ಮಗನಿಗೆಂದು ಗುರಿಯಿಟ್ಟ ಕೋವಿಗೆ ಪತ್ನಿ ಬಲಿ – ರಬ್ಬರ್ ವಿಷ ಸೇವಿಸಿ ಪತಿಯೂ ಆತ್ಮಹತ್ಯೆ

0

ನೆಲ್ಲೂರು ಕೆಮ್ರಾಜೆಯ ಕೋಡಿಮಜಲಿನಲ್ಲೊಂದು ಹೃದಯ ವಿದ್ರಾವಕ ಘಟನೆಗೆ ಕಾರಣವೇನು ?

ಡೆಪಾಸಿಟ್ ಇರಿಸಲಾಗಿದ್ದ ಕೋವಿಯನ್ನು ಮೂರು ದಿನದ ಹಿಂದೆ ಬಿಡಿಸಿಕೊಂಡು ಬರಲಾಗಿತ್ತು

ನೆಲ್ಲೂರು ಕೆಮ್ರಾಜೆ ಗ್ರಾಮದ ಕೋಡಿಮಜಲು ಎಂಬಲ್ಲಿ ಕಳೆದ ರಾತ್ರಿ ನಡೆದ ಮರ್ಡರ್ ಮತ್ತು ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಹೆಚ್ಚಿನ ಮಾಹಿತಿಗಳು ಲಭ್ಯವಾಗಿದ್ದು , ವಿವರ ಇಂತಿದೆ.

ಪತ್ನಿಯನ್ನು ಗುಂಡಿಕ್ಕಿ ಕೊಂದ ಗಂಡ ತಾನು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದು ನಿನ್ನೆ ರಾತ್ರಿ ನಡೆದ ಘಟನೆ.

ನೆಲ್ಲೂರು ಕೆಮ್ರಾಜೆ ಗ್ರಾಮದ ಕೋಡಿಮಜಲು ನಿವಾಸಿ ಕೃಷಿಕ ರಾಮಚಂದ್ರ ಗೌಡ ( 54 ) ರು ಕುಡಿದು ಬಂದು ಜಗಳವಾಡುವುದು ಇತ್ತೀಚೆಗೆ ವಿಪರೀತವಾಗಿತ್ತೆನ್ನಲಾಗಿದೆ. ಅವರಿಗೆ ಅಡಿಕೆ, ರಬ್ಬರ್ ಹೀಗೆ ಸುಮಾರು 5 ಎಕ್ರೆಯಷ್ಟು ಕೃಷಿ ಭೂಮಿ ಇದೆ. ಬೆಳೆಗಳಿಗೆ ಕಾಡುಪ್ರಾಣಿಗಳ ಉಪಟಳವಿರುವುದರಿಂದ ಲೈಸೆನ್ಸ್ ಇರುವ ಕೋವಿ ಕೂಡ ಅವರು ಇರಿಸಿಕೊಂಡಿದ್ದರು. ಅವರ ಪತ್ನಿ ಶ್ರೀಮತಿ ವಿನೋದ (43 ) ಹಾಗೂ ಮೂವರು ಪುತ್ರರು. ಪ್ರಶಾಂತ, ನಿಶಾಂತ ಮತ್ತು ರಂಜಿತ್.
ಸುಮಾರು ಮೂರು ತಿಂಗಳ ಹಿಂದೆ ಅವರು ಕುಡಿದು ಬಂದು ಪತ್ನಿಯೊಡನೆ ಜಗಳವಾಡುತ್ತಿದ್ದಾಗ ಮಧ್ಯಪ್ರವೇಶಿಸಿದ ಮಕ್ಕಳನ್ನು ಕೋವಿ ಹಿಡಿದುಕೊಂಡು ಅಟ್ಟಾಡಿಸಿದ್ದರೆನ್ನಲಾಗಿದೆ. ಈ ಘಟನೆ ಪೋಲೀಸ್ ಠಾಣೆಯ ಮೆಟ್ಟಿಲೇರಿ ಪೋಲೀಸರ ಸೂಚನೆಯಂತೆ ಮನೆಯಲ್ಲಿದ್ದ ಕೋವಿಯನ್ನು ಸುಳ್ಯದ ಕೋವಿ ಮಳಿಗೆಯಲ್ಲಿ ಮೂರು ತಿಂಗಳ ಅವಧಿಗೆ ಡೆಪಾಸಿಟ್ ಮಾಡಿಸಲಾಗಿತ್ತು. ಅವಧಿ ಮುಗಿದ ಹಿನ್ನೆಲೆಯಲ್ಲಿ ಶ್ರೀಮತಿ ವಿನೋದರವರ ವಿನಂತಿಯ ಮೇರೆಗೆ ಸ್ಥಳೀಯ ಸಾಮಾಜಿಕ ಕಾರ್ಯಕರ್ತರೊಬ್ಬರು ಕೋವಿ ಬಿಡಿಸಿಕೊಳ್ಳಲು ಸಹಕರಿಸಿದ್ದರು. ಕೋವಿಯನ್ನು ಮನೆಗೆ ವಾಪಸ್ ತಂದು ಮೂರು ದಿನವಷ್ಟೆ ಆಗಿತ್ತು.

ನಿನ್ನೆ ರಾತ್ರಿ ಕುಡಿದು ಬಂದು 10 ಗಂಟೆಯ ನಂತರ ಪತ್ನಿ ವಿನೋದ ಹಾಗೂ ಪುತ್ರ ಪ್ರಶಾಂತ್ ರೊಡನೆ ರಾಮಚಂದ್ರ ಗೌಡರು ಜಗಳ ಆರಂಭಿಸಿದ್ದಾರೆ. ಈ ರೀತಿ ಜಗಳವಾಡುವುದನ್ನು ಹಿರಿಮಗ ಪ್ರಶಾಂತ್ ವಿರೋಧಿಸಿದ್ದಾನೆ. ಆಗ ರಾತ್ರಿ 10.30. ರಾಮಚಂದ್ರ ಗೌಡರು ಮನೆಯಲ್ಲಿದ್ದ ಕೋವಿ ಎತ್ತಿಕೊಂಡು, ಮಗನಿಗೆ ಗುಂಡಿಕ್ಕಲು ಬಂದಿದ್ದಾರೆ.

ಇದನ್ನು ಕಂಡ ಪತ್ನಿ ವಿನೋದರವರು ಅಡ್ಡ ಬಂದಿದ್ದಾರೆ. ಗಂಡನನ್ನು ತಡೆಯಲು ಪ್ರಯತ್ನಿಸಿ, ಅವರು ಮಲಗುತ್ತಿದ್ದ ಕೊಠಡಿಯ ಕಡೆಗೆ ದೂಡಿಕೊಂಡು ಬಂದಿದ್ದಾರೆ. ಆ ವೇಳೆ ರಾಮಚಂದ್ರ ಗೌಡರು ಕೋವಿಯ ಟ್ರಿಗರ್ ಎಳೆದಿದ್ದಾರೆ. ಗುಂಡು ವಿನೋದರವರ ಎದೆಯನ್ನು ಹೊಕ್ಕು ಅವರು ಧರಾಶಾಯಿಯಾಗಿ ಪ್ರಾಣ ಬಿಟ್ಟಿದ್ದಾರೆ. ಇದನ್ನು ಕಂಡು ರಾಮಚಂದ್ರ ಗೌಡರಿಗೆ ಕುಡಿತದ ಮತ್ತು ಇಳಿದಿದೆ. ಇನ್ನು ತನಗೆ ಉಳಿಗಾಲವಿಲ್ಲವೆಂದು ತಿಳಿದು ರಬ್ಬರ್ ಗೆ ಹಾಕಲೆಂದು ತಂದಿದ್ದ ವಿಷವನ್ನು ಕುಡಿದು ಪತ್ನಿ ಬಿದ್ದಲ್ಲಿಗೇ ಬಂದು ಬಿದ್ದಿದ್ದಾರೆ.
ಆ ಹೊತ್ತಲ್ಲಿ ಮನೆಯಲ್ಲಿ ಹಿರಿಮಗ ಪ್ರಶಾಂತ್ ಮಾತ್ರ ಇದ್ದನೆನ್ನಲಾಗಿದೆ. ಎರಡನೇ ಮಗ ನಿಶಾಂತ್ ಸುಳ್ಯದಲ್ಲಿದ್ದರೆಂದೂ, ಕಿರಿಮಗ ರಂಜಿತ್ ಬೆಳ್ತಂಗಡಿ ತಾಲೂಕಿನ ಕ್ಷೇತ್ರವೊಂದಕ್ಕೆ ಹೋಗಿದ್ದರೆಂದೂ ತಿಳಿದುಬಂದಿದೆ.


ರಾತ್ರಿಯೇ ವಿಷಯ ಸ್ಥಳೀಯರಾದ ರಾಘವ ಕಂಜಿಪಿಲಿ ಹಾಗೂ ಹರೀಶ್ ಕಂಜಿಪಿಲಿಯವರಿಗೆ ತಿಳಿದು, ಅವರು ಪೋಲೀಸರಿಗೆ ತಿಳಿಸಿ, ಸ್ಥಳಕ್ಕೆ ಹೋದರೆಂದೂ, ರಾತ್ರಿಯೇ ಪೋಲೀಸರು ಬಂದು ಮಹಜರಿಗೆ ಕ್ರಮ ಕೈಗೊಂಡಿದ್ದಾರೆ. ಮಂಗಳೂರಿನಲ್ಲಿರುವ ವಿಧಿವಿಜ್ಞಾನ ವಿಭಾಗದವರಿಗೆ ತಿಳಿಸಲಾಗಿದೆ. ಅವರು ಬೆಳಿಗ್ಗೆ ಮಂಗಳೂರಿನಿಂದ ಹೊರಟಿದ್ದಾರೆ. ಎಸ್.ಪಿ.ಯವರು ಕೂಡ ಸ್ಥಳಕ್ಕೆ ಬರಲಿದ್ದಾರೆಂದು ತಿಳಿದುಬಂದಿದೆ.