ಸಾವಿನ ಕುರಿತು ಸರಕಾರ ಸಮಗ್ರ ತನಿಖೆ ನಡೆಸಲಿ : ವೈದ್ಯಾಧಿಕಾರಿಗಳ ಮನವಿ
ಶಿವಮೊಗ್ಗದ ತಾವರೆಕೊಪ್ಪ ಮೃಗಾಲಯದಲ್ಲಿ ಪಶು ವೈದ್ಯಾಧಿಕಾರಿ ಡಾ.ಸಮೀಕ್ಷಾ ರೆಡ್ಡಿಯವರ ಮೇಲೆ ಮಾ.20ರಂದು ರಾತ್ರಿ ನೀರಾನೆಯೊಂದು ಧಾಳಿ ನಡೆಸಿ, ಗಂಭೀರ ಗಾಯಗೊಂಡ ಅವರು ಸಾವಿಗೀಡಾಗಿದ್ದು ಈ ಕುರಿತು ಸರಕಾರ ಸಮಗ್ರ ತನಿಖೆ ನಡೆಸಬೇಕೆಂದು ಪಶು ವೈದ್ಯಾಧಿಕಾರಿಗಳು ಒತ್ತಾಯಿಸಿದ್ದಾರೆ.














ಸುಳ್ಯ ಪಶು ಸಂಗೋಪನಾ ಇಲಖೆಯಲ್ಲಿ ಸೇರಿದ ಪಶುವೈದ್ಯಾಧಿಕಾರಿಗಳು ಡಾ.ಸಮೀಕ್ಷಾ ರೆಡ್ಡಿ ಅಗಲಿಕೆಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಸಭೆಯಲ್ಲಿ ಮಾತನಾಡಿದ ಕೊಯಿಲ ಜಾನುವಾರು ತಳಿ ಸಂವರ್ಧನಾ ಕೇಂದ್ರದ ಉಪನಿರ್ದೇಶಕ ಡಾ.ಚಿದಾನಂದರು ಮಾತನಾಡಿ, “ಪಶುವೈದ್ಯ ವೃತ್ತಿ ಯುವ ಪಶುವೈದ್ಯೆಯನ್ನು ಕಳೆದುಕೊಂಡಿದೆ. ಡಾ.ಸಮೀಕ್ಷಾ ರೆಡ್ಡಿ ಮಂಗಳೂರಿನಲ್ಲಿಯೂ ಕೆಲ ಕಾಲ ಸೇವೆ ಸಲ್ಲಿಸಿದ್ದರು. ಅವರ ಸಾವಿನ ಕುರಿತು ಸಂಶಯವಿದೆ. ಈ ಬಗ್ಗೆ ತನಿಖೆ ನಡೆದು ಸತ್ಯಾಸತ್ಯತೆ ಬೆಳಕು ಚೆಲ್ಲುವ ಕೆಲಸ ಸರಕಾರ ಮಾಡಬೇಕು” ಎಂದು ಹೇಳಿದರು.
ಸುಳ್ಯ ಪಶು ಇಲಾಖೆಯ ಮುಖ್ಯ ಪಶು ವೈದ್ಯಾಧಿಕಾರಿ ಡಾ.ನಿತಿನ್ ಪ್ರಭು ಮಾತನಾಡಿ, “ಯುವ ವೈದ್ಯೆಯನ್ನು ಕಳೆದುಕೊಂಡಿದ್ದೇವೆ. ಅವರ ಸಾವಿಗೆ ಕಾರಣ ತಿಳಿಯಬೇಕಾಗಿದ್ದು ಸಮಗ್ರ ತನಿಖೆ ಆಗಬೇಕು. ಈ ನಿಟ್ಟಿನಲ್ಲಿ ನಾವು ಇಂದು ಕೈಗೆ ಕಪ್ಪು ಪಟ್ಟಿ ಧರಿಸಿ ಶಾಂತಿಯುತ ಮುಷ್ಕರ ನಡೆಸುತಿದ್ದೇವೆ” ಎಂದು ಹೇಳಿದರು.
ಕಡಬದ ಪಶು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಅಜಿತ್, ಕಳಂಜ ಪಶು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಮೇಘಶ್ರೀ, ಕೊಯಿಲ ಹಂದಿ ತಳಿ ಸಂವರ್ದನಾ ಕೇಂದ್ರದ ವೈದ್ಯಾಧಿಕಾರಿ ಡಾ. ಪುನೀತ್, ಗುತ್ತಿಗಾರು ಪಶು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವೆಂಕಟಾಚಲಪತಿ ಹಾಗೂಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.







