ಶಾಂತಿನಗರದಲ್ಲಿ ಗುರುತಿಸಿರುವ ಜಾಗದ ಬಗ್ಗೆ ಮಾಹಿತಿ ಕೊಡಿ: ಅಧಿಕಾರಿಗಳಿಗೆ ಸೂಚನೆ
ಸುಳ್ಯ ನಗರ ಆಶ್ರಯ ಸಮಿತಿಯ ಪ್ರಥಮ ಸಭೆ ಸಮಿತಿಯ ಅಧ್ಯಕ್ಷರಾದ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರು ಕು.ಭಾಗೀರಥಿ ಮುರುಳ್ಯರವರ ಅಧ್ಯಕ್ಷತೆಯಲ್ಲಿ ನ.24 ರಂದು ಸುಳ್ಯ ನಗರ ಪಂಚಾಯತಿ ಸಭಾಂಗಣದಲ್ಲಿ ನಡೆಯಿತು.

ಪ್ರಥಮ ಸಭೆ ಆದ ಹಿನ್ನೆಲೆಯಲ್ಲಿ ಸರ್ಕಾರದಿಂದ ನೂತನವಾಗಿ ಆಯ್ಕೆಗೊಂಡಿರುವ ಆಶ್ರಯ ಸಮಿತಿಯ ನಾಮನಿರ್ದೇಶಕ ಸದಸ್ಯರುಗಳಿಗೆ ಹಾಗೂ ಅಧ್ಯಕ್ಷರಾದ ಶಾಸಕರಿಗೆ ಅಧಿಕಾರಿಗಳು ಶಾಲು ಹೊದಿಸಿ ಸಭೆಗೆ ಸ್ವಾಗತಿಸಿದರು.
ಬಳಿಕ ನಡೆದ ಚರ್ಚೆಯಲ್ಲಿ ಆಶ್ರಯ ಮನೆ ನೀಡಲು ಸುಳ್ಯದಲ್ಲಿ ಗುರುತಿಸಿರುವ ಜಾಗದ ಬಗ್ಗೆ ಅಧಿಕಾರಿಗಳಿಂದ ಶಾಸಕರು ಮಾಹಿತಿ ಪಡೆದುಕೊಂಡರು. ಶಾಂತಿನಗರದಲ್ಲಿ 1.80 ಎಕ್ಕರೆ ಜಾಗ ಗುರುತಿಸಿರುವ ಬಗ್ಗೆ ಮಾಹಿತಿ ಪಡೆದು ಶೀಘ್ರದಲ್ಲಿ ಕ್ರಮ ಕೈಗೊಳ್ಳುವ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
















ಸಭೆಯಲ್ಲಿ ಭಾಗವಹಿಸಿದ್ದ ಸಮಿತಿಯ ಸದಸ್ಯರಾದ ಮೊಹಮ್ಮದ್ ಮುಟ್ಟತ್ತೋಡಿ ಮಾತನಾಡಿ ‘ಕಳೆದ ಹಲವಾರು ವರ್ಷಗಳಿಂದ ಆಶ್ರಯ ಮನೆಗಾಗಿ ಪಂಚಾಯಿತಿಗೆ ಅರ್ಜಿ ನೀಡಿರುವ ನೂರಾರು ಫಲಾನುಭವಿಗಳಿಗೆ ಮನೆ ನೀಡುವ ಕಾರ್ಯ ಆಗಲಿಲ್ಲ. ಈ ಮೊದಲು ನಿವೇಶನ ನೀಡುವ ಸಂದರ್ಭದಲ್ಲಿ ಹೊರ ಊರುಗಳಿಂದ ಮತ್ತು ಹೊರ ರಾಜ್ಯಗಳಿಂದ ಬಂದಿರುವ ಕುಟುಂಬದವರಿಗೆ ನಿವೇಶನ ಜಾಗ ನೀಡುವ ಕಾರ್ಯ ನಡೆದಿದೆ. ಆದರೆ ಅವರಿಗೆ ಕೊಡುವುದು ಬೇಡ ಎಂದು ನಾವು ಹೇಳುವುದಿಲ್ಲ ಆದರೆ ಕೊಡುವಾಗ ಸುಳ್ಯದ ಸ್ಥಳೀಯ ಫಲಾನುಭವಿಗಳಿಗೆ ಆದ್ಯತೆ ನೀಡಿ ಎಂದು ಸಭೆಗೆ ತಮ್ಮ ಸಲಹೆಯನ್ನು ನೀಡಿದರು.
ಬಳಿಕ ಸಭೆಯಲ್ಲಿ ಈಗಾಗಲೇ ಮನೆ ನಿವೇಶನಕ್ಕೆ ಅರ್ಜಿ ನೀಡಿದವರ ಸಂಪೂರ್ಣ ಮಾಹಿತಿ ಮತ್ತು ಬಂದಿರುವ ಅರ್ಜಿಗಳ ಬಗ್ಗೆ ಪೂರ್ಣ ಮಾಹಿತಿ ನೀಡುವಂತೆ ಶಾಸಕರು ಅಧಿಕಾರಿಗಳಲ್ಲಿ ಹೇಳಿದರು.
ಸಭೆಯಲ್ಲಿ ನಗರ ಪಂಚಾಯತ್ ಕಚೇರಿಗೆ ಇಂಜಿನಿಯರ್ ಪರ್ಮನೆಂಟ್ ಇಲ್ಲದೆ ಇರುವ ಬಗ್ಗೆ ಪ್ರಸ್ತಾಪಿಸಿದ ಸದಸ್ಯರಾದ ಮಹಮ್ಮದ್ ಮೊಟ್ಟೆತೋಡಿರವರು ನಗರದಲ್ಲಿ ನಿವೇಶನ ಜಾಗ ಗುರುತಿಸಲು ಮತ್ತು ಇನ್ನಿತರ ಕೆಲಸ ಕಾರ್ಯಗಳಿಗೆ ಇದು ಸಮಸ್ಯೆ ಆಗುತ್ತಿದೆ ಎಂದು ಸಮಸ್ಯೆಯ ಬಗ್ಗೆ ಶಾಸಕರ ಗಮನಕ್ಕೆ ತಂದರು.
ಸಭೆಯಲ್ಲಿ ಸದಸ್ಯರಾದ ಮಾಧವ ಜಟ್ಟಿಪಳ್ಳ ಉಪಸ್ಥಿತರಿದ್ದರು.
ಸುಳ್ಯ ತಹಶೀಲ್ದಾರ್ ಶ್ರೀಮತಿ ಮಂಜುಳಾ, ನಗರ ಪಂಚಾಯತ್ ಮುಖ್ಯ ಅಧಿಕಾರಿ ಬಸವರಾಜ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಪಂಚಾಯತಿ ಸಿಬ್ಬಂದಿಗಳು ಸಹಕರಿಸಿದರು.










