ಜ್ಞಾನ ಗಂಗಾಸೆಂಟ್ರಲ್ ಸ್ಕೂಲ್, ಬೆಳ್ಳಾರೆಯಲ್ಲಿ ವಾರ್ಷಿಕ ಕ್ರೀಡೋತ್ಸವ ಜ.27 ರಂದು ವಿಜೃಂಭಣೆಯಿಂದ ಜರುಗಿತ್ತು. ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಯತೀಶ್(ಐಪಿಎಸ್) ಆಗಮಿಸಿದ್ದರು.ಮುಖ್ಯ ಅತಿಥಿಗಳನ್ನು ಕ್ರೀಡೋತ್ಸವ ಕಾರ್ಯಕ್ರಮಕ್ಕೆ ಶಾಲಾ ಬ್ಯಾಂಡ್ತಂಡವು ಸ್ವಾಗತಿಸುವ ಮೂಲಕ ಕರೆತರಲಾಯಿತು.
ನಂತರ ಮುಖ್ಯ ಅತಿಥಿಗಳು ಶಾಲಾ ಧ್ವಜವನ್ನು ಆರೋಹಣ ಮಾಡುವುದರ ಮೂಲಕ ವಿದ್ಯುಕ್ತವಾಗಿ ಕ್ರೀಡೋತ್ಸವಕ್ಕೆ ಚಾಲನೆ ನೀಡಿದರು. ಕ್ರೀಡೋತ್ಸವದಲ್ಲಿ ನಾಲ್ಕು ಶಾಲಾ ತಂಡಗಳ ನೇತೃತ್ವದಲ್ಲಿ ನಡೆದ ಪಥಸಂಚಲನ ಕಾರ್ಯಕ್ರಮವು ನೋಡುಗರ ಕಣ್ಮನ ಸೆಳೆಯಿತು. ಕಾರ್ಯಕ್ರಮದ ಆಕರ್ಷಣೆಯ ಬಿಂದುವಾದ ಕ್ರೀಡಾ ಜ್ಯೋತಿಯನ್ನು ರಾಜ್ಯ ಮಟ್ಟ, ಜಿಲ್ಲಾ ಮಟ್ಟದಲ್ಲಿವಿಜೇತರಾದ ಕ್ರೀಡಾಪಟುಗಳು ತಂದು ಕಾರ್ಯಕ್ರಮಕ್ಕೆ ಮೆರುಗು ನೀಡಿದರು.
ನಂತರ ಶಾಲಾ ಪ್ರಾಂಶುಪಾಲರಾದ ಕು. ದೇಚಮ್ಮಟಿ .ಎಂ. ಶಾಲಾ ವಾರ್ಷಿಕ ಕ್ರೀಡಾ ವರದಿಯನ್ನು ವಾಚಿಸುತ್ತಾ, ನಡೆದ ಕ್ರೀಡಾ ಚಟುವಟಿಕೆಗಳು ಹಾಗೂ ವಿಜೇತ ವಿದ್ಯಾರ್ಥಿಗಳನ್ನು ಪರಿಚಯಿಸಿದರು.
ಈ ಸಂದರ್ಭದಲ್ಲಿ ವಿಶೇಷವಾಗಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗುರುತಿಸುವುದಕ್ಕಾಗಿ ವೈಯಕ್ತಿಕ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಶಾಲಾ ತಂಡದ ವಿಶೇಷ ಬಹುಮಾನವನ್ನು “ಹೌಸ್ ಟ್ರೋಫಿ”ನೀಡುವುದರ ಮೂಲಕ ಪ್ರೋತ್ಸಾಹಿಸಲಾಯಿತು.
ನಂತರ ಮುಖ್ಯ ಅತಿಥಿಗಳಾದ ಯತೀಶ್.ಯನ್.(ಐಪಿಎಸ್) ಮಾತನಾಡಿ ಮಕ್ಕಳಿಗೆ ಕ್ರೀಡೆಯಲ್ಲಿ ಆಸಕ್ತಿ ಇರಬೇಕು ಅಂತಹ ವಿದ್ಯಾರ್ಥಿಗಳು ಮುಂದಿನ ಜೀವನದಲ್ಲಿ ಆತ್ಮಸ್ಥೈರ್ಯದಿಂದ ಬದುಕುತ್ತಾರೆ ಎಂದರು. ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ, ಪಾಲಕ ಪೋಷಕರು ಮಕ್ಕಳನ್ನು ಪುಸ್ತಕದ ಹುಳಗಳಾಗಿ ಮಾಡಬಾರದು. ಇಂದಿನ ತಾಂತ್ರಿಕ ಯುಗದಲ್ಲಿ ಬಹುಮುಖ ಕ್ಷೇತ್ರಗಳುತೆರೆದುಕೊಂಡಿದೆ. ಅವಕಾಶಗಳು ಸಾಕಷ್ಟು ಕ್ಷೇತ್ರಗಳಲ್ಲಿರುವಾಗ ಮಕ್ಕಳ ಆಸಕ್ತಿಗೆ ಅನುಗುಣವಾಗಿ ಕ್ಷೇತ್ರಗಳನ್ನು ಆಯ್ದುಕೊಳ್ಳಬೇಕು. ಹಿಂದೆಮನುಷ್ಯ ಮನುಷ್ಯರ ನಡುವೆ ಸ್ಪರ್ಧೆ ಏರ್ಪಡುತಿತ್ತು. ಇಂದು ಮನುಷ್ಯ ಹಾಗೂ ಆರ್ಟಿಫಿಷಿಯಲ್ ಇನ್ ಟೆಲಿಜೆನ್ಸಿ, ಮಿಷಿನ್ಲರ್ನಿಂಗ್ ಮುಂತಾದ ತಾಂತ್ರಿಕ ವ್ಯವಸ್ಥೆಯ ಮಧ್ಯೆ ಸ್ಪರ್ಧೆ ಏರ್ಪಡುತ್ತಿದೆ. ಆಗ ಮಕ್ಕಳು ಜಾಗ್ರತಾರಾಗಬೇಕು. ಈ ಶಾಲೆ ಆ ನಿಟ್ಟಿನಲ್ಲಿ ಗ್ರಾಮೀಣ ಮಟ್ಟದಲ್ಲಿದ್ದರೂ ವಿಕಸನ ಹೊಂದಿದೆಎಂಬಮೆಚ್ಚುಗೆಯ ಮಾತನಾಡಿದರು.
ನಂತರ ಪುಟಾಣಿ ಮಕ್ಕಳಿಂದ ಕ್ರೀಡಾಸಕ್ತಿಗೆ ಸಂಬಂಧಿಸಿದ ವಿವಿಧ ನೃತ್ಯ ಪ್ರದರ್ಶನ ಏರ್ಪಟ್ಟಿತು. ಅದಾದ ಬಳಿಕ ಶಾಲಾ ತಂಡಗಳು ನಡೆಸಿಕೊಟ್ಟ ಪಂಚಭೂತಗಳು ಹಾಗೂ ಯೋಗ ಡ್ಯಾನ್ಸ್ ಪ್ರೇಕ್ಷಕರನ್ನು ರಂಗಿಸಿದವು.
ವೇದಿಕೆಯಲ್ಲಿಎಕೊಲೇಡ್ ನಿರ್ದೇಶಕರಾದ ಕೃಷ್ಣಪ್ರಸಾದ್ ಅಡಪ, ಶಾಲಾ ಸಂಚಾಲಕರಾದ ಎಂ.ಪಿ.ಉಮೇಶ್, ಶ್ರೀಮತಿ ರಜನಿ ಉಮೇಶ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶಾಲಾ ಶಿಕ್ಷಕಿ ಶ್ರೀಮತಿ ಸುಜಾತ ಸ್ವಾಗತಿಸಿದರು. ಶಾಲಾ ಶಿಕ್ಷಕಿ ಶ್ರೀಮತಿ ವಾರಿಜಾಕ್ಷಿ ವಿಶೇಷ ಬಹುಮಾನದ ಪಟ್ಟಿಯನ್ನುವಾಚಿಸಿದರು. ಇನ್ನೋರ್ವ ಶಿಕ್ಷಕಿ, ಶ್ರೀಮತಿ ಪ್ರತಿಮಾ ಪಿ.ಏ. ಧನ್ಯವಾದ ಸಮರ್ಪಿಸಿ ಕಾರ್ಯಕ್ರಮವನ್ನು ಸಂಪನ್ನಗೊಳಿಸಿದರು.