ಕಳಂಜ ಗ್ರಾಮದ ಕೋಟೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವ ಸಂಪನ್ನ

0

ಸುಳ್ಯ; ಸುಮಾರು 800ಕ್ಕೂ ಅಧಿಕ ವರ್ಷಗಳ ಇತಿಹಾಸವನ್ನು ಹೊಂದಿರುವ ಕಳಂಜ ಗ್ರಾಮದ ಕೋಟೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವವು ಬ್ರಹ್ಮಶ್ರೀ ಕೆ.ಯು. ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನ.25ರಿಂದ 29ರವರೆಗೆ ಸಂಭ್ರಮ ಸಡಗರದಿಂದ ನಡೆಯಿತು. ಊರ ಪರವೂರ ಭಕ್ತಾದಿಗಳು ಸಂಭ್ರಮ ಸಡಗರದಿಂದ ಪಾಲ್ಗೊಂಡು ಕೃತಾರ್ಥರಾದರು.

ನ.25ರ ಮಂಗಳವಾರ ಕಾಂಚೋಡು ಶ್ರೀ ಮಂಜುನಾಥೇಶ್ವರ ಸನ್ನಿಧಿಯಿಂದ ಹೊರೆಕಾಣಿಕೆ ಸ್ವೀಕಾರ ನಡೆಯಿತು, ರಾತ್ರಿ ಗಂಟೆ 7ರಿಂದ ವಾಸ್ತು ರಕ್ಷೋಘ್ನಾದಿ ಶುದ್ಧಿ ಕಾರ್ಯ ನಡೆದು ಮಹಾಪೂಜೆ ನೆರವೇರಿತು. ನ.26ರ ಬುಧವಾರದಂದು ಷಷ್ಠಿ ಮಹೋತ್ಸವದ ಅಂಗವಾಗಿ ಬೆಳಗ್ಗೆ 7ರಿಂದ ಗಣಪತಿ ಹವನ, ಚಂಡಿಕಾ ಹವನ, ನವಕ ಕಲಶ, ರುದ್ರಾಭಿಷೇಕ, ಪಲ್ಲಪೂಜೆ, ಕಲಶಾಭಿಷೇಕದ ಬಳಿಕ ಮಹಾಪೂಜೆ ನಡೆಯಿತು. ಬಳಿಕ ಅನ್ನಸಂತರ್ಪಣೆ ನೆರವೇರಿತು. ಸಂಜೆ 6ರಿಂದ ನೇರಳತ್ತಾಯ ದೈವದ ಭಂಡಾರ ತೆಗೆದು ಮಹಾಪೂಜೆಯ ಬಳಿಕ ದೇವರ ಬಲಿ ಉತ್ಸವ ನೆರವೇರಿತು. ಪ್ರಸಾದ ವಿತರಣೆಯ ಬಳಿಕ ಶ್ರೀ ನೇರಳತ್ತಾಯ ದೈವದ ನೇಮೋತ್ಸವ, ಜೊತೆಗೆ ಪುರುಷದೈವ ಮತ್ತು ನೇರಳತ್ತಾಯ ಬಂಟ ಪಂಜುರ್ಲಿ ದೈವಗಳ ನೇಮೋತ್ಸವ ನೆರವೇರಿತು.

ನ.27 ಗುರುವಾರದಂದು ಬೆಳಗ್ಗೆ ಶ್ರೀದೇವರಿಗೆ ಏಕಾದಶ ರುದ್ರಾಭಿಷೇಕ, ರಕ್ತೇಶ್ವರಿ ತಂಬಿಲ ನಡೆದು ರಕ್ತೇಶ್ವರಿ ದೈವದ ಭಂಡಾರ ತೆಗೆಯುವ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನೆರವೇರಿತು. ಕಚ್ಚೆಭಟ್ಟ ದೈವದ ಕೋಲ ನಡೆದು ರಾತ್ರಿ 8ರಿಂದ ಮಹಾಪೂಜೆ, ರಂಗಪೂಜೆಯ ಬಳಿಕ ರಾತ್ರಿ 10ರಿಂದ ಶ್ರೀ ರಕ್ತೇಶ್ವರೀ ದೈವದ ನೇಮೋತ್ಸವ ನಡೆಯಿತು. ಬಳಿಕ ಪೊಟ್ಟಭೂತದ ಕೋಲ ಸೇವೆ, ಬಳಿಕ ರಕ್ತೇಶ್ವರೀ ಬಂಟ ಪಂಜುರ್ಲಿ ದೈವದ ನೇಮೋತ್ಸವ ಸಂಪನ್ನಗೊಂಡಿತು.

ನ.28ರಂದು ಶುಕ್ರವಾರ ಸಂಜೆ 6.30ರಿಂದ ಸಪರಿವಾರ ಉಳ್ಳಾಕುಲು ದೈವದ ಭಂಡಾರ ತೆಗೆದು ರಾತ್ರಿ 7.30ರಿಂದ ಸೇವಾರಂಗಪೂಜೆ, ಮಹಾಪೂಜೆ ನಡೆಯಿತು. ರಾತ್ರಿ 10ರಿಂದ ಉಳ್ಳಾಕುಲು ದೈವಗಳು, ಮದಿಮಾಲ್ ಮದಿಮಾಯೆ, ಬಂಟ ಬೇಡವ ದೈವಗಳ ನೇಮೋತ್ಸವ ನಡೆಯಿತು. ನ.29ರ ಶನಿವಾರ ಬೆಳಗ್ಗೆ 8.30ರಿಂದ ಚಾಮುಂಡಿ ಪರಿವಾರ ದೈವಗಳ ನೇಮೋತ್ಸವ ನಡೆದು ಗಣಗಳ ನೇಮ ನೆರವೇರಿತು. ಮಧ್ಯಾಹ್ನ 12ಕ್ಕೆ ಶ್ರೀ ಸನ್ನಿಧಿಯಲ್ಲಿ ಮಹಾಪೂಜೆ ನಡೆದು ಪ್ರಸಾದ ಭೋಜನ ವಿತರಣೆಯಾಯಿತು. ಈ ಮೂಲಕ ನಾಲ್ಕು ದಿನಗಳ ಕಾಲ ನಡೆದ ಧಾರ್ಮಿಕ ಕಾರ್ಯಕ್ರಮಗಳಿಗೆ ತೆರೆಬಿತ್ತು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನ.26ರಂದು ಬೆಳಗ್ಗೆ ಸುಮ ವಿ. ಆಚಾರ್ ಮತ್ತು ಬಳಗದವರಿಂದ ಭಕ್ತಿ ರಸಮಂಜರಿ, ಸಂಜೆ 6ರಿಂದ ನಿನಾದ ಸಾಂಸ್ಜೃತಿಕ ಕೇಂದ್ರ ತಂಟೆಪ್ಪಾಡಿ ಇವರಿಂದ ನಿನಾದ ಸಂಗೀತ ಸಂಜೆ ಕಾರ್ಯಕ್ರಮ ನಡೆಯಿತು. ನ.27ರಂದು ಸಂಜೆ 6ರಿಂದ ವಿದುಷಿ ಶ್ರೀಮತಿ ಪ್ರಣತಿ ಚೈತನ್ಯ ಪದ್ಯಾಣ ನೇತೃತ್ವದಲ್ಲಿ ಪದಯಾನ ತಂಡದವರಿಂದ ನೃತ್ಯಾಂಜಲಿ ಕಾರ್ಯಕ್ರಮ ನಡೆಯಿತು. ನ.28ರಂದು ಸಂಜೆ 6ರಿಂದ ಡ್ಯಾನ್ಸ್ & ಬೀಟ್ಸ್ ನೇತೃತ್ವದ `ಮುದ್ರಾರಂಗ’ ಮಕ್ಕಳ ರಂಗ ನಾಟಕ ತಂಡದಿಂದ ಗೊಂಬೆರಾವಣ ನಾಟಕ ನಡೆಯಿತು. ಬಳಿಕ ಶರವಣಭವ ಸಿಂಗಾರಿ ಮೇಳ ಇವರಿಂದ ಚೆಂಡೆ ವೈಭವ ಜರುಗಿತು.
ಕ್ಷೇತ್ರದ ಆಡಳಿತ ಧರ್ಮದರ್ಶಿ ಕೆದ್ಲ ನರಸಿಂಹ ಭಟ್ಟ, ಧರ್ಮದರ್ಶಿ ಮತ್ತು ಗೌರವ ಪ್ರಧಾನ ಅರ್ಚಕರಾದ ವಾರಣಾಶಿ ಗೋಪಾಲಕೃಷ್ಣ, ಧರ್ಮದರ್ಶಿ ಸೀತಾರಾಮ ಕೋಟೆ, ಅರ್ಚಕ ಪವನ್ ಕುಮಾರ್, ದೇವಳದ ಅಭಿವೃದ್ಧಿ ಸಮಿತಿ ಸದಸ್ಯರು ಸಹಿತ ಊರ ಭಕ್ತಾದಿಗಳು ಸಂಭ್ರಮ ಸಡಗರದಿಂದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.