ಕಾಡಿನಲ್ಲಿ ಸಿಗುವ ಐರೋಳ್ ಹಣ್ಣನ್ನು ಸೇವಿಸಬಹುದಾದ ಹಣ್ಣು ಎಂದು ಭಾವಿಸಿ ಮನೆಗೆ ತಂದು ತಿಂದ ತಂದೆ ಹಾಗೂ ಮಗಳಲ್ಲಿ ಮಗಳು ಸಾವನ್ನಪ್ಪಿ ಗುಣಮುಖರಾಗಿದ್ದ ತಂದೆ ಒಂದೂ ಕಾಲು ವರ್ಷಗಳ ಬಳಿಕ ಇಂದು ತಂದೆ ನಿಧನರಾದ ಘಟನೆ ಅಮರಪಡ್ನೂರು ಗ್ರಾಮದ ಕುಳ್ಳಾಜೆ ಎಂಬಲ್ಲಿ ನಡೆದಿದೆ.
2023ರ ಅಕ್ಟೋಬರ್ ನಲ್ಲಿ ಕುಳ್ಳಾಜೆ ಎಂಬಲ್ಲಿಯ ಮೂರು ಮಕ್ಕಳ ತಾಯಿ ಲೀಲಾವತಿ ಹಾಗೂ ಅವರ ತಂದೆ ಲೋಕಯ್ಯ ನಾಯ್ಕ ಐರೋಳ್ ಹಣ್ಣನ್ನು ತಿಂದರೆನ್ನಲಾಗಿದೆ. ಪರಿಣಾಮವಾಗಿ ತಂದೆ ಮಗಳಿಬ್ಬರೂ ಅಸ್ವಸ್ಥರಾದರು. ತಂದೆ ಲೋಕಯ್ಯ ನಾಯ್ಕ ಔಷಧ ಸೇವಿಸಿ ಗುಣಮುಖರಾದರು. ಆದರೆ ಮಗಳು ಲೀಲಾವತಿಗೆ ಔಷಧಿ ಸೇವಿಸಿದರೂ ಗುಣವಾಗಲಿಲ್ಲ. ಮೂರು ಮಕ್ಕಳ ತಾಯಿಯಾಗಿರುವ ಸುಮಾರು 35 ವರ್ಷ ಪ್ರಾಯದ ಲೀಲಾವತಿಯವರಿಗೆ ವಾಂತಿ, ಭೇದಿ ತೀವ್ರವಾದುದರಿಂದ ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಾದರು. ಆದರೆ ಅಸೌಖ್ಯ ತೀವ್ರಗೊಂಡು ಅ. 2ರಂದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕೊಂಡೊಯ್ಯುವಾಗ ಕೊನೆಯುಸಿರೆಳೆದರು.
ಲೀಲಾವತಿಯವರ ತಂದೆ ಲೋಕಯ್ಯ ನಾಯ್ಕ ಕುಳ್ಳಾಜೆಯವರು ಗುಣಮುಖರಾದರೂ ಹೊಟ್ಟೆಯಲ್ಲಿ ನೋವು, ಕಫ ಕಡಿಮೆಯಾಗಿರಲಿಲ್ಲವೆನ್ನಲಾಗಿದೆ. ಕೆಲವು ದಿನಗಳಿಂದ ಅಸೌಖ್ಯ ತೀವ್ರಗೊಂಡು ಮಲಗಿದ್ದಲ್ಲೇ ಇದ್ದರೆನ್ನಲಾಗಿದ್ದು, ಇಂದು ಮುಂಜಾನೆ ಸ್ವಗೃಹದಲ್ಲಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಇವರಿಗೆ ಅಂದಾಜು 60 ವರ್ಷ ವಯಸ್ಸಾಗಿತು.
ಮೃತರು ಪತ್ನಿ ಶ್ರೀಮತಿ ಸರೋಜ ಪುತ್ರ ಸುರೇಶ, ಸೊಸೆ, ಮೊಮ್ಮಕ್ಕಳು ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ. ಐರೋಳ್ ಕಾಯಿಯನ್ನು ತಿಂದಲ್ಲಿಂದಲೇ ಅವರ ಆರೋಗ್ಯ ಕ್ಷೀಣಿಸುತ್ತಾ ಬಂದಿದ್ದು, ಮಾರಕ ಕಾಯಿಲೆ ಟಿಬಿ ಯಿಂದಲೂ ಬಳಲುತ್ತಿದ್ದರೆಂದು ಮೃತರ ಪತ್ನಿ ಶ್ರೀಮತಿ ಸರೋಜ ತಿಳಿಸಿದ್ದಾರೆ.
ಘಟನೆಯ ವಿವರ:
ಲೋಕಯ್ಯ ನಾಯ್ಕರ ಮನೆಯ ಸ್ವಲ್ಪ ದೂರದಲ್ಲೆ ಮಗಳ ಮನೆ ಇದ್ದು, ತಂದೆ ಮಗಳ ಮನೆಗೆ ಹೋದಾಗ ಮಗಳ ಮನೆಯ ಪಕ್ಕದಲ್ಲೇ ಗಿಡದಲ್ಲಿ ಐರೋಳು ಹಣ್ಣು ಇತ್ತು. ಅದನ್ನು ಇಬ್ಬರೂ ಸೇವಿಸಿದ್ದರು. ಆ ಹೊತ್ತಲ್ಲಿ ಮಕ್ಕಳು ಶಾಲೆಗೆ ಹೋಗಿದ್ದುದರಿಂದ ಅವರು ಅದರ ಶರಬತ್ತು ಕುಡಿದಿರಲಿಲ್ಲ.
ಕಿತ್ತಳೆ ಬಣ್ಣದ ಈ ಐರೋಳು ಹಣ್ಣುಗಳು ಆಕರ್ಷಕವಾಗಿ ಗೊಂಚಲು ಗೊಂಚಲಾಗಿ ಬೆಳೆಯುತ್ತದೆ. ಭಾರೀ ಅಪಾಯಕಾರಿ. ನಮ್ಮ ಕಾಡುಗಳಲ್ಲಿ ಲಭ್ಯ ಇರುವ ಹಣ್ಣಿನ ಗೆಡ್ಡೆ, ಬೇರು, ಎಲೆಗಳನ್ನು ಕರಾವಳಿಯಲ್ಲಿ ಪಂಜುರ್ಲಿ ದೈವದ ಸಂದರ್ಭ ಕೊಡಿಯಡಿಯಲ್ಲಿ ಇರಿಸುವ ಕ್ರಮವಿದೆ. ಇದರ ಬೇರು, ಗಡ್ಡೆಯನ್ನು ಹಂದಿ ತಿನ್ನುವ ಕಾರಣಕ್ಕೇ ಏನೋ ಪಂಜುರ್ಲಿ ಆರಾಧನೆಯ ಸಂದರ್ಭದಲ್ಲಿ ಈ ಎಲೆಯನ್ನು ಸಮ್ಮುಖದಲ್ಲಿರುವ ದೈವಕ್ಕೆ ಒಪ್ಪಿಸುವ ಕ್ರಮವಿದೆ’ ಎಂದು ಕೃಷಿಕ, ಬರಹಗಾರ ನರೇಂದ್ರ ರೈ ದೇರ್ಲ ತಮ್ಮ ಫೇಸ್ಬುಕ್ ಪುಟದಲ್ಲಿ ಬರೆದಿದ್ದಾರೆ.