ಸುಳ್ಯ ನಗರದಲ್ಲಿ ಚತುಷ್ಪಥ ರಸ್ತೆಗೆ ಡಿಪಿಆರ್ ತಯಾರಿಗೆ ಟೆಂಡರು ಪ್ರಕ್ರಿಯೆಯಲ್ಲಿದೆ : ಬೈಪಾಸ್ ರಸ್ತೆ ಅನುಮೋದನೆಗೊಂಡಿಲ್ಲ

0

ಸುಳ್ಯ ನಗರದಲ್ಲಿ ಬೈಪಾಸ್ ರಸ್ತೆಗೆ ಯಾವುದೇ ಅನುಮೋದನೆಗೊಂಡಿಲ್ಲ. ಆದರೆ ಚತುಷ್ಪಥ ರಸ್ತೆಗೆ ಡಿಪಿಆರ್ ತಯಾರಿಸಲು ಟೆಂಡರ್ ಪ್ರಕ್ರಿಯೆಲ್ಲಿದೆ ಎಂದು ಸಾಮಾಜಿಕ ಕಾರ್ಯಕರ್ತ ಡಿ.ಎಂ. ಶಾರೀಕ್ ರವರು ಮಾಹಿತಿ ಹಕ್ಕಿನಡಿ ಹಾಕಿರುವ ಅರ್ಜಿಗೆ ಮಂಗಳೂರು ರಾಷ್ಟ್ರೀಯ ಹೆದ್ದಾರಿ ಉಪ‌ವಿಭಾಗದ ಅಧಿಕಾರಿಗಳು ಉತ್ತರ ನೀಡಿದ್ದಾರೆ.

ಶಾರೀಕ್ ಡಿ.ಎಂ. ರವರು ಕರ್ನಾಟಕ ರಾಜ್ಯದ ರಾಷ್ಟ್ರೀಯ ಹೆದ್ದಾರಿ 275 (ಮೈಸೂರು ಮಾಣಿ ವಿಭಾಗ)ದ ಅಭಿವೃದ್ಧಿ ಬಗ್ಗೆ ಭೂಸ್ವಾಧೀನಗೊಳ್ಳಲಿರುವ ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯಲ್ಲಿ (ಪೈಚಾರಿನಿಂದ ಪರಿವಾರಕಾನ ತನಕ) ಇರುವ ಜಮೀನು ಮತ್ತು ಕಟ್ಟಡಗಳ ಮಾಲೀಕರ ಹೆಸರು ಮತ್ತು ಸರ್ವೆ ನಂಬ್ರ ಅಲ್ಲದೇ ಸ್ವಾಧಿನಪಡಿಸಲಾಗುವ ವಿಸ್ತೀರ್ಣದೊಂದಿಗೆ ವಿವರವಾದ ಮಾಹಿತಿ. ಸುಳ್ಯ ನಗರ ಪ್ರದೇಶದಲ್ಲಿ ಬೈಪಾಸ್ ಇದ್ದಲ್ಲಿ ಅದರ ಬಗ್ಗೆ ವಿವರವಾದ ದೃಢೀಕೃತ ಮಾಹಿತಿ. ಸದ್ರಿ ಕಾಮಗಾರಿ ಬಾಬು ಭೂಸ್ವಾಧೀನ ಪ್ರಕ್ರಿಯೆ ಬಗ್ಗೆ ಮತ್ತು ಪಾವತಿಸಲಾಗುವ ಪರಿಹಾರದ ಬಗ್ಗೆ ವಿವರವಾದ ಮಾಹಿತಿ. ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಭೂಸ್ವಾಧೀನಗೊಳ್ಳಿರುವ ಮತ್ತು ರಸ್ತೆಯ ಜಮೀನಿನ ನಕಾಶೆಯ ದೃಢೀಕೃತ ನಕಲು ಮತ್ತು ಟೆಂಡರ್‌ನ ದೃಢೀಕೃತ ನಕಲು ಹಾಗೂ ಕಾಮಗಾರಿ ಪ್ರಾರಂಭಗೊಳ್ಳುವ ದಿನಾಂಕದ ಬಗ್ಗೆ ವಿವರವನ್ನು ಬರೆದು ರಾಷ್ಟ್ರೀಯ ಹೆದ್ದಾರಿ‌ವಿಭಾಗದವರಲ್ಲಿ ಮಾಹಿತಿ ಕೇಳಿದ್ದರು.

ಇವರ ಪ್ರಶ್ನೆಗೆ 2025ರ ಜನವರಿ 21ರಂದು ಅಧಿಕಾರಿಗಳು ಲಿಖಿತ ಮಾಹಿತಿ ನೀಡಿದ್ದು, ಸುಳ್ಯ ತಾಲೂಕು ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ-275 ಮಾಣಿ- ಮೈಸೂರು-ಬೆಂಗಳೂರು ರಸ್ತೆಯ ಬೈಪಾಸ್ ರಸ್ತೆಗೆ ಯಾವುದೇ ಅನುಮೋದನೆ ಗೊಂಡಿರುವುದಿಲ್ಲ. ರಾಷ್ಟ್ರೀಯ ಹೆದ್ದಾರಿ-275 ಕಿ.ಮೀ 0.00(ಮಾಣಿ) ರಿಂದ ಕಿ.ಮೀ 71.60 (ಸಂಪಾಜೆ)ರ ವರೆಗೆ ನಾಲ್ಕು ಪಥದ ರಸ್ತೆಗೆ ಅಭಿವೃದ್ಧಿಪಡಿಸುವ ಕಾಮಗಾರಿಗೆ ವಿಸ್ಕೃತ ಯೋಜನೆ (DPR) ತಯಾರಿಸಲು ಟೆಂಡರು ಪ್ರಕ್ರಿಯೆಯಲ್ಲಿರುತ್ತದೆ. ಭೂಸ್ವಾಧೀನ ಪ್ರಕ್ರಿಯೆ ಇನ್ನೂ ಪ್ರಾರಂಭಗೊಂಡಿರುವುದಿಲ್ಲ ಎಂದು ತಿಳಿಸಿದ್ದಾರೆ.