ಸುಳ್ಯದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

0

ಮುಂದಿನ‌ ವರ್ಷ ತಾಲೂಕು ಕ್ರೀಡಾಂಗಣದಲ್ಲೇ ಕನ್ನಡ ರಾಜ್ಯೋತ್ಸವ ಆಚರಣೆ : ಶಾಸಕಿ‌ ಭಾಗೀರಥಿ ಮುರುಳ್ಯ

ಡಾ.ಹರಪ್ರಸಾದ್ ತುದಿಯಡ್ಕರಿಗೆ ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

“ಮುಂದಿನ ವರ್ಷ ಸುಳ್ಯದ ತಾಲೂಕು ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ನಡೆಸಲಾಗುವುದು. ಅದರೊಳಗೆ ಕ್ರೀಡಾಂಗಣದ ಕೆಲಸ‌ ಪೂರ್ಣಗೊಳಿಸಿ, ಅದೇ ದಿನ ಉದ್ಘಾಟಿಸೋಣ. ಎಲ್ಲರೂ ಸೇರಿಕೊಂಡು ರಾಜ್ಯೋತ್ಸವ ಆಚರಿಸೋಣ” ಎಂದು ಶಾಸಕಿ‌ ಭಾಗೀರಥಿ ಮುರುಳ್ಯ ಹೇಳಿದರು.

ಸುಳ್ಯ ತಾಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ‌ ಆಶ್ರಯದಲ್ಲಿ ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು.
“ಕನ್ನಡ ನಮ್ಮೆಲ್ಲರ ಭಾಷೆ.‌ ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ” ಎಂದು ಶಾಸಕರು ಹೇಳಿದರು.

ತಹಶೀಲ್ದಾರ್ ಮಂಜುಳಾ ಧ್ವಜಾರೋಹಣಗೈದು, ಪಥ ಸಂಚಲನ ಗೌರವ ವಂದನೆ ಸ್ವೀಕರಿಸಿದರು. ಬಳಿಕ ಮಾತನಾಡಿದ ಅವರು, “ಕನ್ನಡ ಭಾಷೆ ಮಾತನಾಡಲು ಯಾರಿಗೂ ಕೀಳರಿಮೆ ಬೇಡ. ಕನ್ನಡ ಈ‌ನೆಲದ ಶ್ರೀಮಂತಿಕೆಯ ಭಾಷೆ. ನಮ್ಮ ಸಂಸ್ಕ್ರತಿ, ಪರಂಪರೆ ಉಳಿಸುವ ಕೆಲಸ ನಿರಂತರ ಆಗಲಿ” ಎಂದು‌ ಹೇಳಿದರು.

ಸುಳ್ಯ‌ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಎ. ನೀರಬಿದಿರೆ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ ಪೇರಾಲು, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ನಗರ ಪಂಚಾಯತ್ ಸದಸ್ಯರುಗಳಾದ ಎಂ.ವೆಂಕಪ್ಪ ಗೌಡ, ರಾಜು ಪಂಡಿತ್, ಶೀಲಾ ಕುರುಂಜಿ, ಸುಧಾಕರ ಕುರುಂಜಿಭಾಗ್, ಸುಶೀಲ ಜಿನ್ನಪ್ಪ, ನಾರಾಯಣ ಶಾಂತಿನಗರ, ಮುಖ್ಯಾಧಿಕಾರಿ ಬಸವರಾಜು, ಸರ್ಕಲ್ ಇನ್ ಸ್ಪೆಕ್ಟರ್ ತಿಮ್ಮಪ್ಪ ನಾಯ್ಕ್, ಸರಕಾರಿ ನೌಕರರ ಸಂಘದ ಅಧ್ಯಕ್ಷ ಡಾ.ನಿತಿನ್ ಪ್ರಭು, ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮೋಹನ್ ಗೌಡ ಬೊಮ್ಮೆಟ್ಟಿ, ಉಪಪ್ರಾಂಶುಪಾಲ ಪ್ರಕಾಶ ಮೂಡಿತ್ತಾಯ, ಕ್ಷೇತ್ರ ಶಿಕ್ಷಣಾಧಿಕಾರಿ ಶೀತಲ್ ಯು.ಕೆ. ವೇದಿಕೆಯಲ್ಲಿದ್ದರು.

ಪ್ರಶಸ್ತಿ ಪ್ರದಾನ : ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ.ಹರಪ್ರಸಾದ್ ತುದಿಯಡ್ಕರಿಗೆ ಸುಳ್ಯ ತಾಲೂಕು ಕನ್ನಢ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
2024 ನೇ ಸಾಲಿನಲ್ಲಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕೆ.ಗೋಕುಲ್ ದಾಸ್ ರನ್ನು ಸನ್ಮಾನಿಸಲಾಯಿತು.

ಆಕರ್ಷಕ ಪಥ ಸಂಚಲನ : ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಪೋಲೀಸ್, ಗೃಹರಕ್ಷಕ ದಳ, ಎನ್.ಸಿ.ಸಿ., ಸ್ಕೌಟ್ – ಗೈಡ್ ಸೇರಿದಂತೆ ‌ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು.