ತೊಡಿಕಾನ: ತೋಟದಲ್ಲಿ ಅಕ್ರಮ ಮರಳು ದಾಸ್ತಾನು ಆರೋಪ: ಸುಳ್ಯ ಪೊಲೀಸರಿಂದ ದಿಢೀರ್ ದಾಳಿ

0

1.20 ಲಕ್ಷ ರೂಪಾಯಿ ಅಂದಾಜು ಮೌಲ್ಯದ ಮರಳು ವಶ, ಪ್ರಕರಣ ದಾಖಲು

ಸುಳ್ಯ ತಾ. ತೊಡಿಕಾನ ಗ್ರಾಮದ ಶೆಟ್ಟಿಯಡ್ಕ ಎಂಬಲ್ಲಿ ತೋಟದಲ್ಲಿ ಅಕ್ರಮವಾಗಿ ಮರಳು ದಾಸ್ತಾನು ಮಾಡಿದ್ದ ಬಗ್ಗೆ ಮಾಹಿತಿ ತಿಳಿದ ಸುಳ್ಯ ಪೊಲೀಸರು ದಿಢೀರ್ ದಾಳಿ ನಡೆಸಿ ಸುಮಾರು 1.20 ಲಕ್ಷ ರೂಪಾಯಿಗಳ ಮರಳನ್ನು ವಸಪಡಿಸಿಕೊಂಡು ಆರೋಪಿಗಳ ಮೇಲೆ ಪ್ರಕರಣ ದಾಖಲಿಸಿಕೊಂಡ ಘಟನೆ ಮೇ.೮ರಂದು ನಡೆದಿದೆ. ಮನು ಹಾಗೂ ಚೆಂಬು ಗ್ರಾಮದ ಆ್ಯಂಟನಿ ಎಂಬವರ ಮೇಲೆ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೇ.8 ರಂದು ಮಧ್ಯಾಹ್ನ ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕರಾದ ಸಂತೋಷ್ ಬಿ.ಪಿ. ರವರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದ್ದು, ಕಾನೂನು ಬಾಹಿರವಾಗಿ ಪಯಸ್ವಿನಿ ನದಿಯಿಂದ ಮರಳನ್ನು ಕದ್ದು ಸಂಗ್ರಹ ಮಾಡಿಟ್ಟುಕೊಂಡು ಮಾರಾಟ ಮಾಡಿಕೊಂಡಿರುವುದಾಗಿ ಪೊಲೀಸರಿಗೆ ಮಾಹಿತಿ ಬಂದಿರುವುದಾಗಿ ತಿಳಿದು ಬಂದಿದೆ.

ಮಾಹಿತಿ ಆಧಾರದ ಮೇಲೆ ಪ್ರಕರಣವನ್ನು ಪತ್ತೆ ಮಾಡುವ ಉದ್ದೇಶದಿಂದ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಆರೋಪಿತರು ವಿಶಾಲವಾದ ಜಾಗದಲ್ಲಿ ಮರಳನ್ನು ಸಂಗ್ರಹ ಮಾಡಿಟ್ಟುಕೊಂಡು ಮಾರಾಟ ಮಾಡಿರುವುದು ಕಂಡು ಬಂದಿರುತ್ತದೆ ಮತ್ತು ಸ್ಥಳದಲ್ಲಿ ಸುಮಾರು 50-60 ಮೆಟ್ರಿಕ್ ಟನ್ ತೂಕದ ಸುಮಾರು 20 ಟಿಪ್ಪರ್ ಲೋಡ್ ಮರಳು ಸಂಗ್ರಹವಾಗಿರುವುದು ಕಂಡು ಬಂದಿರುತ್ತದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಪರವಾನಿಗೆ ಇಲ್ಲದೇ ಆರೋಪಿಗಳು ಟಿಪ್ಪರ್ ಲಾರಿ ಹಾಗೂ ಹಿಟಾಚಿಯನ್ನು ಉಪಯೋಗಿಸಿಕೊಂಡು ಮರಳನ್ನು ಕಳ್ಳತನದಿಂದ ಪಯಸ್ವಿನಿ ನದಿಯಿಂದ ತನ್ನ ತೋಟಕ್ಕೆ ಟಿಪ್ಪರ್ ಲಾರಿಯಿಂದ ತಂದು ಸಂಗ್ರಹ ಮಾಡಿ ಬಳಿಕ ಹಿಟಾಚಿಯಿಂದ ಟಿಪ್ಪರ್ ಲಾರಿಗಳಿಗೆ ಲೋಡ್ ಮಾಡಿ ಮರಳನ್ನು ಮಾರಾಟ ಮಾಡಿರುವುದಾಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ವಶಪಡಿಸಿಕೊಂಡ ಮರಳಿನ ಅಂದಾಜು ಮೌಲ್ಯ 1.20 ಲಕ್ಷ ರೂಪಾಯಿ ಆಗಿರುತ್ತದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.