ವಿಟಮಿನ್ ‘ಸಿ’ ನಮ್ಮ ದೇಹಕ್ಕೆ ಅತೀ ಅಗತ್ಯವಾದ ವಿಟಮಿನ್ ಆಗಿದ್ದು, ನಮ್ಮ ದೇಹದಲ್ಲಿನ ಅನೇಕ ಕಿಣ್ವಗಳ ಕಾರ್ಯಕ್ಷಮತೆಗೆ ಮತ್ತು ರಕ್ಷಣಾ ವ್ಯವಸ್ಥೆಯ ಪರಿಪೂರ್ಣತೆಗೆ ಅತ್ಯಂತ ಅಗತ್ಯವಾಗಿರುತ್ತದೆ. ಆಂಗ್ಲಭಾಷೆಯಲ್ಲಿ ‘ಆಸ್ಕೊರ್ಬಿಕ್ ಆಸಿಡ್’ ಎಂದೂ ಕರೆಯುತ್ತಾರೆ. ಇದೊಂದು ನೀರಿನಲ್ಲಿ ಕರಗುವ ವಿಟಮಿನ್ ಆಗಿದ್ದು, ದೇಹದಲ್ಲಿ ಶೇಖರಣೆ ಆಗುವುದಿಲ್ಲ. ಅಗತ್ಯಕ್ಕಿಂತ ಜಾಸ್ತಿ ಸೇವಿಸಿದಲ್ಲಿ ದೇಹದಿಂದ ಹೊರಹಾಕಲ್ಪಡುತ್ತದೆ. ಈ ಕಾರಣದಿಂದಾಗಿ ದಿನನಿತ್ಯ ನಿರ್ದಿಷ್ಟ ಪ್ರಮಾಣದ, ದೇಹಕ್ಕೆ ಅವಶ್ಯವಿರುವ ವಿಟಮಿನ್ ‘ಸಿ’ ನಮ್ಮ ಆಹಾರದೊಂದಿಗೆ ನಿರಂತರವಾಗಿ ಪೂರೈಕೆ ಆಗುತ್ತಿರಬೇಕು. ಇದರ ಜೊತೆಗೆ ವಿಟಮಿನ್ ‘ಸಿ’ ಅತೀ ಉತ್ತಮ ‘ಆಂಟಿ ಆಕ್ಸಿಡೆಂಟ್’ ಆಗಿ ಕಾರ್ಯ ನಿರ್ವಹಿಸುತ್ತದೆ. 1912 ರಲ್ಲಿ ವಿಟಮಿನ್ ‘ಸಿ’ ಅನ್ನು ಪತ್ತೆಹಚ್ಚಲಾಯಿತು. 1928ರಲ್ಲಿ ಬೇರ್ಪಡಿಸಲಾಯಿತು ಮತ್ತು 1933 ರಲ್ಲಿ ರಾಸಾಯನಿಕಗಳಿಂದ ವಿಟಮಿನ್ ‘ಸಿ’ ಅನ್ನು ಉತ್ಪಾದನೆ ಮಾಡಲು ಆರಂಭಿಸಲಾಯಿತು. ವಿಶ್ವಸಂಸ್ಥೆ ಪಟ್ಟಿ ಮಾಡಿದ ಅತೀ ಅಗತ್ಯದ, ಸುರಕ್ಷಿತ ಮತ್ತು ಪರಿಣಾಮಕಾರಿ ಔಷಧಿಗಳ ಪಟ್ಟಿಯಲ್ಲಿ ‘ವಿಟಮಿನ್ ಸಿ’ ಸೇರಿರುತ್ತದೆ.
ಸಾಮಾನ್ಯವಾಗಿ ವ್ಯಕ್ತಿಗೆ ಶೀತ ಉಂಟಾದಾಗ ಬೇಗನೆ ಗುಣಮುಖರಾಗಲು, ಗಾಯ ಉಂಟಾದಾಗ ಗಾಯ ಒಣಗಲು ಈ ವಿಟಮಿನ್’ಸಿ’ ಬಳಸಲಾಗುತ್ತದೆ. ಸೋಂಕು ತಡೆಯುವ ಶಕ್ತಿ ವಿಟಮಿನ್ ’ಸಿ’ ಗೆ ಇರದಿದ್ದರೂ ಸೋಂಕು ವಾಸಿಯಾಗಲು ಬಹಳ ಅಗತ್ಯ. ವಿಟಮಿನ್ ‘ಸಿ’ ಕೊಲ್ಲಾಜಿನ್ ಮತ್ತು ಕಾರ್ಟಿಲೇಜ್ ಉತ್ಪಾದನೆಗೆ ಸಹಕರಿಸುವ ಕಾರಣದಿಂದ, ಗಾಯ ವಾಸಿಯಾಗಲು ವಿಟಮಿನ್ ‘ಸಿ’ ಯನ್ನು ಔಷಧಿಯ ರೂಪದಲ್ಲಿ ಬಳಸಲಾಗುತ್ತದೆ. ಈಗ ಕೋವಿಡ್-19 ವೈರಣು ಸೋಂಕು ಸಮುದಾಯದಲ್ಲಿ ಸಾಂಕ್ರಾಮಿಕವಾಗಿ ಹರಡುತ್ತಿರುವ ಸಂದರ್ಭದಲ್ಲಿ, ದೇಹದ ರಕ್ಷಣಾ ಶಕ್ತಿ ವೃದ್ಧಿಸಲು, ಬೇಗನೆ ಗುಣಮುಖರಾಗಲು, ಶೀತದಿಂದ ವಾಸಿಯಾಗಲು ವಿಟಮಿನ್ ‘ಸಿ’ಯನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಯಾವುದೇ ವಿಶೇಷ ಮಾರಣಾಂತಿಕ ಅಡ್ಡಪರಿಣಾಮ ಇಲ್ಲದ ಔಷಧ ಇದಾಗಿದ್ದು, ಫಾರ್ಮಸಿಗಳಲ್ಲಿ ಬಹಳ ಸುಲಭವಾಗಿ ವೈದ್ಯರ ಚೀಟಿ ಇಲ್ಲದೆಯೂ ದೊರಕುತ್ತದೆ. ಕಡಿಮೆ ವೆಚ್ಚದ ಜನಸಾಮಾನ್ಯರಿಗೆ ಪ್ರೀತಿ ಪಾತ್ರವಾದ ಈ ಔಷಧಿಯನ್ನು “ಆಪದ್ಭಾಂದವ ಔಷಧಿ” ಎಂದು ಕರೆಯುತ್ತಾರೆ.
ವಿಟಮಿನ್ ’ಸಿ’ ಇದರ ಪ್ರಯೋಜನಗಳೇನು?
ವಿಟಮಿನ್ ’ಸಿ’ ನಮ್ಮ ದೇಹದಲ್ಲಿ ಉತ್ಪಾದನೆ ಆಗದ ಕಾರಣ ಅಗತ್ಯದ ವಿಟಮಿನ್ ಎಂಬ ಹಣೆಪಟ್ಟಿ ಪಡೆದುಕೊಂಡಿದೆ. ದಿನವೊಂದಕ್ಕೆ ಪುರುಷರಿಗೆ 90 mg ಮತ್ತು ಮಹಿಳೆಯರಿಗೆ 75 mg ವಿಟಮಿನ್ ‘ಸಿ’ ಅವಶ್ಯ ಇರುತ್ತದೆ. ನಮ್ಮ ದಿನನಿತ್ಯದ ಹೆಚ್ಚಿನ ಆಹಾರ ಪದಾರ್ಥಗಳಲ್ಲಿ ವಿಟಮಿನ್ ‘ಸಿ’ ಹೇರಳವಾಗಿರುವ ಕಾರಣದಿಂದ ಔಷಧಿಯ ರೂಪದಲ್ಲಿ ವಿಟಮಿನ್ ‘ಸಿ’ ಮಾತ್ರೆ ತಿನ್ನುವ ಅವಶ್ಯಕತೆ ಬರುವುದಿಲ್ಲ. ಅತೀ ಅಗತ್ಯವಿದ್ದಲ್ಲಿ ಮಾತ್ರ ಔಷಧಿಯ ಮೊರೆ ಹೋಗತಕ್ಕದ್ದು.
- ವಿಟಮಿನ್ ‘ಸಿ’ ಗೆ ಬಹಳ ಬಲಿಷ್ಟವಾದ ಆಂಟಿ ಆಕ್ಸಿಡೆಂಟ್ ಗುಣ ಇರುವುದರಿಂದ ನಮ್ಮ ದೇಹದ ರಕ್ಷಣಾ ವ್ಯವಸ್ಥೆಯನ್ನು ಸದೃಢಗೊಳಿಸಿ ಅನೇಕ ದೀರ್ಘಕಾಲಿಕ ರೋಗಗಳಿಂದ ನಮ್ಮನ್ನು ರಕ್ಷಿಸುತ್ತದೆ. ನಮ್ಮ ದೇಹದ ಜೀವಕೋಶಗಳ ಜೈವಿಕ ಕ್ರಿಯೆಗಳಿಂದ ಉತ್ಪತ್ತಿಯಾಗುವ ಆಕ್ಸಿಜನ್ ‘ಪ್ರೀ ರ್ಯಾಡಿಕಲ್’ ನಿಂದ ಜೀವಕೋಶಗಳನ್ನು ರಕ್ಷಿಸುವಲ್ಲಿ ವಿಟಮಿನ್ ’ಸಿ’ ನಿರ್ಣಾಯಕ ಪಾತ್ರ ವಹಿಸುತ್ತದೆ.
- ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ವಿಟಮಿನ್ ‘ಸಿ’ ಉಪಯುಕ್ತ ಕಾರ್ಯ ನಿರ್ವಹಿಸುತ್ತದೆ. ವಿಟಮಿನ್ ‘ಸಿ’ ರಕ್ತನಾಳಗಳನ್ನು ಹಿಗ್ಗಿಸಿ ಹೃದಯದ ಮೇಲಿನ ಒತ್ತಡ ಕಡಿಮೆ ಮಾಡಿ ರಕ್ತದೊತ್ತಡವನ್ನು ನಿಯಂತ್ರಿಸಿ, ಹೃದಯ ವೈಫಲ್ಯ ಉಂಟಾಗದಂತೆ ತಡೆಯುತ್ತದೆ.
- ಹೃದಯದ ವೈಫಲ್ಯ, ಹೃದಯ ತೊಂದರೆ ಬರುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ವಿಟಮಿನ್ ‘ಸಿ’ ನಿಯಮಿತ ಸೇವನೆಯಿಂದ ಕೊಲೆಸ್ಟೆರಾಲ್ ಮತ್ತು ಟೈಗ್ಲಿಸರೈಡ್ ಪ್ರಮಾಣ ಕಡಿಮೆಯಾಗಿ ಪರೋಕ್ಷವಾಗಿ ಹೃದಯ ವೈಫಲ್ಯವನ್ನು ತಡೆಯುತ್ತದೆ. ರಕ್ತದೊತ್ತಡ ನಿಯಂತ್ರಿಸಿ ಹೃದಯಕ್ಕೆ ಹೆಚ್ಚಿನ ಒತ್ತಡ ಬಾರದಂತೆ ತಡೆಯುತ್ತದೆ. ದಿನವೊಂದಕ್ಕೆ 500 mg ವಿಟಮಿನ್ ‘ಸಿ’ ಸೇವಿಸುವ ವ್ಯಕ್ತಿಗಳಲ್ಲಿ ಹೃದಯದ ವೈಫಲ್ಯತೆ ಶೇಕಡಾ 30 ರಷ್ಟು ಕುಂಠಿತವಾಗುತ್ತದೆ ಎಂದು ಅಧ್ಯಯನಗಳಿಂದ ಸಾಬೀತಾಗಿದೆ.
- ವಿಟಮಿನ್ ‘ಸಿ’ ಜಾಸ್ತಿ ಇರುವ ಆಹಾರ ಸೇವಿಸುವುದರಿಂದ ರಕ್ತದಲ್ಲಿನ ಯುರಿಕ್ ಆಸಿಡ್ ಪ್ರಮಾಣ ನಿಯಂತ್ರಿಸಲ್ಪಟ್ಟು, ‘ಗೌಟ್’ ರೋಗ ಬರುವ ಸಾಧ್ಯತೆ ಕಡಿಮೆಯಾಗುತ್ತದೆ.
- ದೇಹದಲ್ಲಿ ಕಬ್ಬಿಣದ ಕೊರತೆ ತಡೆಯುವಲ್ಲಿ ವಿಟಮಿನ್ ‘ಸಿ’ ಬಹುಮುಖ್ಯ ಭೂಮಿಕೆ ವಹಿಸುತ್ತದೆ ಮತ್ತು ರಕ್ತಹೀನತೆಯನ್ನು ತಡೆಯುತ್ತದೆ. ಸಸ್ಯಾಹಾರಿಗಳಲ್ಲಿ ಆಹಾರದಲ್ಲಿನ ಕಬ್ಬಿಣದ ಅಂಶವನ್ನು ಹೀರಿಕೊಳ್ಳಲು ವಿಟಮಿನ್ ‘ಸಿ’ ಸಹಕರಿಸುತ್ತದೆ. ಮಾಂಸಾಹಾರಿಗಳಲ್ಲಿ ಮಾಂಸಗಳಲ್ಲಿ ಅತೀ ಹೆಚ್ಚು ಕಬ್ಬಿಣದ ಅಂಶ ಇರುವುದರಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ.
- ವಿಟಮಿನ್ ‘ಸಿ’ ದೇಹದ ರಕ್ಷಣಾ ವ್ಯವಸ್ಥೆಯನ್ನು ಸದೃಢಗೊಳಿಸುತ್ತದೆ. ದೇಹದಲ್ಲಿನ ಬಿಳಿ ರಕ್ತಕಣಗಳ ಉತ್ಪಾದನೆಗೆ ವಿಟಮಿನ್ ‘ಸಿ’ ಸಹಕರಿಸುತ್ತದೆ. ಅದೇ ರೀತಿ ವಿಟಮಿನ್ ‘ಸಿ’ ಬಿಳಿ ರಕ್ತಕಣಗಳನ್ನು ‘ಪ್ರೀ ರ್ಯಾಡಿಕಲ್’ ಕಣಗಳಿಂದ ರಕ್ಷಿಸುತ್ತದೆ. ನಮ್ಮ ದೇಹದ ಚರ್ಮದ ಆರೋಗ್ಯಕ್ಕೂ ವಿಟಮಿನ್ ‘ಸಿ’ ಅತೀ ಅವಶ್ಯಕ. ಗಾಯ ಒಣಗಲು, ಗುಣವಾಗಲು, ಕೊಲ್ಲಾಜೆನ್ ಎಂಬ ಪ್ರೊಟೀನ್ ಉತ್ಪಾದನೆ ಮಾಡಲು ವಿಟಮಿನ್ ಅತೀ ಅವಶ್ಯಕ. ನ್ಯುಮೋನಿಯಾ ಉಂಟಾದಾಗ ದೇಹದಲ್ಲಿ ವಿಟಮಿನ್ ‘ಸಿ’ ಅಂಶ ಜಾಸ್ತಿ ಇದ್ದಲ್ಲಿ ಬೇಗನೆ ಗುಣಮುಖರಾಗುತ್ತಾರೆ.
- ಮರೆಗುಳಿತನವನ್ನು ತಡೆಯುವಲ್ಲಿ ಬಹಳ ನಿರ್ಣಾಯಕ ಪಾತ್ರ ವಹಿಸುತ್ತದೆ. ವಿಶ್ವದಾದ್ಯಂತ 35 ಮಿಲಿಯನ್ ಮಂದಿ ಮರೆಗುಳಿತನದಿಂದ ಬಳಲುತ್ತಿದ್ದಾರೆ. ಕೇಂದ್ರೀಯ ನರಮಂಡಲದ ನರಕೋಶಗಳ ಉರಿಯೂತವನ್ನು ನಿಯಂತ್ರಿಸಿ ಮರೆಗುಳಿತನವನ್ನು ತಡೆದು ವ್ಯಕ್ತಿಯ ಚಿಂತನಾ ಸಾಮಥ್ರ್ಯವನ್ನು ವಿಟಮಿನ್ ‘ಸಿ’ ವೃದ್ದಿಸುತ್ತದೆ.
ಎಲ್ಲಿ ವಿಟಮಿನ್ ‘ಸಿ’ ದೊರಕುತ್ತದೆ?
1) ಪೇರಳೆ ಹಣ್ಣು, ಕಿವಿ ಫ್ರೂಟ್ಸ್, ಪಪ್ಪಾಯ ಹಣ್ಣು, ಸ್ಟ್ಯಾಬೆರಿ ಹಣ್ಣು, ಕಿತ್ತಳೆ, ಮೂಸಂಬಿ ಹಣ್ಣು ಗಳಲ್ಲಿ ವಿಟಮಿನ್ ‘ಸಿ’ ಹೇರಳವಾಗಿರುತ್ತದೆ.
2) ಟೊಮೆಟೋ, ಲಿಂಬೆ, ದೊಣ್ಣೆಮೆಣಸಿನ ಕಾಯಿ, ಬ್ರೊಕೋಲಿ, ಹುರುಳಿಕಾಯಿಗಳಲ್ಲಿಯೂ ವಿಟಮಿನ್ ‘ಸಿ’ ಹೇರಳವಾಗಿದೆ.
ವಿಟಮಿನ್ ‘ಸಿ’ ಕೊರತೆಯಿಂದ ತೊಂದರೆಗಳು ಏನು?
1) ವಸಡಿನಲ್ಲಿ ರಕ್ತಸ್ರಾವ ಉಂಟಾಗಬಹುದು. ‘ಸ್ಕವ್ರಿ’ ಎಂಬ ವಸಡಿಗೆ ಸಂಬಂಧಪಟ್ಟ ರೋಗ ಬರಬಹುದು. ಕೊಲ್ಲಾಜೆನ್ ಎಂಬ ವಸ್ತು, ವಿಟಮಿನ್ ‘ಸಿ’ ಕೊರತೆಯಿಂದಾಗಿ ಉತ್ಪಾದನೆಯಾಗದಿದ್ದಾಗ ವಸಡುಗಳು ಊದಿಕೊಂಡು ಕೆಂಪಾಗಿ ರಕ್ತ ಒಸರುತ್ತದೆ.
2) ಪದೇ ಪದೇ ಗಾಯಗಳಾಗುವುದು. ಸೋಂಕು ಉಂಟಾಗುವುದು, ಶೀತ ಉಂಟಾಗುವುದು, ಗಾಯ ಒಣಗದೇ ಇರುವುದು ಕಂಡು ಬರುತ್ತದೆ. ದೇಹದ ರಕ್ಷಣಾ ವ್ಯವಸ್ಥೆ ಹದಗೆಡುವುದೇ ಇದಕ್ಕೆ ಮುಖ್ಯಕಾರಣ.
3) ವಿಟಮಿನ್ ‘ಸಿ’ ಕೊರತೆಯಿಂದಾಗಿ ‘ಕÀಬ್ಬಿಣ’ದ ಅಂಶ ಹೀರುವಿಕೆ ಕುಂಠಿತವಾಗಿ ರಕ್ತಹೀನತೆ ಉಂಟಾಗಬಹುದು.
4) ಮೂಗಿನಲ್ಲಿ ರಕ್ತಸ್ರಾವ, ಒಣಗಿದ ಚರ್ಮ, ಸುಸ್ತು, ಆಯಾಸ, ಚರ್ಮದಲ್ಲಿ ತುರಿಕೆ ಮತ್ತು ಕೂದಲುಗಳು ಸೀಳುವುದು ಕಂಡುಬರುತ್ತದೆ.
ಕೊನೆಮಾತು:
ಅತಿಯಾದರೆ ಅಮೃತವೂ ವಿಷ ಎಂಬಂತೆ, ವಿಟಮಿನ್ ‘ಸಿ’ ಕೂಡಾ ಅಗತ್ಯಕ್ಕಿಂತ ಜಾಸ್ತಿ ಸೇವನೆ ಮಾಡಿದರೆ ತೊಂದರೆ ನೀಡಬಹುದು. ಜೀರ್ಣಾಂಗ ವ್ಯೂಹದ ಸಮಸ್ಯೆಗಳು, ಕಿಡ್ನಿ ಕಲ್ಲುಗಳು ಮುಂತಾದ ಗಂಭೀರ ಸಮಸ್ಯೆಗಳಿಗೆ ಸದ್ದಿಲ್ಲದೆ ಮುನ್ನುಡಿ ಬರೆಯುವ ಸಾಧ್ಯತೆ ಇರುತ್ತದೆ. ವಿಟಮಿನ್ ‘ಸಿ’ ನೀರಿನಲ್ಲಿ ಕರಗುವ ಕಾರಣದಿಂದ ಬಹಳ ಬೇಗನೆ ಮೂತ್ರದ ಮುಖಾಂತರ ಹೆಚ್ಚಾದ ವಿಟಮಿನ್ ‘ಸಿ’ ದೇಹದಿಂದ ಹೊರಹಾಕಲ್ಪಡುತ್ತದೆ. ನಾವು ದಿನನಿತ್ಯ ಸೇವಿಸುವ ಹಣ್ಣು ತರಕಾರಿಗಳಲ್ಲಿ ನೈಸರ್ಗಿಕವಾದ ವಿಟಮಿನ್ ‘ಸಿ’ ಹೇರಳವಾಗಿರುವುದರಿಂದ ಕೃತಕವಾಗಿ ತಯಾರಿಸಿದ ವಿಟಮಿನ್ ‘ಸಿ’ ಮಾತ್ರೆ ಸೇವಿಸಬೇಕಾದ ಅನಿವಾರ್ಯತೆ ಹೆಚ್ಚಿನವರಿಗೆ ಬರುವುದಿಲ್ಲ. ಆದರೆ ಈಗ ಕೋವಿಡ್-19 ರೋಗ ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಎಲ್ಲರೂ ಸಾಕಷ್ಟು ಪ್ರಮಾಣದಲ್ಲಿ ವಿಟಮಿನ್ ‘ಸಿ’ ಬಳಸಿದಲ್ಲಿ ದೇಹದ ರಕ್ಷಣಾ ವ್ಯವಸ್ಥೆ ಮತ್ತಷ್ಟು ಸದೃಢಗೊಂಡು ದೇಹದಲ್ಲಿನ ಗಾಯಗಳು ಬೇಗನೆ ವಾಸಿಯಾಗಿ ಶೀಘ್ರ ಗುಣಮುಖವಾಗುವ ಸಾಧ್ಯತೆ ಹೆಚ್ಚು ಎನ್ನುವುದು ವೈದ್ಯರ ಒಮ್ಮತದ ಅಭಿಪ್ರಾಯವಾಗಿರುತ್ತದೆ. ದಿನವೊಂದರಲ್ಲಿ 200 mg ಗಿಂತ ಜಾಸ್ತಿ ವಿಟಮಿನ್ ‘ಸಿ’ ಔಷಧಿ ಸೇವಿಸಿದಲ್ಲಿ ತೊಂದರೆ ಉಂಟಾಗುವ ಸಾಧÀ್ಯತೆ ಹೆಚ್ಚು ಎಂದು ಅಧ್ಯಯನಗಳಿಂದ ತಿಳಿದುಬಂದಿದೆ. ಅದೇನೇ ಇರಲಿ ಕೋವಿಡ್-19 ಸಂಕಷ್ಟದ ದಿನಗಳಲ್ಲಿ ಹೆಚ್ಚು ಹೆಚ್ಚು ತಾಜಾ ಹಣ್ಣು ತರಕಾರಿ ಸೇವಿಸುವುದೇ ಉತ್ತಮ ಮತ್ತು ಅಗತ್ಯವಿದ್ದಲ್ಲಿ ನಿಮ್ಮ ಕುಟುಂಬ ವೈದ್ಯರ ಸಲಹೆ ಪಡೆದು ವಿಟಮಿನ್ ‘ಸಿ’ ಮಾತ್ರೆ ಸೇವಿಸಿ ಕೋವಿಡ್-19 ರೋಗದಿಂದ ರಕ್ಷಿಸಿಕೊಳ್ಳುವುದೇ ಜಾಣತನ ಮತ್ತು ಅದರಲ್ಲಿಯೇ ನಮ್ಮೆಲ್ಲರ ಹಾಗೂ ಸಮಾಜದ ಹಿತ ಅಡಗಿದೆ.
ಡಾ|| ಮುರಲೀ ಮೋಹನ್ ಚೂಂತಾರು
BDS,MDS,DNB,MBA,
MOSRCSEd,
Consultant oral and maxillofacial surgeon
www.surakshadental.com