ಸುಳ್ಯ ತಾಲೂಕಿನ ಏಕೈಕ ಜೈನ ಬಸದಿ ಮರ್ಕಂಜದ ಬಲ್ನಾಡುಪೇಟೆ ಶ್ರೀ ಆದೀಶ್ವರ ಸ್ವಾಮಿ ಬಸದಿಯಲ್ಲಿ ಧಾಮ ಸಂಪ್ರೋಕ್ಷಣೆ, ಪುನರ್ ಪ್ರತಿಷ್ಠಾ ಮಹೋತ್ಸವ ಹಾಗೂ 12ನೇ ವಾರ್ಷಿಕೋತ್ಸವ

0

ಧಾರ್ಮಿಕ ಸಭಾ ಕಾರ್ಯಕ್ರಮ – ಸನ್ಮಾನ – ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ-ದೈವದ ಕೋಲ

ಸಂಘಟಿತರಾಗಿದ್ದರೆ ಮಾತ್ರ ಧರ್ಮದ ಉಳಿವು : ಸುಕುಮಾರ್ ಬಲ್ಲಾಳ್

ಬಲ್ನಾಡು ಮತ್ತು ಧರ್ಮಸ್ಥಳದ ಸಂಬಂಧ ಹಲವು ವರ್ಷಗಳದ್ದು : ಸುರೇಂದ್ರ ಕುಮಾರ್

ಏಕಸೂತ್ರದಿಂದ ಬಾಳಿ ಬದುಕಿ ಊರಿಗೆ ಮಾದರಿಯದವರು ಇಲ್ಲಿಯ ಜೈನ ಕುಟುಂಬದವರು : ಚಂದ್ರಶೇಖರ ಭಟ್ ತಳೂರು

ಮರ್ಕಂಜದ ಬಲ್ನಾಡುಪೇಟೆ ಭಗವಾನ್ 1008 ಶ್ರೀ ಆದೀಶ್ವರ ಸ್ವಾಮಿ ಬಸದಿಯ ಧಾಮ ಸಂಪ್ರೋಕ್ಷಣೆ, ಪುನರ್ ಪ್ರತಿಷ್ಠಾ ಮಹೋತ್ಸವ ಹಾಗೂ 12ನೇ ವಾರ್ಷಿಕೋತ್ಸವವು ಕಾರ್ಕಳದ ಶ್ರೀ ದಾನಶಾಲೆ ಜೈನಮಠದ ರಾಜಗುರು ಭಟ್ಟಾರಕ ಲಲಿತ ಕೀರ್ತಿ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಮೇ.10ರಿಂದ ಮೇ.12ರವರೆಗೆ ವಿಜೃಂಭಣೆಯಿಂದ ನಡೆಯಿತು.

ಮೇ.10ರಂದು ಬೆಳಿಗ್ಗೆ ಇಂದ್ರ ಪ್ರತಿಷ್ಠೆ, ತೋರಣ ಮುಹೂರ್ತ, ವಿಮಾನ ಶುದ್ಧಿ, ಮುಖವಸ್ತ ಉದ್ಘಾಟನೆ, ಮಧ್ಯಾಹ್ನ ಕ್ಷೇತ್ರಪಾಲ ಪ್ರತಿಷ್ಠೆ ಮತ್ತು ನಾಗ ಪ್ರತಿಷ್ಠೆ, ವಾಸ್ತುಪೂಜೆ ಮತ್ತು ನವಗ್ರಹ ಶಾಂತಿ, ಸಂಜೆ ಪದ್ಮಾವತಿ ಪ್ರತಿಷ್ಠೆ, ಲಕ್ಷ ಹೂವಿನ ಪೂಜೆ, ಕಲಶ ಅಭಿಷೇಕ, ಮಹಾಪೂಜೆ, ಗಂಧೋದಕ ವಿತರಣೆ ನೆಡಯಿತು.

ಮೇ.11ರಂದು ಬೆಳಿಗ್ಗೆ ಅಷ್ಟ ದಿಕ್ಷು ಧಾಮ ಸಂಪ್ರೋಕ್ಷಣೆ, ಚತುರ್ದಿಕ್ಷು ಹೋಮ, ಗಂಧಯಂತ್ರಾರಾಧನೆ ಪೂರ್ವಕ 10.35ರ ಮಿಥುನ ಲಗ್ನ ಸುಮುಹೂರ್ತದಲ್ಲಿ ಆದಿನಾಥ ಸ್ವಾಮಿ ಪ್ರತಿಷ್ಠೆ, ಮಧ್ಯಾಹ್ನ ಮುಖ ವಸ್ತ್ರ ಉದ್ಘಾಟನೆ, ಮಹಾಪೂಜೆ, ಮಧ್ಯಾಹ್ನ ಲಕ್ಷ ಹೂವಿನ ಪೂಜೆ, ಸಂಜೆ ಅಗ್ರೋದಕ ಮೆರವಣಿಗೆ ಮಹೋತ್ಸವ, 108 ಕಲಶಮಹಾಭಿಷೇಕ, ಮಂಗಳಾರತಿ ಪಾದಪೂಜೆ ನಡೆಯಿತು.

ಮೇ.12ರಂದು ಆದಿನಾಥ ಸ್ವಾಮಿ ಮತ್ತು ಪಾರ್ಶ್ವನಾಥ ಸ್ವಾಮಿಗೆ ಪಂಚಾಮೃತ ಅಭೀಷೇಕ, ಲಕ್ಷ ಹೂವಿನ ಪೂಜೆ, ತೋರಣ ವಿಸರ್ಜನೆ, ಕಂಕಣ ವಿಸರ್ಜನೆ ನಡೆಯಿತು. ರಾತ್ರಿ ಶ್ರೀ ದೈವಗಳ ನೆಮೋತ್ಸವ ನಡೆಯಿತು.

ಸಭಾ ಕಾರ್ಯಕ್ರಮ : ಮೇ.10ರಂದು ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷ ಪ್ರದೀಪ್ ಜೈನ್ ಬಲ್ನಾಡುಪೇಟೆ ವಹಿಸಿದ್ದರು.

ಪ್ರಧಾನ ಅತಿಥಿಯಾಗಿ ಭಾಗವಸಿದ್ದ ಭಾರತೀಯ ಜೈನ ಮಿಲನ್ ಇದರ ರಾಷ್ಟ್ರೀಯ ಅಧ್ಯಕ್ಷರಾದ ಡಿ. ಸುರೇಂದ್ರ ಕುಮಾರ್ ಧರ್ಮಸ್ಥಳ ಮಾತನಾಡಿ “ಬಲ್ನಾಡು ಮತ್ತು ಧರ್ಮಸ್ಥಳದ ಸಂಬಂಧ ಹಲವು ವರ್ಷಗಳದ್ದು. ನನ್ನ ಅಣ್ಣಾಜಿ ಖಾವಂದರು ಬಲ್ನಾಡು ಕುಟುಂಬದ ಬಗ್ಗೆ ತುಂಬಾ ಗೌರವ ಇಟ್ಟವರು. ನಿಮ್ಮ ಕೂಡು ಕುಟುಂಬ ಹೀಗೆ ಇರಲಿ. ಖಾವಂದರು ಮುಟ್ಟಿದ್ದೆಲ್ಲವೂ ಚಿನ್ನ ಆಗುತ್ತಿದೆ. ಈಗಾಗಲೇ 303 ದೇವಸ್ಥಾನಗಳನ್ನು ಅದೇ ರೀತಿ ಸುಮಾರು 33 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದೇವೆ. ಅದರಲ್ಲಿ 11 ಕೋಟಿ ಮಾತ್ರ ಸರಕಾರದ್ದು. ಉಳಿದ 22 ಕೋಟಿ ಧರ್ಮಸ್ಥಳದ್ದು. ಅದರಲ್ಲಿ 33 ಜೈನ ಬಸದಿಗಳು” ಎಂದರು.

ಉಪನ್ಯಾಸ ನೀಡಿದ ಮಂಗಳೂರಿನ ಸುಕುಮಾರ್ ಬಲ್ಲಾಳ್ ರವರು ಮಾತನಾಡಿ ದೇವಪೂಜೆ, ಗುರುಪಾಸ್ತಿ, ಸ್ವಧ್ಯಾಯ, ಸಂಯಮ, ತಪ, ದಾನ ಈ ಷಡ್ಕ್ರಿಯೆಗಳನ್ನು ಅಳವಡಿಸಿಕೊಂಡರೆ ನಾನೊಬ್ಬ ಜೈನ ಅನ್ನುವ ಅರ್ಹತೆ ಬರುತ್ತದೆ. ಜೈನ ಧರ್ಮವನ್ನು ಉಳಿಸಲು ಮಕ್ಕಳಿಂದಲೇ ಸಂಸ್ಕಾರ ಬೆಳೆಸಬೇಕು. ನಮ್ಮ ಧರ್ಮದ ಮೇಲೆ ಪ್ರೀತಿ ಇಟ್ಟು, ನಮ್ಮ ಆಚರಣೆಗಳನ್ನು ಬೆಳೆಸಬೇಕು. ಧರ್ಮ ಉಳಿಯಬೇಕಾದರೆ ನಾವು ಸಂಘಟಿತರಾಗಬೇಕು” ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಸುಳ್ಯ ತಾಲ್ಲೂಕು ಸಂಘ ಚಾಲಕ ಚಂದ್ರ ಶೇಖರ ಭಟ್ ತಳೂರು ಮಾತನಾಡಿ ” ಅವಿಭಕ್ತ ಕುಟುಂಬವಾಗಿ ಏಕಸೂತ್ರದಿಂದ ಬಾಳಿ ಬದುಕಿ ಊರಿನ ಗೌರವ ಸಂಪಾದನೆ ಮಾಡಿ ಊರಿಗೆ ಮಾದರಿಯಾಗಿದ್ದವರು ಇಲ್ಲಿಯ ಜೈನ ಕುಟುಂಬಸ್ಥರು. ಕಷ್ಟದ ಕಾಲದಲ್ಲಿ ಬೇಸಾಯ ಮಾಡಿ ಗೌರವ ಸಂಸ್ಕಾರದ ಬದುಕು ಕಟ್ಟಿಕೊಂಡವರು” ಎಂದರು.

ವೇದಿಕೆಯಲ್ಲಿ ಮಂಗಳೂರು ಜೈನ್ ಟ್ರಾವೆಲ್ಸ್ ನ ರತ್ನಾಕರ್ ಜೈನ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹರೀಶ್ ಕಂಜಿಪಿಲಿ, ಅನಿತಾ ಸುರೇಂದ್ರ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಮರ್ಕಂಜದ ವೈದ್ಯರಾದ ಡಾ. ನಿತೀಶ್ ಕೆ.ಯವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಜೈನ ಕಾಲೇಜು ಮೂಡಬಿದಿರೆ ಇದರ ಪ್ರಾಂಶುಪಾಲ ಡಾ| ಪ್ರಭಾತ್ ಬಲ್ನಾಡು ಕಾರ್ಯಕ್ರಮ ನಿರ್ವಹಿಸಿದರು. ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಪದ್ಮನಾಭ ಜೈನ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವಾರ್ಷಿಕೋತ್ಸವ ಸಮಿತಿ ಕಾರ್ಯದರ್ಶಿ ವಿದ್ಯಾ ಕುಮಾರ್ ವಂದಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮ : ಮೇ.11ರಂದು ರಾತ್ರಿ ಯಕ್ಷಗಾನ ಮತ್ತು ನೃತ್ಯ ವೈವಿಧ್ಯ – ಶ್ರೀ ಜಿನವರಿತಾಮೃತ ನಡೆಯಿತು. ಅದಕ್ಕೂ ಮೊದಲು ಸನ್ಮಾನ ಕಾರ್ಯಕ್ರಮ ನೆರವೇರಿತು.

ಸಭಾಕಾರ್ಯಕ್ರಮದಲ್ಲಿ ಶ್ರೀ ಧ. ಗ್ರಾ. ಯೋಜನೆಯ ಯೋಜನಾಧಿಕಾರಿ ಮಾಧವ ಗೌಡರವರನ್ನು ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಸಲಾಯಿತು.

ಅಧ್ಯಕ್ಷತೆಯನ್ನು ಆಡಳಿತ ಸಮಿತಿ ಅಧ್ಯಕ್ಷ ನಾಗಕುಮಾರ್ ಶೆಟ್ಟಿ ವಹಿಸಿದ್ದರು. ವೇದಿಕೆಯಲ್ಲಿ ಆಡಳಿತ ಮಂಡಳಿ ಕೋಶಾಧಿಕಾರಿ ಶುಭಾಶ್ಚಂದ್ರ ಶೆಟ್ಟಿ, ಗೊಳಿಯಡ್ಕ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಕೃಷ್ಣರಾಜ ಶೆಟ್ಟಿ, ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷ ಪ್ರದೀಪ್ ಜೈನ್, ಪಂಚಕಲ್ಯಾಣ ಪುರೋಹಿತರಾದ ಪುಷ್ಪ ರಾಜೇಂದ್ರ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಮೇಲ್ವಿಚಾರಕರಾದ ಹರೀಶ್ ಆಚಾರ್ಯ, ಒಕ್ಕೂಟದ ಮಾಜಿ ಅಧ್ಯಕ್ಷ ಜನಾರ್ಧನ ಗೌಡ, ಪ್ರತಿನಿಧಿ ರೋಹಿಣಿ ಅಂಗಡಿಮಜಲು ರವರನ್ನು ಗೌರವಿಸಲಾಯಿತು.

ಪದ್ಮನಾಭ ಜೈನ್ ಪ್ರಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು. ಡಾ. ಪ್ರಭಾತ್ ಬಲ್ನಾಡು ವಂದಿಸಿದರು.

ಪ್ರತಿಷ್ಠಾ ವಾರ್ಷಿಕೋತ್ಸವದ ಪ್ರಯುಕ್ತ ಬಸದಿಯನ್ನು ವಿದ್ಯುತ್ ದೀಪ ಮತ್ತು ಹೂವಿನಿಂದ ಅಲಂಕರಿಸಲಾಗಿತ್ತು. 3 ದಿನವೂ ಅನ್ನಸಂತರ್ಪಣೆ ನಡೆದಿತ್ತು.