ಮತ್ತೊಂದು ತಂಡದಿಂದ ಪೊಲೀಸ್ ಠಾಣೆಗೆ ದೂರು, ಎಫ್‌ಐಆರ್ ದಾಖಲು

ನ. ೨೪ ರಂದು ಸುಳ್ಯದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕ್ರೀಡಾಕೂಟದ ಸಂದರ್ಭದಲ್ಲಿ ಆಟದ ವಿಷಯಕ್ಕೆ ಸಂಬಂಧಿಸಿ ನಡೆದ ಎರಡು ತಂಡದ ವಿದ್ಯಾರ್ಥಿಗಳ ಹೊಡೆದಾಟದ ಘಟನೆಗೆ ಸಂಬಂಧಿಸಿದಂತೆ ಒಂದು ತಂಡದಿಂದ ಸುಳ್ಯ ಠಾಣೆಗೆ ದೂರು ಹೋಗಿ ಪ್ರಕರಣ ದಾಖಲಾಗಿತ್ತು.
ಇದೀಗ ಮತ್ತೊಂದು ತಂಡದಿಂದಲೂ ಪೊಲೀಸ್ ಠಾಣೆಗೆ ದೂರು ಹೋಗಿ ಇದೀಗ ಇತ್ತಂಡದ ಮೇಲೂ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ತೇಜಸ್ ಪಿ ಕೆ ಎಂ ಬಿ ಎ ಅಂತಿಮ ವರ್ಷದ ವಿದ್ಯಾರ್ಥಿ ಠಾಣೆಗೆ ದೂರು ನೀಡಿದ್ದು ಆರೋಪಿತರುಗಳಾದ ಹರ್ಷ, ಅಭಿಷೇಕ್, ಮನೋಜ್, ಅದಿತ್ಯ,ಸುಹಾಸ್, ಅರ್ಜುನ್, ಗಿರೀಶ್, ಸಿದ್ದರಾಮ್, ಚೇತನ್ ಬಲೇರ್, ಗೌರವ್ ಎಂಬುವವರ ಮೇಲೆ ದೂರು ನೀಡಿದ್ದಾರೆ.















ಅವರು ನೀಡಿರುವ ದೂರಿನಲ್ಲಿ ‘ನಾನು ಕಾಲೇಜಿನಲ್ಲಿ ಅಂತಿಮ ವರ್ಷದ ಎಮ್ ಬಿ ಎ ವ್ಯಾಸಂಗ ಮಾಡಿಕೊಂಡಿದ್ದು ನ.೨೪ ರಂದು ಕಾಲೇಜಿನ ಕ್ಯಾಂಪಸ್ ನಲ್ಲಿ ವಾರ್ಷಿಕ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದು, ಸಂಜೆ ಸಮಯ ೧೭.೩೦ ಗಂಟೆಗೆ ಕ್ಯಾಂಪಸ್ ನಲ್ಲಿ ಇಂಜಿನಿಯರಿಂಗ್ ವಿಭಾಗ ಮತ್ತು ಎಂ.ಬಿ.ಎ ವಿಭಾಗದ ನಡುವೆ ಹಗ್ಗ ಜಗ್ಗಾಟದ ಆಟ ಪ್ರಾರಂಭವಾಗಿದ್ದು, ಆ ಸಮಯ ಕಾಲೇಜಿನ ವಿದ್ಯಾರ್ಥಿಗಳಾದ ಹರ್ಷ, ಅಭಿಷೇಕ್,ಮನೋಜ್, ಆದಿತ್ಯ ಎಮ್ ಬಿ ಎ ವಿಭಾಗದ ತಂಡದ ಬಗ್ಗೆ ಆಕ್ಷೇಪಣೆ ತಿಳಿಸಿದ್ದು ಹರ್ಷರವರು ಪಿರ್ಯಾದಿದಾರರನ್ನು ಉದ್ದೇಶಿಸಿ ನಿಮ್ಮನ್ನು ಯಾರು ಇಲ್ಲಿಗೆ ಕರೆಯಿಸಿದ್ದು, ನಿಮಗೆ ಆಟ ಆಡಲು ಆಗುವುದಿಲ್ಲ, ನೀವು ಪಾಸ್ ಔಟ್ ಆದ ವಿದ್ಯಾರ್ಥಿಗಳು ಎಂದೆಲ್ಲಾ ಹೇಳುತ್ತಾ ನೀವು ಇಲ್ಲಿಂದ ನಡೆಯಿರಿ ಎಂದು ಅವಾಚ್ಯ ಶಬ್ದಗಳಿಂದ ಬೈದು ದೂಡಿ ಹಾಕಿದ್ದು ಎಡ ಕೈಗೆ ಗಾಯವಾಗಿರುತ್ತದೆ.
ಹರ್ಷ ಎಂಬುವವರು ಕೈ ಯಿಂದ ಸಂಜಯ್ ರೈ ರವರ ತಲೆಗೆ ಮತ್ತು ಹಣೆಗೆ ಹಲ್ಲೆ ಮಾಡಿದ್ದು , ಸುಹಾಸ್ ಎಂಬುವವರು ಯಕ್ಷೀತ್ ಎಂಬುವವರಿಗೆ ಕಾಲಿನಿಂದ ಒದ್ದು ದೂಡಿ ಹಾಕಿ ತುಟಿ ಮತ್ತು ಬೆನ್ನಿಗೆ ಗಾಯಮಾಡಿರುತ್ತಾರೆ. ಆದಿತ್ಯ ಎಂಬುವವರು ಬಿಪಿನ್ ರವರ ಹಣೆಗೆ ಹೊಡೆದಿದ್ದು, ತಂಡದ ಸದಸ್ಯರಿಗೆ ನೀವು ಇನ್ನು ಮುಂದೆ ನಮ್ಮ ತಂಟೆಗೆ ಬಂದರೆ ನಿಮಗೆಲ್ಲರಿಗೂ ಗತಿ ಕಾಣಿಸುವುದಾಗಿ ಹೇಳಿ ಜೀವ ಬೆದರಿಕೆಯೊಡ್ಡಿದ್ದಾರೆ. ಆರೋಪಿತರು ನಮ್ಮ ತಂಡದ ಸದಸ್ಯರಿಗೆ ಜೀವ ಭಯವಿದ್ದು ಆರೋಪಿಗಳು ಪುನಹ ನಮಗೆ ಹಲ್ಲೆ ಮಾಡುವ ಸಾದ್ಯತೆ ಇರುವುದರಿಂದ ಭಯಗೊಂಡು ಈಗ ತಡವಾಗಿ ಪಿರ್ಯಾಧಿ ನೀಡುತ್ತಿರುವುದಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಬಗ್ಗೆ ದೂರು ಸ್ವೀಕರಿಸಿರುವ ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವುದಾಗಿ ತಿಳಿದು ಬಂದಿದೆ.









