ಶರತ್ ಜೋಶಿ ಸಂಸ್ಮರಣೆ – ಪುಸ್ತಕ ವಿತರಣೆ

0

ಪ್ರಕೃತಿಯ ನಡುವೆಯೇ ಕಲಿಸುವುದು ಶಿಕ್ಷಣ – ಡಾ. ನರೇಂದ್ರ ರೈ ದೇರ್ಲ

ಇಂದು ನಾವು ನಿಸರ್ಗದ ಸೂಕ್ಷ್ಮತೆಯನ್ನು ಕಳೆದುಕೊಂಡು ಮಕ್ಕಳನ್ನು ಕೇವಲ ಯಂತ್ರ ಮಾನವರನ್ನಾಗಿ ಬೆಳೆಸುತ್ತಿದ್ದೇವೆ. ನೆಲ, ಜಲ, ಮಣ್ಣುಗಳಲ್ಲಿ ವಿಷ ಸೇರಿಕೊಂಡರೂ ಅದರ ಗoಭೀರತೆಯನ್ನು ವಿದ್ಯಾರ್ಥಿಗಳಿಗೆ ತಾರದೆ, ಪಾಸ್ಟಿಕ್ ಮುಕ್ತ ಸಮಾಜ ಕಾಣಲು ಅಸಾಧ್ಯ. ಹಸಿರಿನ, ನಿಸರ್ಗದ ಸಂಬಂಧಗಳನ್ನು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿ, ಪರಿಸರವನ್ನು ರಕ್ಷಿಸುವ ಕೆಲಸದಲ್ಲಿ ಕೈ ಜೋಡಿಸಬೇಕೆಂದು ಸಂಪನ್ಮೂಲ ವ್ಯಕ್ತಿ ಡಾ. ನರೇಂದ್ರ ರೈ ಅಭಿಪ್ರಾಯಪಟ್ಟರು. ಅವರು ಶರತ್ ಜೋಶಿ ಸ್ಮರಣಾರ್ಥ ಅವರ 3ನೇ ವರ್ಷದ ಪುಣ್ಯತಿಥಿಯ ಅಂಗವಾಗಿ ಶರತ್ ಜೋಶಿ ಮೆಮೋರಿಯಲ್ ಟ್ರಸ್ಟ್ ಬೆಳ್ಳಾರೆ ಮತ್ತು ಶ್ರೀ ಸದಾಶಿವ ಚಾರಿಟೇಬಲ್ ಸೊಸೈಟಿ ಬೆಳ್ಳಾರೆ ಇದರ ಜಂಟಿ ಆಶ್ರಯದಲ್ಲಿ ನಡೆದ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಣೆ ಮತ್ತು ಮಾಹಿತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಬೆಳ್ಳಾರೆ ಆರಕ್ಷಕ ಠಾಣೆಯ ಉಪನಿರೀಕ್ಷಕ ಈರಯ್ಯ ದೂoತೂರು ಮಾತನಾಡಿ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ವಂಚಕರ ಬಗ್ಗೆ ಜಾಗೃತಿ ವಹಿಸುವುದು, ಮೊಬೈಲ್ ಆ್ಯಪ್ ಬಳಸಿ ಹಣ ಲಪಟಾವಣೆ ಇತ್ಯಾದಿ ಸಂದರ್ಭದಲ್ಲಿ ಇಲಾಖೆಗೆ ತುರ್ತು ಕರೆಯನ್ನು ನೀಡುವ ಬಗ್ಗೆ ಮಾಹಿತಿ ನೀಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಂಸ್ಥೆಯ ಎಸ್.ಡಿ.ಎಂ.ಸಿ. ಕಾರ್ಯಧ್ಯಕ್ಷ ಹರ್ಷ ಜೋಗಿಬೆಟ್ಟು, ಗೌರವ ಉಪಸ್ಥಿತರಿದ್ದ ಸಂಸ್ಥೆಯ ಪ್ರಾಂಶುಪಾಲರಾದ ಕೆ.ಎನ್. ಜನಾರ್ಧನ, ಕೆ.ಪಿ.ಎಸ್.ಪ್ರಾಂಶುಪಾಲೆ ಉಮಾಕುಮಾರಿ ಮತ್ತು ಮುಖ್ಯ ಶಿಕ್ಷಕ ಮಾಯಿಲಪ್ಪ ಜಿ ಯವರು ಕಾರ್ಯಕ್ರಮಕ್ಕೆ ಶ್ಲಾಘನೆ ವ್ಯಕ್ತ ಪಡಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎರಡೂ ಸಂಸ್ಥೆಯ ಅಧ್ಯಕ್ಷರಾಗಿರುವ ಬಿ. ಸುಬ್ರಹ್ಮಣ್ಯ ಜೋಶಿ ವಹಿಸಿ, ಸ್ವಾಗತಿಸಿ ಪ್ರಸ್ತಾವನೆಗೈದರು. ಕೆ.ಪಿ.ಎಸ್ ನ ಪ್ರಾಥಮಿಕ, ಹೈಸ್ಕೂಲ್ ಹಾಗೂ ಪಿಯುಸಿ ವಿಭಾಗದ ಸುಮಾರು 175 ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕವನ್ನು ವಿತರಿಸಲಾಯಿತು. ಬೆಳ್ಳಾರೆ ಶ್ರೀ ಸದಾಶಿವ ಚಾರಿಟೇಬಲ್ ಸೊಸೈಟಿಯ ಕಾರ್ಯದರ್ಶಿ ಶ್ರೀರಾಂ ಪಾಟಾಜೆ ವಂದಿಸಿದರು. ಶಾಲಾ ದೈಹಿಕ ಶಿಕ್ಷಕಿ ಪುಷ್ಪಲತಾ ಕಾರ್ಯಕ್ರಮ ನಿರೂಪಿಸಿದರು.