ವಿನೋಬನಗರ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಸುಳ್ಯ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ -2024-25 ಉದ್ಘಾಟನೆ

0

ದೇಶದ ಸಂಸ್ಕೃತಿ ಉಳಿಸಿ ಬೆಳೆಸುವ ಕೆಲಸ ಪ್ರತಿಭಾ ಕಾರಂಜಿ ಮೂಲಕ ಸಾಧ್ಯ: ಶಾಸಕಿ ಭಾಗೀರಥಿ ಮುರುಳ್ಯ

ದ.ಕ. ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಯವರ ಕಛೇರಿ ಸುಳ್ಯ, ಜಾಲ್ಸೂರಿನ ವಿವೇಕಾನಂದ ವಿದ್ಯಾಸಂಸ್ಥೆಗಳು ವಿನೋಬನಗರ ಸಹಭಾಗಿತ್ವದಲ್ಲಿ ಸುಳ್ಯ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ 2024 – 25 ಜಾಲ್ಸೂರು ಗ್ರಾಮದ ವಿನೋಬನಗರ ವಿದ್ಯಾಸಂಸ್ಥೆಯಲ್ಲಿ ಜರುಗುತ್ತಿದ್ದು, ಶಾಸಕಿ ಭಾಗೀರಥಿ ಮುರುಳ್ಯ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಭಾರತೀಯ ಸಂಸ್ಕಾರ – ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯ ಪ್ರತಿಭಾ ಕಾರಂಜಿಯ ಮೂಲಕ ಸಾಧ್ಯವಿದೆ. ಮಕ್ಕಳಿಗೆ ತಮ್ಮ ದೈನಂದಿನ ಜೀವನದ ಬದುಕು ಕಟ್ಟಿಕೊಳ್ಳಲು ಪ್ರತಿಭಾ ಕಾರಂಜಿ ಅನುಕೂಲಕರವಾಗಲಿದೆ. ನಮ್ಮ ತಾಲೂಕಿನ ಮಕ್ಕಳು ಜಿಲ್ಲೆ – ರಾಜ್ಯಮಟ್ಟಕ್ಕೆ ಆಯ್ಕೆಯಾದರೆ ನಮಗೆ ಖುಷಿಯ ವಿಚಾರ ಎಂದು ಹೇಳಿದರು.

ಮಕ್ಕಳ ಅಭಿರುಚಿ ಪ್ರತಿಭೆ ಹೊರತರಲು ಸಹಕಾರಿ: ತಹಶಿಲ್ದಾರ್ ಶ್ರೀಮತಿ ಮಂಜುಳ

ತಹಶಿಲ್ದಾರ್ ಶ್ರೀಮತಿ ಮಂಜುಳ ಅವರು ಮಾತನಾಡಿ ಶಿಕ್ಷಣದ ಪರಿಕಲ್ಪನೆಯಲ್ಲಿ ಮಕ್ಕಳಿಗೆ ಪಾಠದ ಜೊತೆಗೆ ಅವರ ಅಭಿರುಚಿ ಹಾಗೂ ಪ್ರತಿಭೆಗಳನ್ನು ಗುರುತಿಸುವ ಕೆಲಸವನ್ನು ಪ್ರತಿಭಾ ಕಾರಂಜಿ ಮೂಲಕ ಹೊರತರಲು ಸಾಧ್ಯವಾಗುತ್ತಿದೆ ಎಂದು ಹೇಳಿದರು.

ಸ್ಪರ್ಧಾ ಕಾರ್ಯಕ್ರಮ ಮುಗಿದೊಡನೆ ಫಲಿತಾಂಶ ಘೋಷಣೆ: ಶ್ರೀಮತಿ ಶೀತಲ್

ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಶೀತಲ್ ಯು.ಕೆ. ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕಳೆದ ಬಾರಿ ಚೊಕ್ಕಾಡಿ ಸತ್ಯಸಾಯಿ ವಿದ್ಯಾಕೇಂದ್ರದಲ್ಲಿ ವಿವೇಕಾನಂದ ವಿದ್ಯಾಸಂಸ್ಥೆಗೆ ವೀಳ್ಯ ನೀಡಿದ್ದೆವು. ವಿಶೇಷವಾಗಿ ವಿವೇಕಾನಂದ ವಿದ್ಯಾಸಂಸ್ಥೆಯವರು ತಮ್ಮ ಶಾಲಾ ಮಟ್ಟದ ಪ್ರತಿಭಾ ಕಾರಂಜಿಯನ್ನು ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯ ರೀತಿಯಲ್ಲಿ ಅತ್ಯಂತ ಸಂಘಟನಾತ್ಮಕ ರೀತಿಯಲ್ಲಿ ಆಯೋಜಿಸುತ್ತಾರೆ. ಈ ಬಾರಿ 710 ಸ್ಪರ್ಧಾಳುಗಳು ತಾಲೂಕು ಮಟ್ಟದಲ್ಲಿ ಸ್ಪರ್ಧಿಸುತ್ತಿದ್ದು, ಈ ಬಾರಿಯ ವಿಶೇಷವೆಂದರೆ ಒಂದೊಂದು ಸ್ಪರ್ಧೆಗಳು ನಡೆದ ಕೂಡಲೇ ಫಲಿತಾಂಶವನ್ನು ಘೋಷಿಸಲಾಗುತ್ತದೆ ಎಂದು ಹೇಳಿದರು.

ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿಕೆ: ಸುಧಾಕರ ಕಾಮತ್


ವಿವೇಕಾನಂದ ವಿದ್ಯಾಸಂಸ್ಥೆಯ ಕೋಶಾಧಿಕಾರಿ ಸುಧಾಕರ ಕಾಮತ್ ಅವರು ವಿವೇಕಾನಂದ ವಿದ್ಯಾಸಂಸ್ಥೆಯ ಹಿನ್ನೆಲೆಯ ಕುರಿತು ಮಾತನಾಡಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ಕಾರ್ಯಾಚರಿಸುತ್ತಿರುವ ಈ ವಿದ್ಯಾಸಂಸ್ಥೆ ಮಕ್ಕಳಿಗೆ ಶಿಕ್ಷಣದ ಜೊತೆಗೆ ಭಾರತೀಯ ಸಂಸ್ಕೃತಿಯನ್ನು ಕಲಿಸಲಾಗುತ್ತಿದೆ.
ಕಳೆದೊಂದು ತಿಂಗಳಿನಿಂದ ಪ್ರತಿಭಾ ಕಾರಂಜಿಯ ಯಶಸ್ವಿಗೆ ಶಿಕ್ಷಣ ಇಲಾಖೆಯ ಜೊತೆಗೆ ಶಾಲಾ ಶಿಕ್ಷಕರು ಶ್ರಮ ವಹಿಸಿದ್ದಾರೆ ಎಂದು ಹೇಳಿದರು.

ಪ್ರತಿಭೆ ಹೊರಹೊಮ್ಮಲು ಸಹಕಾರಿ: ನಾರಾಯಣ ಗೌಡ ಬೊಮ್ಮೆಟ್ಟಿ


ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ಜಾಲ್ಸೂರು ಅಧ್ಯಕ್ಷ ನಾರಾಯಣ ಗೌಡ ಬೊಮ್ಮೆಟ್ಟಿ ಅವರು ಮಾತನಾಡಿ ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆ ಹೊರತರಲು ಇಂತಹ ಕಾರ್ಯಕ್ರಮಗಳು ಪೂರಕವಾಗಿದ್ದು, ಕಾರ್ಯಕ್ರಮದ ಯಶಸ್ವಿಗಾಗಿ ಸಂಸ್ಥೆಯ ಆಡಳಿತ ಮಂಡಳಿಯವರು ಶ್ರಮವಹಿಸಿದ್ದಾರೆ ಎಂದು ಹೇಳಿದರು.

ಸಂಸ್ಕೃತಿ ಉಳಿದರೆ ದೇಶದ ಪ್ರಗತಿ: ಸದಾನಂದ ಮಾವಜಿ


ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಅವರು ಮಾತನಾಡಿ ವಿವೇಕಾನಂದ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆ – ಜೊತೆಗೆ ಸಂಸ್ಕೃತಿ – ಸಂಸ್ಕಾರ ನೀಡಲಾಗುತ್ತಿದೆ. ಸಂಸ್ಕೃತಿ ಉಳಿದರೆ ದೇಶ ಉಳಿಯಲು ಸಾಧ್ಯ ಎಂದು ಹೇಳಿದರು.

ಮಕ್ಕಳ ಕಾರ್ಯ ಚಟುವಟಿಕೆಗೆ ಪ್ರತಿಭಾ ಕಾರಂಜಿ ಸಹಕಾರಿ: ಚಂದ್ರಶೇಖರ ಪೇರಾಲು
ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ ಪೇರಾಲು ಅವರು ಮಾತನಾಡಿ ಉತ್ತಮ ಕಾರ್ಯವೊಂದಕ್ಕೆ ಈ ಬಾರಿ ವಿವೇಕಾನಂದ ವಿದ್ಯಾಸಂಸ್ಥೆ ಸಾಕ್ಷಿಯಾಗಿದೆ. ಕಳೆದ 22 ವರ್ಷದ ಸುದೀರ್ಘ ಇತಿಹಾಸ ಹೊಂದಿರುವ ಪ್ರತಿಭಾ ಕಾರಂಜಿಯ ಮೂಲಕ ಮಕ್ಕಳ ಕ್ರಿಯಾ ಚಟುವಟಿಕೆಗಳನ್ನು ಗುರುತಿಸಲು ಸಹಕಾರಿಯಾಗಿದೆ ಎಂದು ಹೇಳಿದರು.

ಪ್ರತಿಭಾ ಕಾರಂಜಿ ಸಂಘಟಿಸಿದ ಅನುಭವ ಇಲಾಖೆ -ಶಿಕ್ಷಕರಿಗಿದೆ: ಪ್ರಕಾಶ್ ಮೂಡಿತ್ತಾಯ

ತಾಲೂಕು ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಪ್ರಕಾಶ್ ಮೂಡಿತ್ತಾಯ ಅವರು ಮಾತನಾಡಿ ಪ್ರತಿಭಾ ಕಾರಂಜಿಯನ್ನು ಕಳೆದ 22 ವರ್ಷಗಳಿಂದ ಅತ್ಯಂತ ಯಶಸ್ವಿಯಾಗಿ ಸಂಘಟಿಸಿದ ಅನುಭವ ಶಿಕ್ಷಣ ಇಲಾಖೆಯ ಜೊತೆಗೆ ಶಿಕ್ಷಕರಿಗೆ ಇದೆ ಎಂದರಲ್ಲದೇ, ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಘಟಿಸಿದ ವಿವೇಕಾನಂದ ವಿದ್ಯಾಸಂಸ್ಥೆಗೆ
ಅಭಿನಂದನೆ ಸಲ್ಲಿಸಿದರು.

ಗ್ರಾ.ಪಂ. ವತಿಯಿಂದ ಅನುದಾನ ದೊರಕಿಸಲು ಪ್ರಯತ್ನ: ಶ್ರೀಮತಿ ತಿರುಮಲೇಶ್ವರಿ ಮರಸಂಕ

ಅಧ್ಯಕ್ಷತೆ ವಹಿಸಿದ್ದ ಜಾಲ್ಸೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ತಿರುಮಲೇಶ್ವರಿ ಮರಸಂಕ ಅವರು ಮಾತನಾಡಿ ಮಕ್ಕಳಲ್ಲಿರುವ ವಿಶೇಷ ಪ್ರತಿಭೆಗಳನ್ನು ಹೊರತರಲು ಪ್ರತಿಭಾ ಕಾರಂಜಿ ಸಹಕಾರಿಯಾಗಿದ್ದು, ಗ್ರಾಮ ಪಂಚಾಯತಿ ವತಿಯಿಂದ ಕಾರ್ಯಕ್ರಮಕ್ಕೆ ಅನುದಾನ ಒದಗಿಸಲು ಪ್ರಯತ್ನಿಸುವುದಾಗಿ ಹೇಳಿದರು.

ಅತಿಥಿಗಳಾಗಿ ಜಾಲ್ಸೂರು ಗ್ರಾ.ಪಂ. ಉಪಾಧ್ಯಕ್ಷೆ ಶ್ರೀಮತಿ ತಿರುಮಲೇಶ್ವರಿ ಅರ್ಭಡ್ಕ, ಗ್ರಾ‌.ಪಂ. ಸದಸ್ಯೆ ಶ್ರೀಮತಿ ಲೀಲಾವತಿ ವಿನೋಬನಗರ, ವಿವೇಕಾನಂದ ವಿದ್ಯಾಸಂಸ್ಥೆಯ ಅಧ್ಯಕ್ಷ ನ. ಸೀತಾರಾಮ, ಸಂಚಾಲಕ ಡಾ. ಗೋಪಾಲಕೃಷ್ಣ ಭಟ್ ಕಾಟೂರು, ದೈಹಿಕ ಶಿಕ್ಷಣ ಪರಿವೀಕ್ಷಕಿ ಶ್ರೀಮತಿ ಆಶಾ ನಾಯಕ್, ಪಿ.ಎಂ‌. ಪೋಷಣ್ ಮಧ್ಯಾಹ್ನದ ಉಪಹಾರ ಯೋಜನೆ ನಿರ್ದೇಶಕಿ ಶ್ರೀಮತಿ ವೀಣಾ ಎಂ.ಟಿ., ತಾಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷೆ ಶ್ರೀಮತಿ ಧನಲಕ್ಷ್ಮಿ ಕುದ್ಪಾಜೆ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀಧರ ಗೌಡ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ದೇವರಾಜ, ಪದವಿಯೇತರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸುನಿಲ್ ಕುಮಾರ್ ಎ.ಎಂ., ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಗ್ರೇಡ್ 1 ಅಧ್ಯಕ್ಷ ಸೂಫಿ ಪೆರಾಜೆ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಧನಂಜಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಪ್ರಾರ್ಥಿಸಿ, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಗಿರೀಶ್ ಕುಮಾರ್ ಅವರು ಸ್ವಾಗತಿಸಿದರು. ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಜಯಪ್ರಸಾದ್ ಕಾರಿಂಜ ವಂದಿಸಿದರು. ಸಹಶಿಕ್ಷಕರಾದ ಪಾವನ ಹಾಗೂ ದಿವ್ಯ, ಶಿಕ್ಷಣ ಸಂಯೋಜಕಿ ಶ್ರೀಮತಿ ಸಂಧ್ಯಾಕುಮಾರಿ ಅವರು ಕಾರ್ಯಕ್ರಮ ನಿರೂಪಿಸಿದರು.

ನ.13ರಂದು 1ರಿಂದ 4ನೇ ತರಗತಿ ವಿದ್ಯಾರ್ಥಿಗಳಿಗೆ ಕನ್ನಡ ಕಂಠಪಾಠ, ಅರೇಬಿಕ್ ಧಾರ್ಮಿಕ ಪಠಣ, ಛದ್ಮವೇಷ, ಚಿತ್ರಕಲೆ, ಕ್ಲೇ ಮಾಡೆಲಿಂಗ್, 5ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ಕನ್ನಡ ಕಂಠಪಾಠ, ಅರೇಬಿಕ್ ಧಾರ್ಮಿಕ ಪಠಣ, ಮಿಮಿಕ್ರಿ , ಪ್ರಬಂಧ ರಚನೆ, ಚಿತ್ರಕಲೆ, ಕ್ಲೇ ಮಾಡೆಲಿಂಗ್, 8ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಭರತನಾಟ್ಯ ಗಝಲ್, ಭಾವಗೀತೆ, ಜಾನಪದಗೀತೆ, ಆಶುಭಾಷಣ, ಕನ್ನಡ ಭಾಷಣ, ರಸಪ್ರಶ್ನೆ, ಚರ್ಚಾಸ್ಪರ್ಧೆ, ತುಳು ಭಾಷಣ, ಅರೇಬಿಕ್ ಧಾರ್ಮಿಕ ಪಠಣ, ಮಿಮಿಕ್ರಿ, ಪ್ರಬಂಧ ರಚನೆ, ಚಿತ್ರಕಲೆ, ರಂಗೋಲಿ ಸ್ಪರ್ಧೆಗಳು ನಡೆಯುತ್ತಿದೆ.

ನ.14ರಂದು ನಾಳೆ 1ರಿಂದ 4ನೇ ತರಗತಿ ವಿದ್ಯಾರ್ಥಿಗಳಿಗೆ ಅಭಿನಯಗೀತೆ, ಕಥೆ ಹೇಳುವುದು, ಸಂಸ್ಕೃತ ಧಾರ್ಮಿಕ ಪಠಣ, ಇಂಗ್ಲಿಷ್ ಕಂಠಪಾಠ, ಆಶುಭಾಷಣ, ದೇಶಭಕ್ತಿಗೀತೆ, ಭಕ್ತಿಗೀತೆ ಸ್ಪರ್ಧೆಗಳು ಜರುಗಲಿದ್ದು, 5ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ಕಥೆ ಹೇಳುವುದು, ಕವನ/ಪದ್ಯ ವಾಚನ, ಆಶುಭಾಷಣ, ಅಭಿನಯಗೀತೆ, ಸಂಸ್ಕೃತ ಧಾರ್ಮಿಕ ಪಠಣ, ಸಂಸ್ಕೃತ ಕಠಪಾಠ, ಇಂಗ್ಲಿಷ್ ಕಂಠಪಾಠ, ಹಿಂದಿ ಕಂಠಪಾಠ, ಭಕ್ತಿಗೀತೆ, ದೇಶಭಕ್ತಿಗೀತೆ ಸ್ಪರ್ಧೆಗಳು ನಡೆಯಲಿದೆ.
8ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಕವ್ವಾಲಿ, ಜಾನಪದ ನೃತ್ಯ, ಕವನ/ಪದ್ಯ ವಾಚನ, ಸಂಸ್ಕೃತ ಧಾರ್ಮಿಕ ಪಠಣ, ಸಂಸ್ಕೃತ ಭಾಷಣ, ಇಂಗ್ಲಿಷ್ ಭಾಷಣ, ಹಿಂದಿ ಭಾಷಣ ಸ್ಪರ್ಧೆಗಳು ನಡೆಯಲಿದೆ.

ಎಲ್ಲಾ ವಿಭಾಗದ ಸ್ಪರ್ಧಾ ಕಾರ್ಯಕ್ರಮಗಳು ಮುಗಿದ ಬಳಿಕ ಅಪರಾಹ್ನ
ಸಮಾರೋಪ ಸಮಾರಂಭ ನಡೆಯಲಿದೆ.