲ್.ಆಚಾರ್ಯ ಜುವೆಲ್ಲರಿ ಮಾಲಕ ಬಲರಾಮ ಆಚಾರ್ಯ ಅವರು ಮಾತನಾಡಿ ಸುದ್ದಿ ಪತ್ರಿಕೆಯನ್ನು ಓದಲು ಜನರು ಪ್ರತೀ ವಾರ ಜನರು ಕಾದು ನಿಲ್ಲುವಂತಾಗಿದೆ. ಪತ್ರಿಕೆಯಲ್ಲಿ ವೈವಿಧ್ಯಮಯ ಸುದ್ದಿಗಳು ಪ್ರಕಟಗೊಳ್ಳತ್ತಿದ್ದು, ಸುದ್ದಿ ಮಾಧ್ಯಮವು ಆರೋಗ್ಯಕರ ಪತ್ರಿಕೋದ್ಯಮಕ್ಕೆ ಮಾದರಿಯಾಗಿದ್ದು, ಸಮಾಜಮುಖಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.


ಮುಳಿಯ ಜುವೆಲ್ಲರಿ ಮಾಲಕ ಗೋವಿಂದ ಭಟ್ ಅವರು ಮಾತನಾಡಿ ಸುದ್ದಿ ಪತ್ರಿಕೆಯನ್ನು ಕಳೆದ ಮೂವತ್ತೈದು ವರ್ಷಗಳಿಂದ ಓದುತ್ತಿದ್ದೇನೆ. ಪತ್ರಿಕೆಯಲ್ಲಿ ಸ್ಥಳೀಯ ವರದಿಗಳ ಜೊತೆಗೆ ಹೊಸತನವಿದೆ. ಗ್ರಾಮೀಣ ಪತ್ರಿಕೋದ್ಯಮ ಕ್ಷೇತ್ರಕ್ಕೆ ದ.ಕ. ಜಿಲ್ಲೆಗೆ ಸುದ್ದಿ ಪತ್ರಿಕೆ ಮಾದರಿಯಾಗಿದೆ ಎಂದು ಹೇಳಿದರು.


ನ.ಪಂ.‌ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಅವರು ಮಾತನಾಡಿ ಸುದ್ದಿ ಪತ್ರಿಕೆ ಹಾಗೂ ವೆಬ್ ಸೈಟ್ ನಲ್ಲಿ ಬರುವ ವರದಿಗಳು ವಸ್ತುನಿಷ್ಠವಾಗಿದ್ದು, ಪ್ರತಿನಿತ್ಯ ಬೆಳಿಗ್ಗೆ ಎದ್ದು ಮೊಬೈಲ್ ನಲ್ಲಿ ಸುದ್ದಿ ವೆಬ್ ಸೈಟ್ ವೀಕ್ಷಿಸುತ್ತೇನೆ ಎಂದು ಹೇಳಿದರು.

ಧ್ವನಿ ಫೌಂಡೇಶನ್ ಸಂಸ್ಥಾಪಕಿ ಶ್ರೀಮತಿ ಶ್ವೇತ ಮಡಪ್ಪಾಡಿ ಅವರು ಮಾತನಾಡಿ ನನ್ನ ಬಾಲ್ಯದ ದಿನಗಳಲ್ಲಿ ನನ್ನ ಪ್ರತೀ ಚಟುವಟಿಕೆಗಳಿಗೆ ಬೆನ್ನೆಲುಬಾಗಿ ನಿಂತದ್ದು ಸುದ್ದಿ ಪತ್ರಿಕೆ. ನಾನು ಕಾಲೇಜು ದಿನಗಳಲ್ಲಿ ಪತ್ರಿಕೆಗೆ ಬರೆದು ಕಳಿಸುತ್ತಿದ್ದ ಸಣ್ಣ ಸಣ್ಣ ಕವನಗಳನ್ನು ಪತ್ರಿಕೆಯಲ್ಲಿ ಪ್ರಕಟಿಸುವ ಮೂಲಕ ನನಗೆ ಬೆಂಬಲವಾಗಿ ನಿಂತಿತ್ತು ಎಂದು ಹೇಳಿದರು.


ಸುಳ್ಯದ ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ ಅವರು ಮಾತನಾಡಿ ಸುದ್ದಿ ಪತ್ರಿಕೆ ಎರಡು ಪುಟದಲ್ಲಿ ಪ್ರಕಟಗೊಳ್ಳುತ್ತಿದ್ದ ಸಂದರ್ಭದಲ್ಲಿ ಪತ್ರಿಕೆಯನ್ನು ಓದುತ್ತಿದ್ದೆ. ಪೊಲೀಸರು ಹೆಚ್ಚಾಗಿ ದಿನ ಪತ್ರಿಕೆಯನ್ನು ಓದುವುದಕ್ಕಿಂತ ಸ್ಥಳೀಯ ಪತ್ರಿಕೆಯನ್ನು ಹೆಚ್ಚಾಗಿ ನೋಡುತ್ತಾರೆ. ನಮ್ಮ ಸಂಸ್ಕೃತಿ, ಪರಂಪರೆಯ ಆಗುಹೋಗುಗಳನ್ನು ಪುಸ್ತಕದ ಮೂಲಕ ಪ್ರಕಟಿಸಿರುವುದು ಅತ್ಯಂತ ಖುಷಿ ತಂದಿದೆ ಎಂದು ಹೇಳಿದರು.

ರಂಗಮಯೂರಿ ಕಲಾ ಶಾಲೆಯ ನಿರ್ದೇಶಕ ಲೋಕೇಶ್ ಊರುಬೈಲು ಅವರು ಮಾತನಾಡಿ ದೀಪಾವಳಿ ವಿಶೇಷಾಂಕ ಹೊರತರುವ ಮೂಲಕ ಅಕ್ಷರ ಹಬ್ಬದ ಬಿಡುಗಡೆಯಾಗಿದೆ ಎಂದು ಹೇಳಿದರು. ಆಸ್ತಾ ಸ್ಟುಡಿಯೋ ಮಾಲಕ ಶಶಿ ಗೌಡ ಕೊಯಿಂಗೋಡಿ ಅವರು ಮಾತನಾಡಿ ದೀಪಾವಳಿ ಹಬ್ಬಕ್ಕೆ ಸುದ್ದಿ ವಿಶೇಷಾಂಕದ ಪೋಟೋಗ್ರಫಿ ಮಾಡಿರುವುದು ಖುಷಿ ತಂದಿದೆ ಎಂದು ಹೇಳಿದರು.

ಸುದ್ದಿ ಸಮೂಹ ಮಾದ್ಯಮ ಸಂಸ್ಥೆಯ ಆಡಳಿತ ನಿರ್ದೇಶಕರಾದ ಡಾ. ಯು.ಪಿ. ಶಿವಾನಂದ ಅವರು ಅಧ್ಯಕ್ಷತೆ ವಹಿಸಿ, ಮಾತನಾಡಿ ಕಳೆದ ಹಲವು ವರ್ಷಗಳ ಬಳಿಕ ಮತ್ತೆ ಪುತ್ತೂರಿನಲ್ಲಿ ದೀಪಾವಳಿ ವಿಶೇಷಾಂಕ ಹೊರತಂದು ಯಶಸ್ವಿಯಾಗಿದ್ದೇವೆ. ಸುದ್ದಿ ಪತ್ರಿಕೆಯಲ್ಲಿ ವರದಿ, ಭಾಷಣಗಳಿಂತ ಹೆಚ್ಚಾಗಿ ಜನರ ಮುಖ, ಹೆಸರು ಕಾಣುವಂತೆ ಮಾಡುವುದೇ ನಮ್ಮ ಉದ್ಧೇಶ. ಈ ಬಾರಿಯ ದೀಪಾವಳಿ ವಿಶೇಷಾಂಕವು ಸುಂದರವಾಗಿ ಪ್ರಕಟಗೊಂಡಿದೆ ಎಂದು ಹೇಳಿದರು.

ಪತ್ರಿಕೆ, ಚಾನೆಲ್ ಹಾಗೂ ವೆಬ್ಸೈಟ್ ಜೊತೆಗೆ ಅರಿವು ಕೃಷಿ ಕೇಂದ್ರವನ್ನು ಸ್ಥಾಪಿಸುವ ಮೂಲಕ ಕೃಷಿಕರಿಗೆ ಬೇಕಾದ ಮಾಹಿತಿಗಳನ್ನು ತಾಲೂಕಿನ ಜನರಿಗೆ ಒದಗಿಸುತ್ತಿದ್ದೇವೆ. ಆ ಮೂಲಕ ಕೃಷಿಕರ ಬೆಳೆಗಳಿಗೆ ಮಾರುಕಟ್ಟೆಯ ವ್ಯವಸ್ಥೆಯನ್ನು ಸುದ್ದಿ ಮಾಡುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ದೀಪಾವಳಿ ವಿಶೇಷಾಂಕದ ಮುಖಪುಟ ರೂಪದರ್ಶಿಗಳಾದ ಶ್ರೀಮತಿ ಅರ್ಚನಾ ಕುಶನ್ ನಡುಗಲ್ಲು, ಕು. ಹವ್ಯಶ್ರೀ ಕಲ್ಲಾಜೆ ಅವರನ್ನು ಗೌರವಿಸಲಾಯಿತು. ಸೂಪರ್ ಜೋಡಿ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಪಡೆದ ಅವಿನ್ ಸಿಂಧೂರ ಪೆರುಮುಂಡ ಅವರಿಗೆ ಬಹುಮಾನ ವಿತರಿಸಲಾಯಿತು.

ವೇದಿಕೆಯಲ್ಲಿ ಸುಳ್ಯ ಸುದ್ದಿ ಬಿಡುಗಡೆ ಸಂಪಾದಕ ಹರೀಶ್ ಬಂಟ್ವಾಳ್, ದೀಪಾವಳಿ ವಿಶೇಷಾಂಕದ ಕಾರ್ಯನಿರ್ವಾಹಕ ಸಂಪಾದಕ ದುರ್ಗಾಕುಮಾರ್ ನಾಯರ್ ಕೆರೆ, ದೀಪಾವಳಿ ವಿಶೇಷಾಂಕದ ಸಂಪಾದಕೀಯ ಬಳಗದ ರಮೇಶ್ ನೀರಬಿದಿರೆ, ಶ್ರೀಧರ ಕಜೆಗದ್ದೆ, ಉಪಸ್ಥಿತರಿದ್ದರು. ಕಛೇರಿ ವ್ಯವಸ್ಥಾಪಕ ಯಶ್ವಿತ್ ಕಾಳಮನೆ ಸ್ವಾಗತಿಸಿ, ವರದಿಗಾರ ಈಶ್ವರ ವಾರಣಾಶಿ ವಂದಿಸಿದರು. ಸುದ್ದಿ ಬಳಗದ ಎಲ್ಲಾ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.