ಮಾರ್ಗಸೂಚಿ ಫಲಕ ಅಳವಡಿಸಿದ ಸುಳ್ಯ ಲಯನ್ಸ್ ಸದಸ್ಯರು







ಈಗ ಹಲವಾರು ಕಡೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಫ್ಲೈಓವರ್ ಗಳು, ಓವರ್ ಬ್ರಿಡ್ಜ್ ಗಳು ನಿರ್ಮಾಣವಾಗಿದ್ದು, ಪ್ರಯಾಣ ಸುಲಲಿತವಾಗಿದೆ. ಅತಿ ಶೀಘ್ರ ಪ್ರಯಾಣದ ಗುರಿ ತಲುಪಲು ಸಹಕಾರಿಯಾಗಿದೆ. ಆದರೆ ಜಂಕ್ಷನ್ ಗಳಲ್ಲಿ ಸೂಚನಾ ಫಲಕ ಇಲ್ಲದಿದ್ದರೆ ಪ್ರಯಾಣಿಕರು ಎಲ್ಲೆಲ್ಲಿಗೋ ಹೋಗಿ ಮತ್ತೆ ತಿರುಗಿ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಅಂತಹುದೇ ಪರಿಸ್ಥಿತಿ ಮಾಣಿಯಲ್ಲಿ ಜನರು ಎದುರಿಸುತ್ತಿದ್ದಾರೆ.
ಹಾಸನ – ಮಂಗಳೂರು ರಾಷ್ಡ್ರೀಯ ಹೆದ್ದಾರಿಯಲ್ಲಿರುವ ಮಾಣಿಯಲ್ಲಿ ಪುತ್ತೂರು, ಮಡಿಕೇರಿ ಕಡೆಗೆ ತಿರುಗುವ ಜಂಕ್ಷನ್ ಇದೆ. ಅಲ್ಲಿ ಓವರ್ ಬ್ರಿಡ್ಜ್ ನಿರ್ಮಾಣವಾಗಿದ್ದು, ಅಲ್ಲಿ ಪುತ್ತೂರು, ಮಡಿಕೇರಿ ಕಡೆಗೆ ಹೋಗುವವರಿಗೆ ಗೊತ್ತಾಗುವಂತೆ ಸರಿಯಾದ ಮಾರ್ಗಸೂಚಿ ಹಾಕದಿರುವುದರಿಂದ , ಮಂಗಳೂರು ಕಡೆಯಿಂದ ಬರುವ ವಾಹನದವರು ಜಂಕ್ಷನ್ ಗೊತ್ತಾಗದೆ ಮಾಣಿ ಜಂಕ್ಷನ್ ದಾಟಿ ಉಪ್ಪಿನಂಗಡಿ ರಸ್ತೆಯಲ್ಲಿ ಹತ್ತಾರು ಕಿ.ಮೀ. ಸಾಗಿದ ಬಳಿಕವೇ ದಾರಿ ತಪ್ಪಿರುವುದು ಗೊತ್ತಾಗಿ ವಾಪಸ್ ತಿರುಗಿ ಬರಬೇಕಾಗುತ್ತದೆ.
ಇದನ್ನು ಅನುಭವಿಸಿದ ಸುಳ್ಯ ಲಯನ್ಸ್ ಕ್ಲಬ್ಬಿನ ಹಿರಿಯ ಸದಸ್ಯರುಗಳಾದ ವಿನೋದ್ ಲಸ್ರಾದೋ ಮತ್ತು ಚಂದ್ರಶೇಖರ ನಂಜೆಯವರು ಮಾಣಿಯಲ್ಲಿ ಮಾರ್ಗಸೂಚಿ ಫಲಕ ಅಳವಡಿಸಲು ನಿರ್ಧರಿಸಿದರು. ಸುಳ್ಯದಲ್ಲಿರುವ ನಂಜೆಯವರ ಡಿಜಿಪ್ಲಸ್ ನಲ್ಲಿ ಪುತ್ತೂರು, ಮೈಸೂರು ಏರೋ ಮಾರ್ಕ್ ಬರೆದ ದೊಡ್ಡ ಫಲಕವೊಂದನ್ನು ಲಯನ್ಸ್ ಕ್ಲಬ್ ಸುಳ್ಯ ವತಿಯಿಂದ ಸಿದ್ಧಗೊಳಿಸಿ, ಅದನ್ನು ಅವರಿಬ್ಬರೂ ಸೇರಿ ಮಾಣಿಗೆ ಕೊಂಡೊಯ್ದು ಮಾಣಿಯಲ್ಲಿ ಓವರ್ ಬ್ರಿಡ್ಜ್ ಆರಂಭವಾಗುವಲ್ಲಿ ಜಂಕ್ಷನ್ ಕಡೆಗೆ ಹೋಗುವ ಸರ್ವಿಸ್ ರಸ್ತೆ ತಿರುಗುವಲ್ಲಿ ಅಳವಡಿಸಿದರು. ಈ ಕಾರ್ಯ ಪ್ರಯಾಣಿಕರ ಶ್ಲಾಘನೆಗೆ ಪಾತ್ರವಾಯಿತು.










