ಸುಳ್ಯ ನಗರದಲ್ಲಿ ನೀರಿನ ಯೋಜನೆ ಅನುಷ್ಠಾನ

0

ಸುಳ್ಯ ನಗರ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಕಾಮಗಾರಿ ನಡೆಯುತ್ತಿದ್ದು ರಥಬೀದಿ ರಸ್ತೆಯಲ್ಲಿ ಹಾಗೂ ಗಾಂಧಿನಗರ ರಸ್ತೆಯಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ಧೂಳಿನಿಂದ ಜನರು ತೊಂದರೆ ಅನುಭವಿಸುತ್ತಿದ್ದು ಇದರ ಪರಿಹಾರಕ್ಕೆ ನ.ಪಂ. ಸದಸ್ಯರು ಆಗ್ರಹಿಸಿದ್ದಾರೆ.


ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಉಪಾಧ್ಯಕ್ಷ ಬುದ್ಧ ನಾಯ್ಕ್, ಸ್ಥಾಯಿ ಸಮಿತಿ ಅಧ್ಯಕ್ಷೆ ಕಿಶೋರಿ ಶೇಟ್, ಮುಖ್ಯಾಧಿಕಾರಿ ಸುಧಾಕರ್, ಸದಸ್ಯರುಗಳಾದ ಎಂ.ವೆಂಕಪ್ಪ ಗೌಡ, ಡೇವಿಡ್ ಧೀರಾ ಕ್ರಾಸ್ತ, ಬಾಲಕೃಷ್ಣ ಭಟ್ ಕೊಡೆಂಕಿರಿ, ಶರೀಫ್ ಕಂಠಿ, ರಿಯಾಜ್ ಕಟ್ಟೆಕಾರ್, ಕೆ.ಎಸ್. ಉಮ್ಮರ್, ಪ್ರವೀತಾ ಪ್ರಶಾಂತ್, ಪೂಜಿತಾ ಕೆ.ಯು., ಸುಶೀಲ ಕಲ್ಲುಮುಟ್ಲು, ವಾಣಿಶ್ರೀ ಬೊಳಿಯಮಜಲು, ಶಿಲ್ಪಾ ಸುದೇವ್, ಸರೋಜಿನಿ ಪೆಲ್ತಡ್ಕ, ಶೀಲಾ ಕುರುಂಜಿ, ಬಾಲಕೃಷ್ಣ ರೈ ದುಗಲಡ್ಕ, ಸುಧಾಕರ ಕುರುಂಜಿಭಾಗ್, ವಿನಯ ಕುಮಾರ್ ಕಂದಡ್ಕ, ನಾಮನಿರ್ದೇಶಿತ ಸದಸ್ಯರುಗಳಾದ ಸಿದ್ಧೀಕ್ ಕೊಕ್ಕೊ, ರಾಜು ಪಂಡಿತ್, ಬಾಲಕೃಷ್ಣ ಪೂಜಾರಿ ಸಭೆಯಲ್ಲಿದ್ದರು.


ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಎಂ.ವೆಂಕಪ್ಪ ಗೌಡರು, ಸುಳ್ಯ ರಥಬೀದಿಯಲ್ಲಿ ಹಾಗೂ ಗಾಂಧಿನಗರದಲ್ಲಿ ನೀರುಸರಬರಾಜು ಯೋಜನೆಯ ಕಾಮಗಾರಿ ನಡೆಯುತ್ತಿದೆ. ವಿಪರೀತ ಧೂಳು ಸಾರ್ವಜನಿಕರಿಗೆ ತೊಂದರೆಯಾಘುತ್ತಿದೆ. ಅಂಗಡಿಯವರು ವ್ಯಾಪಾರ ಮಾಡೋದು ಹೇಗೆ? ಮತ್ತು ಅಲ್ಲಲ್ಲಿ ರಸ್ತೆಯಲ್ಲಿ ಗುಂಡಿಗಳಾಗಿದ್ದು ಅದನ್ನು ಸರಿಯಾಗಿ ಮುಚ್ಚಿಲ್ಲ. ಸುಳ್ಯ ಜಾತ್ರೆಯೂ ಹತ್ತಿರವಿದೆ ಹೀಗಾದರೆ ಹೇಗೆ. ಜನರು ನಮ್ಮನ್ನು ಪ್ರಶ್ನಿಸುತ್ತಾರೆ ಎಂದು ಹೇಳಿದರು. ಆದರೆ ಆರಂಭದಲ್ಲಿ ಯೋಜನೆಯ ಇಂಜಿನಿಯರ್ ಸಭೆಗೆ ಬಂದಿರಲಿಲ್ಲ. ಬಳಿಕ ಕರೆಸಲಾಯಿತು. ಅವರು ಬಂದ ಬಳಿಕವೂ ವೆಂಕಪ್ಪ ಗೌಡರು ಇದೇ ಪ್ರಶ್ನೆಯನ್ನು ಮುಂದಿಟ್ಟಾಗ, ಉತ್ತರಿಸಿದ ಶ್ರೀಕಾಂತ್‌ರವರು, “ರಥಬೀದಿಯಲ್ಲಿ ನೀರು ಹಾಕಿದ್ದೆವು. ಮತ್ತು ಆ ರಸ್ತೆಯನ್ನು ಜಾತ್ರೆಗೆ ಮೊದಲು ಲೆವೇಲ್ ಮಾಡಿ ಕೊಡುತ್ತೇವೆ. ಇನ್ನೂ ಆ ಭಾಗದಲ್ಲಿ ರಸ್ತೆಗೆಯಲು ಇದ್ದು ಸಣ್ಣ ಪೈಪ್ ಹಾಕಲಿzವೆ. ಆದ್ದರಿಂದ ಜಾತ್ರೆ ಸಂದರ್ಭ ತೊಂದರೆಯಾದಂತೆ ಸಮತಟ್ಟು ಗೊಳಿಸಲಾಗುವುದು ಎಂದು ಹೇಳಿದ ಅವರು, ಧೂಳು ಬಾರದಂತೆ ನೀರು ಹಾಕಲು ಸೂಚನೆ ನೀಡುತ್ತೇವೆ ಎಂದು ಹೇಳಿದರು. ಬೀರಮಂಗಲದಲ್ಲಿ ನನ್ನ ಮನೆಗೇ ಪೈಪ್ ಹಾಕಿಲ್ಲವೆಂದು ವೆಂಕಪ್ಪ ಗೌಡರು ಪ್ರಸ್ತಾಪಿಸಿದರೆ, ಡೇವಿಡ್ ಧೀರಾ ಕ್ರಾಸ್ತ, ಕಿಶೋರಿ ಶೇಟ್ ಸಹಿತ ಎಲ್ಲ ಸದಸ್ಯರುಗಳು ಕೂಡಾ ತಮ್ಮ ವ್ಯಾಪ್ತಿಯ ಸಮಸ್ಯೆಗಳನ್ನು ಇಂಜಿಯರ್‌ಗಳ ಗಮನಕ್ಕೆ ತಂದರು. ಕಾಮಗಾರಿ ಪೂರ್ತಿ ಆಗಿಲ್ಲ. ನಾವು ಎಲ್ಲವನ್ನು ಸರಿಪಡಿಸಿ ಕೊಡುತ್ತೇವೆ ಎಂದು ಇಂಜಿನಿಯರ್ ಶ್ರೀಕಾಂತರು ಭರವಸೆ ನೀಡಿದರು.


ಯೋಜನೆಯ ಕುರಿತು ಡಿಪಿಆರ್ ಅನ್ನು ನಗರ ಪಂಚಾಯತ್‌ಗೆ ಸಲ್ಲಿಸಬೇಕಎಂದು ನಿಯಮ. ಆದರೆ ನೀವು ಇನ್ನೂ ಕೊಟ್ಟಿಲ್ಲ ಎಂದು ಮಾಜಿ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಹೇಳಿದಾಗ, ಅದರ ಪ್ರತಿ ನೀಡುವುದಾಗಿ ಇಂಜಿನಿಯರ್ ಒಪ್ಪಿಕೊಂಡರು.


ಸುಳ್ಯದಲ್ಲಿ ಬೀದಿ ನಾಯಿಗಳ ಕಾಟ, ಗುರುಂಪಿನಲ್ಲಿ ಕಾರು ಪಲ್ಟಿಯಾಗಿ ಮನೆಗೆ ಹಾನಿಯಾಗಿದ್ದು ಪರಿಹಾರ, ಬೀರಮಂಗಲ ಪಾರ್ಕ್ ಅಭಿವೃದ್ಧಿ, ಸುಳ್ಯದ ಪುರಭವನಕ್ಕೆ ನೀಲಿ ನಕಾಶೆ ತಯಾರಿ, ಸಾಮಾನ್ಯ ಸಭೆಗೆ ಅಧಿಕಾರಿಗಳು ಬಾರದೇ ಇರುವುದು ಇತ್ಯಾದಿ ವಿಚಾರಗಳ ಚರ್ಚೆ ಸಭೆಯಲ್ಲಿ ನಡೆಯಿತು.