ಮಂಡ್ಯದಲ್ಲಿ‌ ನಡೆಯಲಿರುವ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಸುಬ್ರಾಯ ಸಂಪಾಜೆಯವರಿಗೆ ಸನ್ಮಾನ

0

ಮಂಡ್ಯದಲ್ಲಿ ನಡೆಯುವ 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಸುಬ್ರಾಯ ಸಂಪಾಜೆಯವರು ಸನ್ಮಾನ ಪಡೆಯಲಿದ್ದಾರೆ.
ಸುಳ್ಯ ತಾಲೂಕಿನ ಸಂಪಾಜೆಯವರಾದ ಸುಬ್ರಾಯರು
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಸಂಪಾಜೆಯಲ್ಲಿ ಪೂರೈಸಿ ಸುಳ್ಯ ನೆಹರೂ ಸ್ಮಾರಕ ಮಹಾ ವಿದ್ಯಾಲಯದಲ್ಲಿ ಬಿ.ಎ. ಓದಿ ಮುಂದೆ ಮಂಗಳೂರು ವಿಶ್ವ ವಿದ್ಯಾಲಯದಿಂದ ಕನ್ನಡ ಎಂ.ಎ. ಪದವಿ ಪಡೆದರು.

1995 ರಲ್ಲಿ ಮಡಿಕೇರಿ ಆಕಾಶವಾಣಿಗೆ ಉದ್ಘೋಷಕರಾಗಿ ನೇಮಕಗೊಂಡ ಇವರು ಬಾನುಲಿಯ ಸೇವೆಯ ಜೊತೆಗೆ ಗಮಕ, ಯಕ್ಷಗಾನ ಹಾಡುಗಾರಿಕೆ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡರು.

” ಪುಟ್ಟಕ್ಕ” ಇದು ಸುಬ್ರಾಯ ಸಂಪಾಜೆಯವರು ಬರೆದ ಕಿರು ಕಾದಂಬರಿ. ಇವರ “ರಸ ರಾಮಾಯಣ” ಮೂಲ ರಾಮಾಯಣವನ್ನಾಧರಿಸಿದ ರಸಪ್ರಶ್ನೆ ಪುಸ್ತಕ. “ಕೊಡಗು ಕ್ವಿಝ್” ಕೊಡಗು ಜಿಲ್ಲೆಗೆ ಸಂಬಂಧಿಸಿದ ಮಾಹಿತಿ ಕೋಶ. ವಿದ್ವತ್ ವಲಯದಲ್ಲಿ ಸಂಪಾಜೆಯವರಿಗೆ ಅಪಾರ ಜನಪ್ರಿಯತೆ ಮತ್ತು ಗೌರವ ತಂದುಕೊಟ್ಟ ಅಧ್ಯಯನ ಗ್ರಂಥ “ಪುರಾಣ ಯಾನ”. ಇದು ಸಂಸ್ಕೃತದ ಹದಿನೆಂಟು ಮತ್ತು ಇತರ ಪುರಾಣ ಗ್ರಂಥಗಳನ್ನು ಆದ್ಯಂತ ಓದಿ ಬರೆದ ಪಾತ್ರ ಪರಿಚಯ ಕೃತಿ. ಈ ಗ್ರಂಥವು ಉಡುಪಿ ಯಕ್ಷಗಾನ ಅಧ್ಯಯನ ಕೇಂದ್ರದಲ್ಲಿ ಮಕ್ಕಳಿಗೆ ಪಠ್ಯ ಪುಸ್ತಕವಾಗಿದೆ.

ಯಕ್ಷಗಾನ ಹವ್ಯಾಸಿ ಭಾಗವತರಾಗಿ ಇವರು ಕೊಡಗು, ಮೈಸೂರು, ಬೆಂಗಳೂರು, ಮಂಗಳೂರು, ಕಾಸರಗೋಡು, ಮುಂಬೈ ಹೀಗೆ ಹಲವೆಡೆ ಯಕ್ಷಗಾನ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ೨೦೧೧ರಲ್ಲಿ ಮೂಡಬಿದಿರೆಯಲ್ಲಿ ನಡೆದ ಹವ್ಯಾಸಿ ಭಾಗವತರ ಹಾಡುಗಾರಿಕೆ ಸ್ಪರ್ಧೆಯಲ್ಲಿ ಇವರು ಪ್ರಥಮ ಸ್ಥಾನದಿಂದ ಪುರಸ್ಕೃತರಾಗಿದ್ದಾರೆ.

ಆಕಾಶವಾಣಿಯಲ್ಲಿ ಸಮಗ್ರ ಕನ್ನಡ ಸಾಹಿತ್ಯವನ್ನು “ನಾಡ ಕಣ್ಮಣಿಗಳು” ಸರಣಿಯ ಮೂಲಕ ಇವರು ಶ್ರೋತೃಗಳಿಗೆ ಪರಿಚಯಿಸಿದವರು. ಸ್ವತಃ ಗಮಕಿಯೂ ಆಗಿರುವ ಸಂಪಾಜೆಯವರು ಗಮಕದ‌ ಮೂಲಕ ಕುಮಾರವ್ಯಾಸ, ಲಕ್ಷ್ಮೀಶ ಮತ್ತು ರಾಘವಾಂಕನ ಕಾವ್ಯಗಳನ್ನು ಕೊಡಗಿನ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಪರಿಚಯಿಸಿದರು.

ಸಾಮಾಜಿಕ ಕಳಕಳಿ ಉಳ್ಳ ರೇಡಿಯೋ ಸಂದೇಶಗಳನ್ನು ಸಿದ್ಧಪಡಿಸಿ ಪ್ರಸಾರ ಮಾಡಿರುವುದು ಇವರ ರೇಡಿಯೋ ಸೇವಾವಧಿಯ ಗಮನಾರ್ಹ ಅಂಶವಾಗಿದೆ. ಪರಿಸರ, ಶಿಕ್ಷಣ, ಸಮಾಜ ಸೇವೆ ಇಂಥ ವಿಷಯಗಳನ್ನು ಒಳಗೊಂಡ ಸುಮಾರು ಮುನ್ನೂರೈವತ್ತು ರೇಡಿಯೋ ಜಿಂಗಲ್ ಅಥವಾ ಸಂದೇಶಗಳನ್ನು ಇವರು ಸಿದ್ಧಪಡಿಸಿದ್ದಾರೆ. ಸಮಗ್ರ ಭಾರತದ ಆಕಾಶವಾಣಿ ಕೇಂದ್ರಗಳಲ್ಲಿ ಸೇವಾರೂಪದಲ್ಲಿ ಈ ಬಗೆಯ ಸೇವೆ ಸಲ್ಲಿಸಿದವರು ಇವರೊಬ್ಬರೇ ಎನ್ನುವುದು ಇವರ ಹೆಗ್ಗಳಿಕೆ. ಈ ಸೇವೆಗಾಗಿ ೨೦೧೪-೧೫ ರಲ್ಲಿ ಇವರು ರಾಜ್ಯಮಟ್ಟದ ಪುರಸ್ಕಾರವನ್ನು ಪಡೆದಿದ್ದಾರೆ.