ಅಧ್ಯಕ್ಷರೋ… ಮುಖ್ಯಾಧಿಕಾರಿಯೋ..? : ನ.ಪಂ. ಸಭೆಯಲ್ಲಿ ಹೀಗೊಂದು ಚರ್ಚೆ
ಸುಳ್ಯ ನಗರ ಪಂಚಾಯತ್ ಕಾರಿನಲ್ಲಿ ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿಯವರು ಹೋಗಬೇಕಾದ ಸಂದರ್ಭ ಬಂದಾಗ ಎದುರು ಯಾರು ಕುಳಿತುಕೊಳ್ಳಬೇಕು ಎಂಬ ಜಿಜ್ಞಾಸೆ ನಗರ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ವ್ಯಕ್ತವಾದ ಪ್ರಸಂಗ ನಡೆದಿದೆ.
ಮುಖ್ಯಾಧಿಕಾರಿಯವರಿಗೆ ಕಚೇರಿ ಕೆಲಸದ ನಿಮಿತ್ತ ಓಡಾಡಲು ಹೊರಗುತ್ತಿಗೆ ಆಧಾರದಲ್ಲಿ ವಾಹನ ಟೆಂಡರು ಪಡೆಯುವ ವಿಚಾರ ಸಭೆಯಲ್ಲಿ ಪ್ರಸ್ತಾಪವಾಯಿತು.
ಈ ವೇಳೆ ಸದಸ್ಯ ಶರೀಫ್ ಕಂಠಿಯವರು ಅಧ್ಯಕ್ಷರಿಗೆ ಕಾರು ಇಲ್ಲವೇ ? ಎಂದು ಕೇಳಿದಾಗ, “ಇಲ್ಲ” ಎಂದು ಮುಖ್ಯಾಧಿಕಾರಿಗಳು ಉತ್ತರಿಸಿದರು. “ಮಾಜಿ ಅಧ್ಯಕ್ಷ ವಿನಯಣ್ಣ ಕಾರನ್ನು ಉಪಯೋಗಿಸಿದ್ದಾರಲ್ಲವೇ” ಎಂದು ಶರೀಫ್ ರವರು ಪ್ರಶ್ನಿಸಿದಾಗ, “ಉಪಯೋಗಿಸಿದ್ದಾರೆ” ಎಂದು ಸದಸ್ಯೆ ಶಿಲ್ಪಾ ಸಹಿತ ಇತರ ಮಹಿಳಾ ಸದಸ್ಯರು ಹೇಳಿದರು. “ಈಗಿನ ಅಧ್ಯಕ್ಷರೂ ಕಾರನ್ನು ಉಪಯೋಗಿಸಿಕೊಳ್ಳಲಿ” ಎಂದು ಶರೀಫ್ ಹೇಳಿದಾಗ, “ನಾನು ಮದುವೆ ಇತ್ಯಾದಿ ಕಾರ್ಯಕ್ರಮಕ್ಕೆ ಕಾರನ್ನು ಉಪಯೋಗಿಸಿಲ್ಲ. ಪಂಚಾಯತ್ ಕೆಲಸದ ಸಂದರ್ಭ ಉಪಯೋಗಿಸಿದ್ದೇನೆ. ಎಲ್ಲರೂ ಬಳಸಿಕೊಳ್ಳಬಹುದು. ಅಧ್ಯಕ್ಷರಾದವರಿಗೆ ಸಿಗುವ ಗೌರವ ಸಿಗಲೇಬೇಕು” ಎಂದು ಮಾಜಿ ಅಧ್ಯಕ್ಷ ವಿನಯ ಕಂದಡ್ಕರು ಹೇಳಿದರು. ಈಗಿನ ಅಧ್ಯಕ್ಷರು ಕೂಡಾ ಅದೇ ರೀತಿ ಕಾರನ್ನು ಬಳಸಿಕೊಳ್ಳಲಿ ಎಂದು ಸದಸ್ಯರು ಹೇಳಿದಾಗ, “ಹಿಂದಿನ ಅಧ್ಯಕ್ಷರು ಹೇಗೆ ಕಾರನ್ನು ಬಳಸಿಕೊಳ್ಳುತಿದ್ದರೋ ಅದೇ ರೀತಿ ಈಗಿನ ಅಧ್ಯಕ್ಷರು ಬಳಸಿಕೊಳ್ಳಲಿ. ಅವರಿಗೂ ಅದೇ ಗೌರವ ಸಿಗುತ್ತದೆ” ಎಂದು ಮುಖ್ಯಾಧಿಕಾರಿಗಳು ಹೇಳಿದರು.
ಆಗ ಸದಸ್ಯೆ ಶೀಲಾ ಕುರುಂಜಿಯವರು ಮಂಗಳೂರು ಇತ್ಯಾದಿ ಕಡೆ ಮೀಟಿಂಗ್ ಗಳಿಗೆ ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿಗಳು ಜತೆಯಾಗಿ ಹೋಗಬೇಕಾದ ಸಂದರ್ಭ ಬರಬಹುದು. ಆಗ ಕಾರಿನಲ್ಲಿ ಎದುರು ಕುಳಿತುಕೊಳ್ಳುವುದು ಯಾರು ?” ಎಂದು ಅವರು ಪ್ರಶ್ನಿಸಿದರು. ಆಗ ನಾಮ ನಿರ್ದೇಶಿತ ಸದಸ್ಯ ಸಿದ್ದೀಕ್, ಸದಸ್ಯ ಶರೀಫ್ ಮೊದಲಾದವರು ಅದು ಅವರು ಮಾತನಾಡಿಕೊಂಡು ಸಮಸ್ಯೆ ಸರಿ ಪಡಿಸಿಕೊಳ್ಳಲಿ ಎಂದು ಹೇಳಿದರೆ, “ಅಧ್ಯಕ್ಷರಿಗೆ ವಿಶೇಷ ಗೌರವ ಇದೆ. ಮಹಿಳೆಯೂ ಆಗಿದ್ದಾರೆ. ಅಂತ ಸಂದರ್ಭ ಬಂದರೆ ಅಧ್ಯಕ್ಷರೇ ಎದುರು ಕುಳಿತುಕೊಳ್ಳಬೇಕು. ನಿಯಮವೂ ಕೂಡ. ಈ ಬಗ್ಗೆ ಹೆಚ್ಚಿಗೆ ಚರ್ಚೆ ಬೇಡ ಎಂದು ಸದಸ್ಯ ಉಮ್ಮರ್ ಹೇಳಿದರು. ಅಧ್ಯಕ್ಷ ರಿಗೂ ಒಂದು ಕಾರು ಟೆಂಡರ್ ಕರೆಯಿರಿ ಎಂಬ ಸಲಹೆ ಬಂದಾಗ, ಅದಕ್ಕೆ ನಿರ್ಣಯ ಬರೆದು ಕಳುಹಿಸಬಹುದಷ್ಟೆ ಎಂದು ಮುಖ್ಯಾಧಿಕಾರಿಗಳು ಹೇಳಿದರು. ಅಲ್ಲಿಗೆ ಚರ್ಚೆಗೆ ತೆರೆ ಬಿತ್ತು.