ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನ

0

ಕಾಡಾನೆ ದಾಳಿಗಳ ಗಂಭೀರ ಸಮಸ್ಯೆ ಬಗ್ಗೆ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರುರವರಿಂದ ಚರ್ಚೆ

ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಉಡುಪಿ–ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರು ಅವರು ದಕ್ಷಿಣ ಕನ್ನಡ ಜಿಲ್ಲೆಯ ಕಾಡಂಚಿನ ಜನರನ್ನು ದಿನದಿಂದ ದಿನಕ್ಕೆ ಸಂಕಷ್ಟಕ್ಕೆ ಒಳಪಡಿಸುತ್ತಿರುವ ಕಾಡಾನೆ ದಾಳಿಗಳ ಗಂಭೀರ ಸಮಸ್ಯೆ ಕುರಿತು ಅರಣ್ಯ ಸಚಿವರನ್ನು ತೀವ್ರವಾಗಿ ಪ್ರಶ್ನಿಸಿದರು. ಕಳೆದ ಅಧಿವೇಶನದಲ್ಲಿ ಸಚಿವರು ದಕ್ಷಿಣ ಕನ್ನಡದಲ್ಲಿ ಎಲಿಫಂಟ್ ಟಾಸ್ಕ್ ಫೋರ್ಸ್ (ETF) ಸ್ಥಾಪಿಸುವುದಾಗಿ ಹಾಗೂ ಜಿಲ್ಲೆಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸುವುದಾಗಿ ಕಳೆದ ಅಧಿವೇಶನದಲ್ಲಿ ಘೋಷಣೆ ಮಾಡಿದ್ದರೂ ಕೂಡ, ಇವತ್ತು ತನಕ ಯಾವುದೇ ಭೇಟಿ ನಡೆದಿಲ್ಲ ಮತ್ತು ETF ಸ್ಥಾಪನೆಯೂ ಕಾಗದದಲ್ಲೇ ಉಳಿದಿದೆ ಎಂದು ಶಾಸಕರು ಹೇಳಿದರು.

ಸದನದಲ್ಲಿ ಚುಕ್ಕಿ ರಹಿತ ಪ್ರಶ್ನೆಯನ್ನು ಸಲ್ಲಿಸಿದ ಶಾಸಕರು, ಸಚಿವರ ನಿರ್ಲಕ್ಷ್ಯವನ್ನು ಗಂಭೀರವಾಗಿ ಟೀಕಿಸಿ,
“ಸಚಿವರಿಗೆ ದಕ್ಷಿಣ ಕನ್ನಡದ ದೇವಸ್ಥಾನಗಳು ಮಾತ್ರ ಕಾಣುತ್ತಿವೆ” ಜನರು ನಿತ್ಯವೂ ಕಾಡಾನೆ ದಾಳಿಯಿಂದ ಅನುಭವಿಸುತ್ತಿರುವ ತೊಂದರೆ ಕಾಣುತ್ತಿಲ್ಲ. ಸದನದಲ್ಲಿ ಅಧಿಕಾರಿಗಳು ಬರೆದು ಕೊಟ್ಟಿರುವ ಉತ್ತರವನ್ನು ಓದಿ ಹೇಳುವುದರ ಹೊರತು ಜನರ ಸಮಸ್ಯೆ ಬಗೆಹರಿಸಲು ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ಕಿಡಿಕಾರಿದರು.

ಪ್ರಶ್ನೆಗೆ ಉತ್ತರಿಸಿದ ಅರಣ್ಯ ಸಚಿವರು ETF ಸ್ಥಾಪನೆ ಕುರಿತು ವಿಚಾರಣೆ ಇನ್ನೂ ನಡೆಯುತ್ತಿದೆ ಎಂಬ ಸಾಮಾನ್ಯ ಉತ್ತರವನ್ನು ನೀಡಿದರು. ಆದರೆ ಟಾಸ್ಕ್ ಫೋರ್ಸ್ ರಚನೆಗೆ ಬೇಕಾದ ಕಾಲಾವಧಿ, ಸಿಬ್ಬಂದಿ ನಿಯೋಜನೆ, ಬಜೆಟ್ ಅಥವಾ ಕ್ಷೇತ್ರದ ಪರಿಶೀಲನೆ ಕುರಿತು ಸ್ಪಷ್ಟ ಮಾಹಿತಿಯನ್ನು ನೀಡದೆ ಪುನಃ ಅಸ್ಪಷ್ಟ ಉತ್ತರಕ್ಕೆ ಶಾಸಕರು ಮತ್ತಷ್ಟು ಅಸಮಾಧಾನ ವ್ಯಕ್ತಪಡಿಸಿದರು.

ದಕ್ಷಿಣ ಕನ್ನಡದ ಅರಣ್ಯ ತಟ ಪ್ರದೇಶಗಳಲ್ಲಿ ಕಾಡಾನೆ ದಾಳಿಗಳಿಂದ ಜನರ ಮನೆಗಳು, ಬೆಳೆಗಳು, ಜೀವಗಳಿಗೆ ಅಪಾಯ ಉಂಟಾಗುತ್ತಿರುವ ಗಂಭೀರ ಪರಿಸ್ಥಿತಿಯನ್ನು ಶಾಸಕರು ಸದನದಲ್ಲಿ ವಿವರಿಸಿ, “ಜನರ ಬದುಕು ದಿನದಿಂದ ದಿನಕ್ಕೆ ಸಂಕಷ್ಟವಾಗುತ್ತಿದೆ. ತಕ್ಷಣ ETF ರಚನೆ ಮಾಡಿ ಜನರ ರಕ್ಷಣೆಗೆ ಭದ್ರ ಕ್ರಮ ಕೈಗೊಳ್ಳುವುದು ಸರ್ಕಾರದ ಕರ್ತವ್ಯ” ಎಂದು ಒತ್ತಾಯಿಸಿದರು.