ಸುಳ್ಯ ನಗರದ ಕಸ ವಿಲೇವಾರಿ, ಕ್ರೀಡಾ ವಸತಿ ಶಾಲೆಯಲ್ಲಿರುವ ಸೌಲಭ್ಯ , ಎಲ್ಲ ನಿವೃತ್ತ ಯೋಧರಿಗೆ ಮನೆ ನಿವೇಶನ

0

ಜಿಲ್ಲಾ ಕೆ.ಡಿ.ಪಿ. ಸಭೆಯಲ್ಲಿ ಸದಸ್ಯೆ ಸುಜಯಕೃಷ್ಣ ಚರ್ಚೆ

ದ.ಕ. ಜಿಲ್ಲಾ ಕೆ.ಡಿ.ಪಿ. ಸಭೆಯು ಸೆ.15 ರಂದು ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಭವನದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾ ಸಚಿವ ಯು.ಟಿ.ಖಾದರ್ ರವರ ಅಧ್ಯಕ್ಷತೆಯಲ್ಲಿ ಸಭೆ ನಡೆದಾಗ ಜಿಲ್ಲಾ ಕೆ.ಡಿ.ಪಿ. ಸದಸ್ಯರಾದ ಶ್ರೀಮತಿ ಸುಜಯಕೃಷ್ಣರವರು ಸುಳ್ಯ ತಾಲೂಕಿಗೆ ಸಂಬಂಧಿಸಿದ ಹಲವು ವಿಚಾರಗಳ ಕುರಿತು ಪ್ರಸ್ತಾಪಿಸಿ ಚರ್ಚೆ ನಡೆಸಿದರು.


” ಸುಳ್ಯ ಪಟ್ಟಣ ಪಂಚಾಯತ್ ವ್ಯಾಪ್ತಿಯ ಘನತ್ಯಾಜ್ಯಗಳನ್ನು ಪಟ್ಟಣ ಪಂಚಾಯತ್ ಕಚೇರಿ ಮುಂಭಾಗದ ಶೆಡ್ ನಲ್ಲಿ ಶೇಖರಣೆ ಮಾಡಿ ಇಟ್ಟಿದ್ದಾರೆ. ಅದನ್ನು ವಿಲೇವಾರಿ ಮಾಡದೆ ಯಾವ ಕ್ರಮ ವಿಲೇವಾರಿ ಮಾಡಲು ಯಾಕೆ ಕ್ರಮ ಕೈತೆಗೆದುಕೊಂಡಿಲ್ಲ ? ” ಎಂದು ಶ್ರೀಮತಿ ಸುಜಯ ಕೃಷ್ಣರವರು ಕೇಳಿದಾಗ ಸಚಿವರು, ಸಭೆಯಲ್ಲಿ ಉಪಸ್ಥಿತರಿದ್ದ ಸುಳ್ಯ ನ.ಪಂ.ಮುಖ್ಯಾಧಿಕಾರಿಯವರನ್ನು ಪ್ರಶ್ನಿಸಿದರು. ” ಅಲ್ಲಿ ಒಣ ಕಸವನ್ನು ಮಾತ್ರ ಹಾಕುತ್ತೇವೆ. ಹಸಿ ಕಸವನ್ನು ಸಿಮೆಂಟ್ ಫ್ಯಾಕ್ಟರಿಗೆ ಕಳುಹಿಸಿದ್ದೇವೆ” ಎಂದು ಮುಖ್ಯಾಧಿಕಾರಿ ಉತ್ತರಿಸಿದರು.

” ಕಸ ವಿಲೇವಾರಿಗೆ 4.20 ಎಕ್ರೆ ಜಾಗ ಮಂಜೂರಾಗಿದ್ದು, ತಹಶಿಲ್ದಾರರರಿಂದ ಸರ್ವೆ ಮಾಡಲಾಗಿ ತಂತಿಬೇಲಿ ಮಾಡಿದ್ದೇವೆ” ಎಂದು ಮುಖ್ಯಾಧಿಕಾರಿ ಹೇಳಿದಾಗ, ” ಅಲ್ಲಿಗೆ ಕಸ ಕೊಂಡೊಯ್ದು ಯಾಕೆ ಹಾಕಿಲ್ಲ ” ಎಂದು ಅಧ್ಯಕ್ಷರು ಕೇಳಿದಾಗ ” ಸಮತಟ್ಟು ಆದ ಜಾಗ ಅಲ್ಲದ ಕಾರಣ ಹಾಕಲಿಲ್ಲ” ಎಂದು ಅಧಿಕಾರಿ ಹೇಳಿದರು.

” ಸುಳ್ಯ ತಾಲೂಕು ಕಲ್ಚೆರ್ಪೆ ಎಂಬಲ್ಲಿ ಕಸವನ್ನು ರಾಶಿ ಹಾಕಿ ಬರ್ನಿಂಗ್ ಮಾಡಲಾಗುತ್ತಿತ್ತು. ಪ್ರಸ್ತುತ ಇದರ ಮಿಶಿನ್ ಹಾಳಾಗಿರುತ್ತದೆ. ಇದನ್ನು ದುರಸ್ತಿ ಪಡಿಸಿರುವುದಿಲ್ಲ” ಎಂದು ಶ್ರೀಮತಿ ಸುಜಯಕೃಷ್ಣ ತಿಳಿಸಿದಾಗ ” ಕಸವನ್ನು ಬರ್ನ್ ಮಾಡುವುದರಿಂದ ಉಂಟಾಗುವ ಹೊಗೆಯಿಂದಾಗಿ ಕಾಯಿಲೆಗಳು ಹರಡುವ ಸಾಧ್ಯತೆ ಇರುವ ಬಗ್ಗೆ ಅಲ್ಲಿನ ಸಾರ್ವಜನಿಕ ರು ಪೊಲ್ಯೂಷನ್ ಕಂಟ್ರೋಲ್ ಬೋರ್ಡಿಗೆ ಅರ್ಜಿ ಸಲ್ಲಿಸಿದ್ದಾರೆ. ಪ್ರಸ್ತುತ ಹಸಿ ಕಸವನ್ನು ಸಿಮೆಂಟ್ ಕಾರ್ಖಾನೆಗೆ ನೀಡಲಾಗುತ್ತಿದೆ” ಎಂದು ಸುಳ್ಯ ನಗರ ಪಂಚಾಯತ್ ಮುಖ್ಯಾಧಿಕಾರಿ ಮಾಹಿತಿ ನೀಡಿದರು.

” ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಲಾರೆ ತಿಮಲಡ್ಕ ಜನ ವಸತಿ ಪ್ರದೇಶದಲ್ಲಿ ನಿರ್ಮಾಣ ಮಾಡುತ್ತಿರುವ ಘನತ್ಯಾಜ್ಯ ಸಂಸ್ಕರಣ ಘಟಕ ಸ್ಥಾಪನೆಗೆ ಕಾನೂನು ಆಧಾರಿತ ವಿರೋಧ ವಿರುತ್ತದೆ. ಈ ಬಗ್ಗೆ ಪ್ರತಿಭಟನೆಗಳು ನಡೆಯುತ್ತಿದ್ದು ಸಂಬಂಧಪಟ್ಟ ಇಲಾಖೆಗಳಿಗೆ ಹಾಗೂ ಜಿಲ್ಲಾಧಿಕಾರಿಯವರಿಗೆ ದೂರು ನೀಡಲಾಗಿರುತ್ತದೆ. ಸದ್ರಿ ಘಟಕವನ್ನು ಜನ ವಸತಿ ಇಲ್ಲದ ಪ್ರದೇಶಕ್ಕೆ ವರ್ಗಾವಣೆ ಮಾಡಬೇಕು” ಎಂದು ಸುಜಯ ಕೃಷ್ಣರು ಹೇಳಿದಾಗ ” ಈ ಬಗ್ಗೆ ಪರಿಶೀಲನೆ ನಡೆಸುವಂತೆ ” ಸಭಾಧ್ಯಕ್ಷರು ಸೂಚಿಸಿದರು.

” ಉರ್ವದಲ್ಲಿ ಕ್ರೀಡಾ ವಸತಿ ನಿಲಯದಲ್ಲಿ ಎಷ್ಟು ಮಕ್ಕಳಿದ್ದಾರೆ ? ಅವರಿಗೆ ಸರಕಾರದ ಮಾನದಂಡದಂತೆ ಆಹಾರ ಮತ್ತು ಮೂಲ ಸೌಕರ್ಯ ಸಿಗುತ್ತಿದೆಯಾ? ಉದಾಹರಣೆಗೆ ಈಗಾಗಲೇ ಸರಕಾರ ಆದೇಶಿಸಿದಂತೆ ಆಹಾರದಲ್ಲಿ ಮಟನ್‌, ಡ್ರೈ ಫ್ರೂಟ್ಸ್‌, ಎಗ್ ಇತ್ಯಾದಿ ಬೇರೆ ಬೇರೆ ಮೆನು ಇದೆಯಾ? ಕ್ರೀಡಾಪಟುಗಳಿಗೆ ಹಾಗೆ ಸ್ಪೋರ್ಟ್ಸ್‌, ಬಟ್ಟೆ, ಶೂಸ್‌, ಸ್ಕಾಲರ್‌ಶಿಪ್ ಸೌಕರ್ಯಗಳು ಸಿಗುತ್ತಿದೆಯಾ? ಹಾಗೆಯೇ ಅಲ್ಲಿ ಡಾಕ್ಟರ್‌ರನ್ನು ಕೂಡ ನೇಮಿಸಬೇಕು” ಎಂದು ಸುಜಯ ಕೃಷ್ಣ ಹೇಳಿದರು. ಅಧ್ಯಕ್ಷರು ಇದರ ಬಗ್ಗೆ ಮಾಹಿತಿ ಕಲೆ ಹಾಕಿ ಮುಂದಿನ ವ್ಯವಸ್ಥೆ ಮಾಡುವ ಎಂದರು.

” ದಕ್ಷಿಣ ಕನ್ನಡದಲ್ಲಿ ಬಂದೂಕು ಇನ್ನು ಮುಂದೆ ರಿನಿವಲ್ ಆಗುವುದಿಲ್ಲ. ಅದಕ್ಕೆ ಹೊಸದಾಗಿ ಅರ್ಜಿ ಸಲ್ಲಿಸಿ ಲೈಸನ್ಸ್‌ ಪಡೆಯಬೇಕೆಂಬ ಕಾನೂನು ಬಂದಿದೆಯಂತೆ. ಆದರೆ ನಿವೃತ್ತಿ ಹೊಂದಿದ ಯೋಧರ ಬಂದೂಕಿಗೆ ಆ ಕಾನೂನು ತರಬೇಡಿ. ದೇಶಸೇವೆ ಮಾಡಿ ನಿವೃತ್ತಿ ಹೊಂದಿದ ಮೇಲೆ ಬ್ಯಾಂಕ್‌ ಮತ್ತು ಇನ್ನಿತರ ಪ್ರೈವೇಟ್‌ ಕಂಪೆನಿಗಳಲ್ಲಿ ಗನ್‌ ಹಿಡಿದು ಕೆಲಸ ಮಾಡುವವರು ಇದ್ದಾರೆ. ಅದಕ್ಕಾಗಿ ಅವರು ಸ್ವಂತ ಗನ್‌ ತಕೊಂಡು ಹೋಗಿ ಕೆಲಸ ಮಾಡಬೇಕು. ಹಾಗಿರುವಾಗ ನಿವೃತ್ತ ಯೋಧರ ಗನ್‌ ಲೈಸೆನ್ಸ್‌ ಕ್ಯಾನ್ಸಲ್‌ ಮಾಡಬಾರದು” ಎಂದು ಸುಜಯ ಕೃಷ್ಣ ಒತ್ತಾಯಿಸಿದರು.

ಅದಕ್ಕೆ ಉತ್ತರವಾಗಿ ಪೋಲಿಸ್‌ ಅಧೀಕ್ಷಕರು ” ನಾವು ನಿವೃತ್ತ ಯೋಧರ ಗನ್‌ ಲೈಸೆನ್ಸ್‌ ಕ್ಯಾನ್ಸಲ್‌ ಮಾಡುವುದಿಲ್ಲ. ಇದಕ್ಕೆ ಮೊದಲೂ ಮಾಡಿಲ್ಲ, ಮುಂದೆಯೂ ಮಾಡಲ್ಲ” ಎಂದು ಹೇಳಿದರು.

” ಎರಡು ವರ್ಷದಿಂದ ಈಚೆಗೆ ನಿವೃತ್ತಿ ಹೊಂದಿ ಬಂದ ಯೋಧರಿಗೆ ನಿವೇಶನ ಕೊಡುವ ಕಾನೂನು ತಂದಿದ್ದಾರೆ. ಈ ಕಾನೂನು ಸರಿ ಇಲ್ಲ. ಮೊದಲು ನಿವೃತ್ತಿ ಹೊಂದಿ ಬಂದ ಯೋಧರು ಕೂಡ ದೇಶ ಸೇವೆ ಮಾಡಿ ಬಂದವರು. ಹಾಗಿರುವಾಗ ಎಲ್ಲಾ ಯೋಧರಿಗೆ ನಿವೇಶನ ಕೊಡುವ ಕಾನೂನು ತರಬೇಕು. ನಿವೃತ್ತ ಯೋಧರಿಗೆ ಬಸ್ ಫ್ರೀ ಮಾಡಬೇಕು” ಎಂದು ಹೇಳಿದರು. ” ಸರಕಾರದ ಗಮನಕ್ಕೆ ತರುತ್ತೇವೆ” ಎಂದು ಅಧ್ಯಕ್ಷರು ಹೇಳಿದರು.